Advertisement

ಪರಿಷತ್‌ನಲ್ಲಿ ಕೋಲಾಹಲ ಸೃಷ್ಟಿಸಿದ ಧಿಕ್ಕಾರ

09:17 AM Mar 05, 2020 | Lakshmi GovindaRaj |

ವಿಧಾನಪರಿಷತ್‌: ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ನೀಡಿರುವ ಹೇಳಿಕೆ ಕುರಿತು ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷ ಕಾಂಗ್ರೆಸ್‌ ಮಂಗಳವಾರವೂ ಧರಣಿ ನಡೆಸಿದ್ದರಿಂದ ಸತತ ಎರಡನೇ ದಿನವೂ ವಿಧಾನಪರಿಷತ್‌ನಲ್ಲಿ ಕಲಾಪ ನಡೆಯಲಿಲ್ಲ.

Advertisement

ಕಲಾಪದ ಆರಂಭದಲ್ಲೇ ಪ್ರತಿಪಕ್ಷ ನಾಯಕ ಎಸ್‌.ಆರ್‌. ಪಾಟೀಲ್‌ ವಿಷಯ ಪ್ರಸ್ತಾಪಿಸಿ, ಮಾಜಿ ಸದಸ್ಯ ರೊಬ್ಬರು ದೊರೆಸ್ವಾಮಿ ಬಗ್ಗೆ ನೀಡಿದ ಅವಹೇಳನಕಾರಿ ಹೇಳಿಕೆಯಿಂದ ಸಂವಿಧಾನಕ್ಕೆ ಅಪಚಾರವಾಗಿದೆ. ಇದು ಸ್ವಾತಂತ್ರ್ಯ ಹೋರಾಟಗಾರರಿಗೇ ಮಾಡಿದ ಅವಮಾನ ಎಂದು ಆರೋಪಿಸಿ, ನಿಯಮ 342ರಡಿ ಚರ್ಚೆಗೆ ಅವಕಾಶ ಕೋರಿದರು. ಇದಕ್ಕೆ ಸಭಾಪತಿಗಳು ಅನುಮತಿ ನೀಡಿದರು.

ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಹೋರಾಟಗಾರರು ಬಲಿ ಆಗಿದ್ದಾರೆ. ಶಿಕ್ಷೆ ಕೂಡ ಅನುಭವಿಸಿದ್ದಾರೆ. ಅವರಲ್ಲಿ ದೊರೆಸ್ವಾಮಿ ಕೂಡ ಇದ್ದಾರೆ. 1942-1943ರ ಅವಧಿಯಲ್ಲಿ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಅಂತವರ ವಿರುದ್ಧದ ಹೇಳಿಕೆ ಖಂಡನೀಯ. ಇದು ಇಡೀ ಸ್ವಾತಂತ್ರ್ಯ ಹೋರಾಟಗಾರರ ಸಮೂಹಕ್ಕೆ ಮಾಡಿದ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಸದಸ್ಯ ಐವನ್‌ ಡಿಸೋಜ ಮಾತನಾಡಿ, ಒಂದೆಡೆ ದೊರೆಸ್ವಾಮಿ ಬಗ್ಗೆ ಮಾಜಿ ಸದಸ್ಯರೊಬ್ಬರು ಅವಹೇಳನಕಾರಿಯಾಗಿ ಹೇಳಿಕೆ ನೀಡುತ್ತಾರೆ. ಮತ್ತೂಂದೆಡೆ, ಸಚಿವರೊಬ್ಬರು ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ಸಣ್ಣ ಪುಟ್ಟ ಘಟನೆಗಳಲ್ಲೂ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುವ ಪೊಲೀಸರು, ಈ ವಿಚಾರದಲ್ಲಿ ಯಾಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದರು.

ಈ ವೇಳೆ, ಮಧ್ಯ ಪ್ರವೇಶಿಸಿದ ಸದಸ್ಯ ರವಿಕುಮಾರ್‌, “ದೇಶದ ಜನರಿಂದ ಆಯ್ಕೆಯಾದ ಪ್ರಧಾನಿಯನ್ನು ಕೊಲ್ಲಿ ಎಂದು ಹೇಳಿಕೆ ನೀಡಲು ದೊರೆಸ್ವಾಮಿಗೆ ನಾಚಿಕೆ ಆಗಬೇಕು. ಅವರಿಗೆ ನನ್ನ ಧಿಕ್ಕಾರ’ ಎಂದರು. ಈ ಹೇಳಿಕೆ ಕಿಡಿ ಹೊತ್ತಿಸಿತು. ಇದನ್ನು ಆಕ್ಷೇಪಿಸಿದ ಜೆಡಿಎಸ್‌ ಸದಸ್ಯ ಬಸವರಾಜ ಹೊರಟ್ಟಿ, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಈ ರೀತಿಯ ಹೇಳಿಕೆ ಸಲ್ಲದು. ರವಿಕುಮಾರ್‌ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉಳಿದೆಲ್ಲ ಸದಸ್ಯರು ಧ್ವನಿಗೂಡಿಸಿದರು.

Advertisement

“ಹಿರಿಯರ ತಪ್ಪಿಗೆ ಕ್ಷಮೆ ಕೇಳಿ’: ಆಗ ಮಧ್ಯ ಪ್ರವೇಶಿಸಿದ ಸಚಿವ ಸಿ.ಟಿ. ರವಿ, ಜಯಪ್ರಕಾಶ್‌ ನಾರಾಯಣ (ಜೆಪಿ) ಕೂಡ ಸ್ವಾತಂತ್ರ್ಯ ಹೋರಾಟಗಾರರು. ಆದರೆ, ಅವರನ್ನು ಇದೇ ಕಾಂಗ್ರೆಸ್‌ ಸರ್ಕಾರ ಅಂದು ಜೈಲಿಗೆ ಕಳಿಸಿತ್ತು. ಹಾಗಾಗಿ, “ನಮ್ಮ ಹಿರಿಯರು ಮಾಡಿದ್ದು ತಪ್ಪು ಎಂದು ಕ್ಷಮೆ ಕೇಳಿ’ ಎಂದು ಕಾಲೆಳೆದರು.

ಇದಕ್ಕೆ ದನಿಗೂಡಿಸಿದ ಇತರ ಸದಸ್ಯರು, ವೀರ ಸಾವರ್ಕರ್‌ ಅವರನ್ನು ಹೇಡಿ ಎಂದಿದ್ದಕ್ಕೂ ಕ್ಷಮೆ ಕೇಳುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ ಗೊಂದಲ ಉಂಟಾಗಿ, ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ಸದನವನ್ನು ಎರಡು ತಾಸು ಮುಂದೂಡಿದರು.

ಕ್ರಿಯಾಲೋಪ ಎತ್ತಿದ ಶ್ರೀಕಂಠೇಗೌಡ: ಜೆಡಿಎಸ್‌ ಸದಸ್ಯ ಶ್ರೀಕಂಠೇಗೌಡ, ನಿಯಮ 342ರಡಿ ನಡೆದ ಚರ್ಚೆಯಲ್ಲಿ ಅನುಮತಿ ನೀಡದಿದ್ದರೂ ರವಿಕುಮಾರ್‌ ಮಾತಿಗೆ ಅಡ್ಡಿಪಡಿಸುತ್ತಿದ್ದಾರೆ. ಹೀಗೆ ಧಿಕ್ಕಾರ ಕೂಗಲು ಯಾವ ನಿಯಮದಲ್ಲಿ ಅವಕಾಶ ಇದೆ ಎಂದು ಕ್ರಿಯಾಲೋಪ ಎತ್ತಲು ಮುಂದಾದರು. ಆಗ ತೇಜಸ್ವಿನಿ ಗೌಡ, ಅರುಣ್‌ ಶಹಾಪುರ ಮತ್ತಿತರ ಸದಸ್ಯರು ಮಧ್ಯಪ್ರವೇಶಿಸಲು ಯತ್ನಿಸಿದರು. ಇದರಿಂದ ಕೆರಳಿದ ಪ್ರತಿಪಕ್ಷ ಸದಸ್ಯರು ಬಾವಿಗಿಳಿದು ಪ್ರತಿಭಟಿಸಿದರು.

ದೇಶದ್ರೋಹದ ಘೋಷಣೆ ಕೂಗಿದ ಮಕ್ಕಳ ಜತೆ ಭಾಗವಹಿಸಿದ್ದು, ಪ್ರಧಾನಿ ವಿರುದ್ಧ ಹೇಳಿಕೆ ನೀಡಿರುವವರ ವಿರುದ್ಧ ಸಹಜವಾಗಿ ರವಿಕುಮಾರ್‌ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂತವರಿಗೆ ಬೆಲೆ ಕೊಡಬೇಕೆ?
-ತೇಜಸ್ವಿನಿ ಗೌಡ, ಬಿಜೆಪಿ ಸದಸ್ಯೆ

ದೊರೆಸ್ವಾಮಿಯವರು ಸ್ವಾತಂತ್ರ್ಯವೀರ ಸಾರ್ವಕರ್‌ ಬಗ್ಗೆ ಅವಮಾನಕಾರಿ ಮಾತುಗಳನ್ನು ಹೇಳಿದಾಗ ಯಾರೂ ಪ್ರತಿಭಟಿಸಲಿಲ್ಲ. ಅವರೊಂದಿಗೆ ಗುರುತಿಸಿಕೊಂಡಿದ್ದವರು ಪಾಕಿಸ್ತಾನ ಜಿಂದಾಬಾದ್‌ ಎಂದಾಗಲೂ ಅವರ ಭಾರತದ ಮೇಲಿನ ಪ್ರೀತಿಯನ್ನು ಯಾರೂ ಪ್ರಶ್ನೆ ಮಾಡಿಲ್ಲ. ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ ಮತ್ತು ಸಾವರ್ಕರ್‌ ಏನು ಎಂಬುದನ್ನು ಪುಸ್ತಕಗಳನ್ನು ಓದಿಕೊಂಡು ತಿಳಿದುಕೊಂಡಿದ್ದೇನೆ. ಸಿದ್ಧಾಂತ ಮತ್ತು ವಿಚಾರದ ತಳಹದಿಯಿಂದ ಬೆಳೆದು ಬಂದಿರುವುದರಿಂದ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ.
-ಎನ್‌.ರವಿಕುಮಾರ್‌, ಬಿಜೆಪಿ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next