ಟ್ರಿನಿಡಾಡ್: ಭಾರತ ತಂಡದ ಅಗ್ರ ಕ್ರಮಾಂಕದ ಆಟಗಾರ ಕೆ.ಎಲ್. ರಾಹುಲ್ ಅವರು ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಿಂದಲೂ ಹೊರಗುಳಿಯಲಿದ್ದಾರೆ ಎಂಬ ಸುದ್ದಿಯೊಂದು ಮೂಲಗಳಿಂದ ತಿಳಿದು ಬಂದಿದೆ.
ಕೋವಿಡ್ ಸೋಂಕಿಗೆ ಗುರಿಯಾಗಿ ವೆಸ್ಟ್ ಇಂಡೀಸ್ ವಿರುದ್ಧದ 3 ಏಕದಿನ ಪಂದ್ಯಗಳಿಂದ ಹೊರಗುಳಿದಿದ್ದ ರಾಹುಲ್ ಅವರಿಗೆ ಇನ್ನೂ ಒಂದು ವಾರಗಳ ವಿಶ್ರಾಂತಿಗೆ ವೈದ್ಯರು ಸೂಚಿಸಿರುವ ಕಾರಣ ಜುಲೈ 29ರಂದು ಆರಂಭವಾಗಿ ಆಗಸ್ಟ್ 7 ರಂದು ಮುಕ್ತಾಯವಾಗಲಿರುವ 5 ಪಂದ್ಯಗಳ ಟಿ20 ಸರಣಿಯಲ್ಲಿ ರಾಹುಲ್ ಅವರು ಆಡುವುದು ಅನುಮಾನ ಎನ್ನಲಾಗಿದೆ.
ಇನ್ನೊಂದೆಡೆ ಅಂತಿಮ ಎರಡು ಟ್ವೆಂಟಿ-20 ಪಂದ್ಯಗಳಿಗೆ ಅವರನ್ನು ಸೇರಿಸುವ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದೂ ಬಿಸಿಸಿಐ ಮೂಲಗಳು ಹೇಳಿವೆ.
ರಾಹುಲ್ ಅವರು ಗಾಯಾಳಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಭಾರತದ ತವರು ಟಿ 20 ಸರಣಿ ಮತ್ತು ಇಂಗ್ಲೆಂಡ್ ಪ್ರವಾಸದಿಂದ ಹೊರಗುಳಿದಿದ್ದರು.
ಇತ್ತೀಚೆಗಷ್ಟೇ ಶಸ್ತ್ರಚಿಕಿತ್ಸೆಗೆ ಒಳಗಾಗಿ ಬೆಂಗಳೂರಿನ ಎನ್‌ಸಿಎಯಲ್ಲಿ ತರಬೇತಿಯನ್ನು ಪುನರಾರಂಭಿಸಿದ್ದ ರಾಹುಲ್, ವೆಸ್ಟ್ ಇಂಡೀಸ್ ವಿರುದ್ಧದ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದರು, ಇನ್ನೆರಡು ದಿನಗಳಲ್ಲಿ ಫಿಟ್‌ನೆಸ್ ಪರೀಕ್ಷೆ ನಡೆಸಬೇಕಿತ್ತು. ಐದು ಪಂದ್ಯಗಳ ಸರಣಿಗಾಗಿ ಟೀಮ್ ಇಂಡಿಯಾದ ಟಿ20 ತಂಡವ ಮಂಗಳವಾರ ಟ್ರಿನಿಡಾಡ್‌ಗೆ ಆಗಮಿಸಿದೆ.