ಕೋಲ್ಕತ: ನಗರದ ಐತಿಹಾಸಿಕ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಐಪಿಎಲ್ ಮುಖಾಮುಖಿಯಲ್ಲಿ ಆತಿಥೇಯ ಕೋಲ್ಕತ ನೈಟ್‌ರೈಡರ್ ಎದುರು ಹೀನಾಯ ನಿರ್ವಹಣೆ ತೋರಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲಿಗೆ ಶರಣಾಗಿದೆ. 81 ರನ್ ಗಳಿಂದ ಕೆಕೆಆರ್ ಭರ್ಜರಿ ಜಯ ಸಾಧಿಸಿತು.
ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 8 ವಿಕೆಟ್ ಗಳ ಅಮೋಘ ಜಯ ದಾಖಲಿಸಿದ್ದ ಆರ್ ಸಿಬಿ ಮತ್ತೆ ದಯನೀಯ ವೈಫಲ್ಯ ಅನುಭವಿಸಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.ಕೆಕೆಆರ್ 26 ರನ್ ಆಗುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತು. ವೆಂಕಟೇಶ ಅಯ್ಯರ್ 3, ಮನದೀಪ್ ಸಿಂಗ್ ಶೂನ್ಯಕ್ಕೆ ಔಟಾದರು. ಈ ವೇಳೆ ನೆಲಕಚ್ಚಿ ಆಟವಾಡಿದ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ 57 ರನ್ ಕೊಡುಗೆ ನೀಡಿದರು. ನಾಯಕ ನಿತೀಶ್ ರಾಣಾ 1 ರನ್ ಗೇ ನಿರ್ಗಮಿಸಿದರು. ಆ ಬಳಿಕ ಬಂದ ರಿಂಕು ಸಿಂಗ್ 46 ರನ್ ಗಳ ಭರ್ಜರಿ ಆಟವಾಡಿದರು. ಅಬ್ಬರಿಸಿದ ಶಾರ್ದೂಲ್ ಠಾಕೂರ್ 29 ಎಸೆತಗಳಲ್ಲಿ 68 ರನ್ ಗಳಿಸಿದರು. 9 ಆಕರ್ಷಕ ಬೌಂಡರಿ ಮತ್ತು 3 ಸಿಕ್ಸರ್ ಅವರ ಇನ್ನಿಂಗ್ಸ್ ನಲ್ಲಿ ಒಳಗೊಂಡಿತ್ತು. ಉಮೇಶ್ ಔಟಾಗದೆ 6 ರನ್ ಗಳಿಸಿದರು.7 ವಿಕೆಟ್ ನಷ್ಟಕ್ಕೆ 204 ರನ್ ಕಲೆ ಹಾಕಿ ಬೆಂಗಳೂರು ತಂಡಕ್ಕೆ ಭರ್ಜರಿ ಮೊತ್ತವನ್ನು ಮುಂದಿಟ್ಟರು.
ಗುರಿ ಬೆನ್ನಟ್ಟಿದ ಆರ್ ಸಿಬಿ ಒಂದಾದ ಮೇಲೊಂದರಂತೆ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆರಂಭಿಕರಾದ ವಿರಾಟ್ ಕೊಹ್ಲಿ ಮತ್ತು ನಾಯಕ ಫಾ ಡು ಪ್ಲೆಸಿಸ್ 44 ರನ್ ಗಳ ಜತೆಯಾಟವಾಡಿ ಭರವಸೆ ಮೂಡಿಸಿದ್ದರು. 21 ರನ್ ಗಳಿಸಿದ್ದ ಕೊಹ್ಲಿ ಅವರನ್ನು ನರೈನ್ ಕ್ಲೀನ್ ಬೌಲ್ಡ್ ಮಾಡಿದರು. 23 ರನ್ ಗಳಿಸಿದ್ದ ಪ್ಲೆಸಿಸ್ ಅವರನ್ನು ಬಲಗೈ ಲೆಗ್ ಸ್ಪಿನ್ನರ್ ವರುಣ್ ಚಕ್ರವರ್ತಿ ಕ್ಲೀನ್ ಬೌಲ್ಡ್ ಮಾಡಿದರು. ಮೈಕಲ್ ಬ್ರೇಸ್‌ವೆಲ್ 19 ರನ್ ಗಳಿಸಿ ಔಟಾದರು. 5 ರನ್ ಗಳಿಸಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ವರುಣ್ ಚಕ್ರವರ್ತಿ ಕ್ಲೀನ್ ಬೌಲ್ಡ್ ಮಾಡಿದರು. ಹರ್ಷಲ್ ಪಟೇಲ್ ಅವರನ್ನೂ ಶೂನ್ಯಕ್ಕೆ ಚಕ್ರವರ್ತಿ ಕ್ಲೀನ್ ಬೌಲ್ಡ್ ಮಾಡಿ ಅಬ್ಬರಿಸಿದರು. ದಿನೇಶ್ ಕಾರ್ತಿಕ್ 9 ರನ್ ಗೆ ಆಟ ಮುಗಿಸಿದರು. ಕೊನೆಯಲ್ಲಿ ಬಾಲದಲ್ಲಿ ಬಲ ತೋರಿದ ಆಕಾಶ್ ದೀಪ್ 17 ರನ್ ಗಳಿಸಿ ಔಟಾದರು. ಡೇವಿಡ್ ವಿಲ್ಲಿ ಔಟಾಗದೆ 20 ರನ್ ಗಳಿಸಿದ್ದರು. 17.4 ಓವರ್ ಗಳಲ್ಲಿ 123 ರನ್ ಗಳಿಗೆ ಆಲೌಟಾಯಿತು. ಕೆಕೆಆರ್ ತವರಿನಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಪ್ರಾಬಲ್ಯ ತೋರಿತು.
ವರುಣ್ ಚಕ್ರವರ್ತಿ 4 ವಿಕೆಟ್ ಕಬಳಿಸಿದರು. ಸುಯಶ್ ಶರ್ಮಾ 3 ವಿಕೆಟ್ ಪಡೆದರು. ಸುನಿಲ್ ನರೈನ್ 2, ಶಾರ್ದೂಲ್ ಠಾಕೂರ್ 1 ವಿಕೆಟ್ ಪಡೆದು ಗಮನ ಸೆಳೆದರು.