Advertisement

World Cup 2023: ಭಾರತದ ವಿಶ್ವಕಪ್ ಅಭಿಯಾನದ ಮರೆಯಲಾಗದ ಹೀರೋ ಕೆಎಲ್ ರಾಹುಲ್

05:19 PM Nov 17, 2023 | ಕೀರ್ತನ್ ಶೆಟ್ಟಿ ಬೋಳ |

ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023ರ ಕೂಟದ ಹೈಲೈಟ್ ಯಾವುದು ಎಂದರೆ ನಿಸ್ಸಂಶಯವಾಗಿ ಭಾರತ ತಂಡ ಎನ್ನಬಹುದು. ಕೂಟದ ಆರಂಭಕ್ಕೂ ಮೊದಲೇ ಫೇವರೆಟ್ ಪಟ್ಟದೊಂದಿಗೆ ಕಣಕ್ಕಿಳಿದಿದ್ದ ಟೀಂ ಇಂಡಿಯಾ ಸಾಂಘಿಕ ಪ್ರದರ್ಶನ ನೀಡುತ್ತಾ ಫೈನಲ್ ಹಂತಕ್ಕೇರಿದೆ. ರವಿವಾರ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ತಂಡವು ಆಸ್ಟ್ರೇಲಿಯಾವನ್ನು ಫೈನಲ್ ಪಂದ್ಯದಲ್ಲಿ ಎದುರಿಸಲಿದೆ.

Advertisement

ಭಾರತ ತಂಡದ ಈ ಅಭೂತಪೂರ್ವ ಯಶಸ್ಸಿನಲ್ಲಿ ಪ್ರಮುಖವಾಗಿ ಕಾಣುವ ಹೆಸರುಗಳೆಂದರೆ ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ, ರೋಹಿತ್ ಶರ್ಮಾ. ಆದರೆ ಇದರ ನಡುವೆ ಹೆಚ್ಚು ಲೈಮ್ ಲೈಟ್ ಗೆ ಬರದೆ, ತನಗೆ ನೀಡಿದ ಜವಾಬ್ದಾರಿಯನ್ನು ಒಂದು ಹಂತದಲ್ಲಿ ಹೆಚ್ಚೇ ಎನ್ನುವಂತೆ ನಿಭಾಯಿಸಿಕೊಂಡು ಬರುತ್ತಿರುವುದು ಕನ್ನಡಿಗ ಕೆ.ಎಲ್ ರಾಹುಲ್. 31 ವರ್ಷ ಪ್ರಾಯದ ರಾಹುಲ್ ಕೂಟದುದ್ದಕ್ಕೂ ವಿಕೆಟ್ ಹಿಂದೆ ಮತ್ತು ಬ್ಯಾಟಿಂಗ್ ಮೂಲಕ ತಂಡದ ನೆರವಿಗೆ ನಿಂತಿದ್ದಾರೆ.

ರಿಷಭ್ ಪಂತ್ ಅವರು ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡ ಕಾರಣ ಸೀಮಿತ ಓವರ್ ತಂಡಕ್ಕೆ ರಾಹುಲ್ ಅರೆಕಾಲಿಕ ವಿಕೆಟ್ ಕೀಪರ್ ಆಗಿ ಬಂದವರು. 2016ರಲ್ಲಿ ಏಕದಿನ ಪದಾರ್ಪಣೆ ಮಾಡಿದ ಬಳಿಕ ರಾಹುಲ್ ಕೇವಲ 14 ಬಾರಿ ಮಾತ್ರ ವಿಕೆಟ್ ಕೀಪಿಂಗ್ ನಡೆಸಿದ್ದರು. ಆದರೆ ಪಂತ್ ಗಾಯಗೊಂಡ ಬಳಿಕ ರಾಹುಲ್ ಅನಿವಾರ್ಯವಾಗಿ ವಿಕೆಟ್ ಕೀಪಿಂಗ್ ಮಾಡಬೇಕಾಯಿತು. ಹೀಗಾಗಿ ಅವರು ಈ ವರ್ಷ 18 ಪಂದ್ಯಗಳಲ್ಲಿ ವಿಕೆಟ್ ಹಿಂದೆ ಕೆಲಸ ನಿರ್ವಹಿಸಿದ್ದಾರೆ.

ಗಮನಿಸಬೇಕಾದ ವಿಚಾರವೆಂದರೆ ಕೆಎಲ್ ರಾಹುಲ್ ಅವರು ಕೂಡಾ 2023ರ ಐಪಿಎಲ್ ನಲ್ಲಿ ಗಾಯಗೊಂಡಿದ್ದರು. ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಾಹುಲ್ ಪಂದ್ಯಾವಳಿಯ ಮಧ್ಯದಲ್ಲಿ ಗಾಯಗೊಂಡು ನಂತರ ಮೂರು ತಿಂಗಳ ಕಾಲ ಆಡಲು ಸಾಧ್ಯವಿರಲಿಲ್ಲ.

Advertisement

ಮೇ ತಿಂಗಳಲ್ಲಿ ಗಾಯಗೊಂಡ ನಂತರ ರಾಹುಲ್ 2023 ರ ಏಷ್ಯಾ ಕಪ್ ಸಮಯದಲ್ಲಿ ಸೆಪ್ಟೆಂಬರ್ ಮಧ್ಯದಲ್ಲಿ ಭಾರತ ತಂಡವನ್ನು ಸೇರಿಕೊಂಡರು. ತಂಡದಲ್ಲಿದ್ದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರನ್ನು ಮೀರಿ ರಾಹುಲ್ ಸ್ಥಾನ ಪಡೆದು ಅದನ್ನು ಭದ್ರ ಪಡಿಸಿಕೊಂಡರು.

2023ರ ಏಕದಿನ ವಿಶ್ವಕಪ್‌ ನಲ್ಲಿ, ರಾಹುಲ್ ಸ್ಟಂಪ್ ಹಿಂದೆ 15 ಕ್ಯಾಚ್‌ ಗಳನ್ನು ಪಡೆದುಕೊಂಡಿದ್ದಾರೆ. ವಿಕೆಟ್-ಕೀಪರ್ ಆಗಿ ಅವರ ದಾಖಲೆಯು ಈ ವಿಶ್ವಕಪ್‌ ನಲ್ಲಿ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ನಂತರ ಎರಡನೇ ಸ್ಥಾನದಲ್ಲಿದ್ದಾರೆ. ಸೆಮಿ ಫೈನಲ್‌ ಪಂದ್ಯದಲ್ಲಿ ನಿರ್ಣಾಯಕ ಹಂತದಲ್ಲಿ ಡೆವೊನ್ ಕಾನ್ವೆ ಅವರ ಅದ್ಭುತ ಡೈವಿಂಗ್ ಕ್ಯಾಚ್ ಸೇರಿದಂತೆ ಪಂದ್ಯಾವಳಿಯುದ್ದಕ್ಕೂ ರಾಹುಲ್ ಆಕರ್ಷಕ ಕ್ಯಾಚ್‌ ಗಳನ್ನು ಪಡೆದಿದ್ದಾರೆ.

ಕೆಎಲ್ ರಾಹುಲ್ ಅವರು ಸ್ಟಂಪಿಂಗ್ ಮತ್ತು ಕ್ಯಾಚ್ ಗಳು ಮಾತ್ರವಲ್ಲದೆ ಡಿಆರ್ ಎಸ್ ನಿರ್ಣಯಗಳು ಕೂಡಾ ಹೈಲೈಟ್ಸ್. ಈ ಬಾರಿಯ ವಿಶ್ವಕಪ್ ನಲ್ಲಿ ಡಿಆರ್ ಎಸ್ ಬಳಕೆಯಲ್ಲಿ ರಾಹುಲ್ ರಷ್ಟು ನಿಖರ ತೀರ್ಮಾನ ಮಾಡಿರುವವರು ಬಹುಶಃ ಬೇರೆ ಯಾರು ಇಲ್ಲ ಎನ್ನಬಹುದು. ರಾಹುಲ್ ತನ್ನ ನಿರ್ಣಯವನ್ನು ಎಷ್ಟು ನಂಬುತ್ತಾರೆ ಎನ್ನುವುದಕ್ಕೆ ಶ್ರೀಲಂಕಾ ವಿರುದ್ಧದ ಅಂಪೈರ್ ನಿರ್ಧಾರವನ್ನು ಬದಲಿಸುವ ರಾಹುಲ್ ತೀರ್ಮಾನ ಒಮ್ಮೆಗೆ ಮನಸ್ಸಿನಲ್ಲಿ ಬರುತ್ತದೆ. ಮೊಹಮ್ಮದ್ ಶಮಿ ಎಸೆತದಲ್ಲಿ ದುಷ್ಮಂತ ಚಮೀರಾ ಬ್ಯಾಟಿಂಗ್ ಮಾಡಿದಾಗ ರಾಹುಲ್ ಕ್ಯಾಚ್ ಗೆ ಮನವಿ ಮಾಡಿದರು. ಆದರೆ ಅಂಪೈರ್ ವೈಡ್ ಎಂದು ಘೋಷಿಸಿದರು. ಈ ವೇಳೆ ಬೌಲರ್ ಶಮಿ ಅಥವಾ ನಾಯಕ ರೋಹಿತ್ ಶರ್ಮಾ ಕೂಡಾ ಆಸಕ್ತಿ ತೋರಲಿಲ್ಲ. ಆದರೆ ರಾಹುಲ್ ರಿವ್ಯೂ ತೆಗೆದುಕೊಳ್ಳಲು ರೋಹಿತ್‌ ಗೆ ಮನವರಿಕೆ ಮಾಡಿದರು, ಥರ್ಡ್ ಅಂಪೈರ್ ಗಮನಿಸಿದಾಗ ಚೆಂಡು ಬ್ಯಾಟ್ ಸವರಿ ಹೋಗಿರುವುದು ಸ್ಪಷ್ಟವಾಗಿತ್ತು.

ಈ ಪಂದ್ಯದ ಬಳಿಕ ಮಾತನಾಡಿದ್ದ ನಾಯಕ ರೋಹಿತ್,” ರಿವ್ಯೂ ಪಡೆಯುವ ಬಗ್ಗೆ ಬೌಲರ್ ಮತ್ತು ಕೀಪರ್ ಗೆ ಬಿಟ್ಟಿದ್ದೇನೆ. ಈ ವಿಷಯದಲ್ಲಿ ರಾಹುಲ್ ನನ್ನು ನಾನು ಸಂಪೂರ್ಣವಾಗಿ ನಂಬುತ್ತೇನೆ” ಎಂದಿದ್ದರು.

ವಿಕೆಟ್ ಕೀಪಿಂಗ್ ಮಾತ್ರವಲ್ಲದೆ ಬ್ಯಾಟಿಂಗ್ ನಲ್ಲೂ ರಾಹುಲ್ ಮಿಂಚುತ್ತಿದ್ದಾರೆ. ವಿಶ್ವಕಪ್ ನ ಆರಂಭಿಕ ಪಂದ್ಯದಲ್ಲೇ ಆಸೀಸ್ ವಿರುದ್ಧ ಸಂಕಷ್ಟದ ಪರಿಸ್ಥಿತಿಯಲ್ಲಿದ್ದ ತಂಡವನ್ನು ಅವರು ಆಧರಿಸಿದ್ದರು. ಕೂಟದಲ್ಲಿ 77.20 ಸರಾಸರಿಯಲ್ಲಿ 98.72 ಸ್ಟ್ರೈಕ್ ರೇಟ್ ನಲ್ಲಿ ಅವರು 386 ರನ್ ಗಳಿಸಿದ್ದಾರೆ. ಅಲ್ಲದೆ ನೆದರ್ಲ್ಯಾಂಡ್ ವಿರುದ್ಧದ ಶತಕ ಬಾರಿಸಿದ ಅವರು ಸೆಮಿ ಫೈನಲ್  ಪಂದ್ಯದಲ್ಲಿ ಕೇವಲ 20 ಎಸೆತಗಳಲ್ಲಿ 39 ರನ್ ಪೇರಿಸಿದ್ದಾರೆ.

ಏಕದಿನ ವಿಶ್ವಕಪ್‌ ನಲ್ಲಿ ಸ್ಥಾನ ಪಡೆದಾಗ ಟೀಕೆಗಳನ್ನು ಎದುರಿಸಿದ್ದ ರಾಹುಲ್, ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನಗಳೊಂದಿಗೆ ಲಕ್ಷಾಂತರ ಅಭಿಮಾನಿಗಳು ಮತ್ತು ತಜ್ಞರ ಅಭಿಪ್ರಾಯಗಳನ್ನು ಯಶಸ್ವಿಯಾಗಿ ಬದಲಾಯಿಸಿದ್ದಾರೆ.

*ಕೀರ್ತನ್‌ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next