Advertisement

ನೀರಿನ ಸರಿಯಾದ ಬಳಕೆ ಬಗ್ಗೆ ತಿಳಿವಳಿಕೆ ಅಗತ್ಯ; ಜಲತಜ್ಞ ರಾಜೇಂದ್ರಸಿಂಗ್‌

06:09 PM Nov 07, 2023 | Team Udayavani |

ಗದಗ: ನಮ್ಮ ದೇಶ ಇಂದು ಬಹಳ ಸಂಕಷ್ಟದಲ್ಲಿದೆ. ಒಂದು ಕಡೆ ಬರಗಾಲ, ಒಂದು ಕಡೆ ಪ್ರವಾಹ ಪರಿಸ್ಥಿತಿ ಎದುರಾಗುತ್ತಿದೆ. ನೀರಿನ ಬಗ್ಗೆ ನಮಗೆ ಸರಿಯಾದ ತಿಳಿವಳಿಕೆ ಇಲ್ಲದೇ ಇರುವುದೇ ಪ್ರಮುಖ ಕಾರಣವಾಗಿದೆ ಎಂದು ಜಲತಜ್ಞ, ಮ್ಯಾಗ್ಸೆಸ್ಸೆ ಪುರಸ್ಕೃತ
ರಾಜೇಂದ್ರಸಿಂಗ್‌ ಹೇಳಿದರು.

Advertisement

ನಗರದ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯಲ್ಲಿ ಜಲಸಂರಕ್ಷಣೆ ಕುರಿತು ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀರನ್ನು ನಾವು ಜಾಗೃತಿಯಿಂದ ಬಳಸದೇ ಇರುವುದರಿಂದ ಇಂದು ನಮಗೆ ನೀರಿನ ಕೊರತೆ ಉಂಟಾಗಿದೆ ಎಂದು ಹೇಳಿದರು.

1947ರಂದು ನಮಗೆ ಸ್ವಾತಂತ್ರ್ಯ ದೊರೆತಾಗ ನಮ್ಮ ದೇಶದಲ್ಲಿ ಕೇವಲ ಶೇ. 4ರಷ್ಟು ಭೂಮಿ ಮಾತ್ರ ಬರಪೀಡಿತವಾಗಿತ್ತು. ಶೇ. 1ರಷ್ಟು ಭೂಮಿ ಪ್ರವಾಹ ಪೀಡಿತವಾಗಿತ್ತು. ಆದರೆ ಇಂದು ನಮ್ಮ ದೇಶದ ಶೇ. 40ರಷ್ಟು ಭೂಮಿ ಪ್ರವಾಹ ಪೀಡಿತ, ಶೇ. 72ರಷ್ಟು ಪ್ರದೇಶ ಬರಪೀಡಿತವಾಗಿದೆ ಎಂದರು.

ಗದಗ ಜಿಲ್ಲೆಯು ಉತ್ತಮ ಪ್ರದೇಶವಾಗಿದ್ದು, 2ರಿಂದ 3 ಬಾರಿ ಸಾಕಷ್ಟು ಮಳೆ ಬರುತ್ತದೆ. ಆದರೆ, ನೀರನ್ನು ಸರಿಯಾಗಿ ಬಳಕೆ ಮಾಡದೇ, ಸಂರಕ್ಷಣೆ ಮಾಡದೇ ಇರುವುದರಿಂದ ರಾಜಸ್ಥಾನಗಿಂತ 3 ಪಟ್ಟು ಮಳೆ ಆಗುತ್ತಿದ್ದರೂ, 600 ಮಿಲಿಮೀಟರ್‌ಗಿಂತ ಹೆಚ್ಚು ಮಳೆಯಾದರೂ ನಿಮ್ಮಲ್ಲಿ ನೀರಿನ ಕೊರತೆ ತುಂಬಾ ಇದೆ. ಆದರೆ, ರಾಜಸ್ಥಾನದಲ್ಲಿ ಇಂತಹ ಪರಿಸ್ಥಿತಿ ಇಲ್ಲ
ಎಂದು ಹೇಳಿದರು.

ಗದಗ ಜಿಲ್ಲೆ ಮತ್ತು ರಾಜಸ್ಥಾನ ರಾಜ್ಯವನ್ನು ಹೋಲಿಸಿ ನೋಡಿದಾಗ ನಾನು 1984ನೇ ಇಸ್ವಿಯಲ್ಲಿ ನಮ್ಮಲ್ಲಿ ನೀರು ಇರದೇ ಇರುವ ಕಾರಣ ಬೇರೆ ಬೇರೆ ಪ್ರದೇಶಕ್ಕೆ ಜನ ವಲಸೆ ಹೋಗುತ್ತಿದ್ದರು. ಎಲ್ಲಿ ನೀರಿನ ಕೊರತೆ ಇದೆಯೋ ಅಲ್ಲಿ ಆಹಾರವಿಲ್ಲ. ಭವಿಷ್ಯವಿಲ್ಲ.
ನೀರು ಎಲ್ಲದಕ್ಕೂ ಆಧಾರ. ಇವತ್ತು ನಮ್ಮ ಕರ್ನಾಟಕ ಸರಕಾರ ಕರ್ನಾಟಕದಲ್ಲಿರುವ 236 ಬ್ಲಾಕ್‌ಗಳಲ್ಲಿ 216 ಬ್ಲಾಕ್‌ಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ. ಇದು ನಮ್ಮ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದರು.

Advertisement

ನಮ್ಮ ವಿಜ್ಞಾನ-ತಂತ್ರಜ್ಞಾನ ಇಂದು ನಮಗೆ ಉಪಯೋಗವಾಗುತ್ತಿಲ್ಲ. ಅಭಿವೃದ್ಧಿಗೆ ಸಹಾಯ ಮಾಡುತ್ತಿಲ್ಲ. ಏಕೆಂದರೆ, ಈ ವಿಜ್ಞಾನ-ತಂತ್ರಜ್ಞಾನವನ್ನು ಬಳಸಿ ನಾವು ಭೂಮಿಯ ಅಂತರಾಳದಲ್ಲಿ ಹೋಗುತ್ತ ಎಲ್ಲ ನೀರನ್ನು ಅಂತರಾಳದಿಂದ ಮೇಲೆ ತಂದು ಅಂತರ್ಜಲ ಮಟ್ಟ ಹಾಳಾಗಿ ಹೋಗಿದೆ. ಈಗ ನಮ್ಮ ಭೂಮಿ ಬರಡಾಗಿದೆ. ಭೂಮಿಯ ಒಳಗೆ ನೀರಿಲ್ಲ ಏಕೆಂದರೆ, ನಾವು ಭೂಮಿ, ಜಲ, ಆಗಸ, ವಾಯು, ಅಗ್ನಿ ಇವುಗಳನ್ನು ಪ್ರೀತಿಸುವುದನ್ನು ಬಿಟ್ಟಿದ್ದೇವೆ. ಈ ಪಂಚಮಹಾ ಭೂತಗಳು ದೇವರುಗಳಾಗಿವೆ. ಭ ಎಂಬ ಅಕ್ಷರದಿಂದ ಭಗವಂತ, ಭೂ ದಿಂದ ಭೂಮಿ, ಗ ದಿಂದ ಗಗನ, ವ ದಿಂದ ವಾಯು, ನ ದಿಂದ ನದಿ, ಅ ದಿಂದ ಅಗ್ನಿ, ಈ ಪಂಚಮಹಾ ಭೂತಗಳೇ ನಿಸರ್ಗ, ಇದುವೇ ನಿಜವಾದ ದೇವರು. ಇವುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಮಾಜಿ ಶಾಸಕ ಡಿ.ಆರ್‌. ಪಾಟೀಲ ಮಾತನಾಡಿ, ಇಂದು ನೀರಿನ ಅವಶ್ಯಕತೆ ನಮ್ಮ ಬದುಕನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ನೀರಿನ ಬಗ್ಗೆ ಜನರಲ್ಲಿ ತಿಳಿವಳಿಕೆ ಕಡಿಮೆ ಇದೆ. ಇದ್ದ ತಿಳಿವಳಿಕೆಯನ್ನಯನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಿಲ್ಲ ಎಂದರು.

ವಿದ್ಯಾದಾನ ಸಮಿತಿ ನಿವೃತ್ತ ಪ್ರಾಚಾರ್ಯ ಜೆ.ಕೆ. ಜಮಾದರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಎ.ಎನ್‌. ನಾಗರಹಳ್ಳಿ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ ಹೂಗಾರ, ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಸ್‌.ವೈ. ಚಿಕ್ಕಟ್ಟಿ ಇದ್ದರು. ವಿನಯ್‌ ಚಿಕ್ಕಟ್ಟಿ ಸ್ವಾಗತಿಸಿದರು. ಹೇಮಲತಾ ಕರಡಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next