Advertisement

ಬಿಜೆಪಿ ಕಾರ್ಯಕರ್ತನ ಮೇಲೆ ಚಾಕು ಇರಿತ

10:47 PM Dec 22, 2019 | Lakshmi GovindaRaj |

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯಿದೆ ಪರ ನಡೆದ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದ ಬಿಜೆಪಿ ಕಾರ್ಯಕರ್ತನನ್ನು ಹಿಂಬಾಲಿಸಿದ ನಾಲ್ವರು ದುಷ್ಕರ್ಮಿಗಳು, ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಜೆಸಿ ರಸ್ತೆಯಲ್ಲಿ ಭಾನುವಾರ ನಡೆದಿದೆ.

Advertisement

ದುಷ್ಕರ್ಮಿಗಳಿಂದ ಚಾಕು ಇರಿತಕ್ಕೊಳಗಾಗಿರುವ ಉದ್ಯಮಿ ವರುಣ್‌ ಭೋಪಾಲಮ್‌ ಎಂಬುವವರಿಗೆ (31) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.

ಹಾಡಹಗಲೇ ವರುಣ್‌ ಚಾಕು ಇರಿತಕ್ಕೆ ಒಳಗಾದ ಘಟನೆ ಕಂಡ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದರು. ಚಾಕು ಇರಿತದಿಂದ ಗಾಯಗೊಂಡ ವರುಣ್‌, ಅಲ್ಲಿಯೇ ಕುಸಿದು ಬಿದ್ದರು. ಕಂಟ್ರೋಲ್‌ ರೂಂಗೆ ಬಂದ ಮಾಹಿತಿ ಆಧರಿಸಿ ತಕ್ಷಣವೇ ತೆರಳಿದ ಪೊಲೀಸರು ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ದುಷ್ಕರ್ಮಿಗಳ ಇರಿತದಿಂದ ವರುಣ್‌ ಅವರ ಬೆನ್ನು ಹಾಗೂ ತಲೆಗೆ ಗಾಯಗಳಾಗಿವೆ. ಅವರ ಆರೋಗ್ಯ ಸ್ಥಿರವಾಗಿದ್ದು, ಪ್ರಾಣಾ ಪಾಯವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಘಟನೆ ಬಗ್ಗೆ ಖುದ್ದು ಅವರಿಂದಲೇ ಹೇಳಿಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ಅಪರಿಚಿತರು ಇರಿದಿದ್ದಾಗಿ ಹೇಳಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಆರೋಪಿಗಳ ಬಂಧನಕ್ಕೆ ಒತ್ತಾಯ: ಸಂಸದ ತೇಜಸ್ವಿ ಸೂರ್ಯ ಸೇರಿ ಬಿಜೆಪಿ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ವರುಣ್‌ ಅವರ ಜತೆ ಘಟನೆ ಬಗ್ಗೆ ಚರ್ಚಿಸಿದ್ದು, ಅವರ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು.

Advertisement

ಘಟನೆ ಸಂಬಂಧ ಗಾಯಾಳು ವರುಣ್‌ ಅವರ ದೂರು ಆಧರಿಸಿ ಕಲಾಸಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ಕೊಲೆಯತ್ನ, ಮಾರ ಕಾಸ್ತ್ರಗಳಿಂದ ಹಲ್ಲೆ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳದ ಸುತ್ತಮುತ್ತಲ ಪ್ರದೇಶದ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

ವರುಣ್‌ ಅವರ ಕೊಲೆ ಯತ್ನ ಯಾವ ಉದ್ದೇಶಕ್ಕೆ ನಡೆದಿದೆ ಎಂಬುದು ಗೊತ್ತಾಗಿಲ್ಲ. ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಸ್ಪಷ್ಟ ಕಾರಣ ತಿಳಿದು ಬರಲಿದೆ. ಹಲವು ಆಯಾಮ ಗಳಲ್ಲಿ ತನಿಖೆ ಮುಂದುವರಿಸಿದ್ದು, ಆರೋಪಿ ಗಳ ಬಂಧನಕ್ಕೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಬಿ.ರಮೇಶ್‌ ತಿಳಿಸಿದರು.

ಬಿಜೆಪಿಯ ಸಕ್ರಿಯ ಕಾರ್ಯಕರ್ತ: ಜೆ.ಪಿ. ನಗರ ನಿವಾಸಿಯಾಗಿರುವ ವರುಣ್‌, ಬಿಜೆಪಿ ಯ ಸಕ್ರಿಯ ಕಾರ್ಯಕರ್ತರಾಗಿದ್ದರು. ಬಂಬೂಬಜಾರ್‌ನಲ್ಲಿ ಸ್ಟೀಲ್‌ ಅಂಗಡಿಯನ್ನು ಅವರು ನಡೆಸುತ್ತಿದ್ದಾರೆ. ಭಾನುವಾರ ಬೆಳಿಗ್ಗೆ ಪುರಭವನದ ಮುಂಭಾಗ ನಡೆದ ಪೌರತ್ವ ತಿದ್ದುಪಡಿ ಕಾಯಿದೆ ಬೆಂಬಲಿಸಿ ನಡೆದ ಜನ ಜಾಗೃತಿ ಸಮಾವೇಶದಲ್ಲಿ ಅವರು ಪಾಲ್ಗೊಂಡಿದ್ದರು.

ಮಧ್ಯಾಹ್ನ 12 ಗಂಟೆ ಸುಮಾರಿಗೆ ಅವರು ಮನೆಗೆ ಬೈಕ್‌ನಲ್ಲಿ ಹಿಂತಿರುಗುವಾಗ ಹಿಂದೆ ಬರುತ್ತಿದ್ದ ಬೈಕ್‌ ಡಿಕ್ಕಿ ಹೊಡೆಯಿತು. ಇದನ್ನು ವರುಣ್‌ ಪ್ರಶ್ನಿಸಿದರು. ಕೂಡಲೇ ನಾಲ್ವರು ದುಷ್ಕರ್ಮಿಗಳು ಅವರ ತಲೆ ಹಾಗೂ ಬೆನ್ನಿನ ಭಾಗಕ್ಕೆ ಇರಿದು, ಸ್ಥಳದಿಂದ ಪರಾರಿಯಾಗಿದ್ದಾರೆ.

ತನಿಖೆ ಮುಂದುವರಿಕೆ: ಕಲಾಸಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಮಧ್ಯಾಹ್ನ ವರುಣ್‌ ಎಂಬಾತನ ಮೇಲೆ ಕಿಡಿಗೇಡಿಗಳು ಚಾಕು ವಿನಿಂದ ಇರಿದಿದ್ದಾರೆ. ಈ ಸಂಬಂಧ ಡಿಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ವರುಣ್‌ ಯಾರು? ಆತನ ಹಿನ್ನೆಲೆ ಏನು? ಯಾವ ಕಾರಣಕ್ಕೆ ಕೃತ್ಯ ನಡೆದಿದೆ ಎಂಬ ಬಗ್ಗೆ ತನಿಖೆ ಮುಂದುವರಿದಿದೆ ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ಹೇಳಿದರು.

ವೈಯಕ್ತಿಕ ವಿಚಾರಕ್ಕೆ ನಡೆದ ಕೃತ್ಯ: ಬಿಜೆಪಿ ಕಾರ್ಯಕರ್ತ ವರುಣ್‌ ಮೇಲಿನ ಹಲ್ಲೆ ವೈಯಕ್ತಿಕ ಹಾಗೂ ವ್ಯಾವಹಾರಿಕ ವಿಚಾರಕ್ಕೆ ನಡೆದಿರುವುದು ಎಂಬುದು ಪಶ್ಚಿಮ ವಿಭಾಗದ ಪೊಲೀಸರ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ವರುಣ್‌ ಅವರು ಸ್ಟೀಲ್‌ ಅಂಗಡಿ ನಡೆಸುತ್ತಿದ್ದು, ಈ ವೇಳೆ ಕೆಲವರ ಜತೆ ಹಣಕಾಸಿನ ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದರು.

ಅವರನ್ನು ಹಿಂಬಾಲಿಸಿರುವ ದುಷ್ಕರ್ಮಿಗಳು ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಭಾನುವಾರ ಜನಜಾಗೃತಿ ಕಾರ್ಯಕ್ರಮ ಮುಗಿಸಿಕೊಂಡು ಹೋಗುತ್ತಿದ್ದ ವರುಣ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಅದನ್ನು ಬೇರೆ ಆಯಾಮ ಪಡೆದುಕೊಳ್ಳುವಂತೆ ಮಾಡಿದ್ದಾರೆಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next