Advertisement

KKR V/s RCB: ಇಂದು ಕೋಲ್ಕತದಲ್ಲಿ ಬೆಂಗಳೂರು ಆಟ

10:03 PM Apr 05, 2023 | Team Udayavani |

ಕೋಲ್ಕತ: ಪ್ರಮುಖ ಆಟಗಾರರ ಗೈರು, ಒಂದಿಷ್ಟು ಮಂದಿ ಗಾಯಾಳುಗಳು, ಅಸ್ತವ್ಯಸ್ತಗೊಂಡ ತಂಡದ ಸಮತೋಲನ… ಇಂಥ ಸಮಾನ ಸಮಸ್ಯೆಗಳನ್ನು ಹೊತ್ತಿರುವ ಆತಿಥೇಯ ಕೋಲ್ಕತ ನೈಟ್‌ರೈಡರ್ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಗುರುವಾರ ರಾತ್ರಿ ಐತಿಹಾಸಿಕ ಈಡನ್‌ ಗಾರ್ಡನ್ಸ್‌ನಲ್ಲಿ ಮುಖಾಮುಖೀಯಾಗಲಿವೆ. ಬೆಂಗಳೂರು ಮೊದಲ ಪಂದ್ಯವನ್ನು ಗೆದ್ದ ಹುರುಪಿನಲ್ಲಿದ್ದರೆ, ಪಂಜಾಬ್‌ ವಿರುದ್ಧದ ಮಳೆ ಮುಖಾಮುಖೀಯನ್ನು ಕಳೆದುಕೊಂಡ ಕೋಲ್ಕತ ತವರಿನಂಗಳದಲ್ಲಿ ಗೆಲುವಿನ ಖಾತೆ ತೆರೆಯುವ ಯೋಜನೆಯಲ್ಲಿದೆ. ಹೀಗಾಗಿ ಇದೊಂದು ಸೂಪರ್‌ ಗೇಮ್‌ ಎನಿಸಿಕೊಳ್ಳುವ ಎಲ್ಲ ಸಾಧ್ಯತೆ ಇದೆ.

Advertisement

1,438 ದಿನಗಳ ಬಳಿಕ…: ಈಡನ್‌ ಗಾರ್ಡನ್ಸ್‌’ ಬರೋಬ್ಬರಿ 1,438 ದಿನಗಳ ಬಳಿಕ ಐಪಿಎಲ್‌ ಪಂದ್ಯವನ್ನು ಆಯೋಜಿಸುತ್ತಿದೆ. ಕೊರೊನಾಕ್ಕೂ ಮುನ್ನ, 2019ರ ಏ.28ರಂದು ಇಲ್ಲಿ ಕೊನೆಯ ಐಪಿಎಲ್‌ ಪಂದ್ಯ ಏರ್ಪಟ್ಟಿತ್ತು. ಅಂದಿನ ಮುಂಬೈ ಇಂಡಿಯನ್ಸ್‌ ಎದುರಿನ ಮುಖಾಮುಖೀಯನ್ನು ಕೆಕೆಆರ್‌ 34 ರನ್ನುಗಳಿಂದ ಜಯಿಸಿತ್ತು. ಐಪಿಎಲ್‌ ಪುನರಾಗಮನವನ್ನು ಗೆಲುವಿನೊಂದಿಗೆ ಆರಂಭಿಸಿ, ಈ ಋತುವಿನ ಖಾತೆ ತೆರೆಯುವುದು ಕೋಲ್ಕತ ತಂಡದ ಪ್ರಮುಖ ಗುರಿ.

ಬೆಂಗಳೂರು ಅಬ್ಬರದ ಆರಂಭ: ಬೆಂಗಳೂರು 2023ರ ಕ್ರಿಕೆಟ್‌ ಋತುವನ್ನು ಅಬ್ಬರದಿಂದಲೇ ಆರಂಭಿಸಿತ್ತು. ತವರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು 8 ವಿಕೆಟ್‌ಗಳಿಂದ ಬಗ್ಗುಬಡಿದಿತ್ತು. ನಾಯಕ ಫಾ ಡು ಪ್ಲೆಸಿಸ್‌ ಮತ್ತು ವಿರಾಟ್‌ ಕೊಹ್ಲಿ ಇಬ್ಬರೇ ಸೇರಿಕೊಂಡು 148 ರನ್‌ ಪೇರಿಸಿದ್ದನ್ನು ಮರೆಯುವಂತಿಲ್ಲ.

ಆದರೆ ಪ್ರತೀ ಸಲವೂ ಇಂಥ ಓಪನಿಂಗ್‌, ಇಂಥ ದೊಡ್ಡ ಜತೆಯಾಟ ಸಾಧ್ಯವಾಗದು. ಉಳಿದ ಬ್ಯಾಟರ್‌ಗಳೂ ಇಂಥದೇ ಆಟಕ್ಕೆ ಸಜ್ಜಾಗಿರಬೇಕಾಗುತ್ತದೆ. ಆದರೆ ಹೊಡಿಬಡಿ ಆಟಗಾರ ರಜತ್‌ ಪಾಟೀದಾರ್‌ ಕೂಟದಿಂದಲೇ ಹೊರಗುಳಿದದ್ದು ಆರ್‌ಸಿಬಿಗೆ ಎದುರಾಗಿರುವ ದೊಡ್ಡ ಗಂಡಾಂತರ. ಆರಂಭಿಕ ಕುಸಿತ ಸಂಭವಿಸಿದ ಸಂದರ್ಭದಲ್ಲಿ ಪಾಟೀದಾರ್‌ ರಕ್ಷಣೆಗೆ ನಿಂತ ಸಾಕಷ್ಟು ನಿದರ್ಶನಗಳಿದ್ದವು. ಮುಂಬೈ ವಿರುದ್ಧ ಇವರ ಬದಲು ಒನ್‌ಡೌನ್‌ನಲ್ಲಿ ಬಂದಿದ್ದ ದಿನೇಶ್‌ ಕಾರ್ತಿಕ್‌ ಸೊನ್ನೆ ಸುತ್ತಿ ಹೋಗಿದ್ದನ್ನು ಗಮನಿಸಬಹುದು.

ಕಾರ್ತಿಕ್‌ ಅವರನ್ನು ಫಿನಿಶರ್‌ ಆಗಿ ಕೆಳಕ್ರಮಾಂಕದಲ್ಲಿ ಆಡಿಸುವುದು ಹೆಚ್ಚು ಸೂಕ್ತ. ಗ್ಲೆನ್‌ ಮ್ಯಾಕ್ಸ್‌ವೆಲ್‌ ಪೂರ್ತಿ ಫಿಟ್‌ನೆಸ್‌ನೊಂದಿಗೆ ಮೊದಲ ಪಂದ್ಯಕ್ಕೇ ಲಭ್ಯರಾದದ್ದು ತಂಡದ ಅದೃಷ್ಟ. ಇನ್ನು ನ್ಯೂಜಿಲೆಂಡ್‌ನ‌ ಮೈಕೆಲ್‌ ಬ್ರೇಸ್‌ವೆಲ್‌ ಆಟವನ್ನು ಗಮನಿಸಬೇಕಿದೆ. ಇವರಿಗೆ ಮುಂಬೈ ವಿರುದ್ಧ ಬ್ಯಾಟ್‌ ಹಿಡಿಯುವ ಅವಕಾಶ ಸಿಕ್ಕಿರಲಿಲ್ಲ. ಇವರನ್ನು ಹೊರತುಪಡಿಸಿದರೆ ಆರ್‌ಸಿಬಿ ಬಳಿ ತಜ್ಞ ಬ್ಯಾಟರ್‌ಗಳಿಲ್ಲ ಎಂಬುದನ್ನು ಗಮನಿಸಬೇಕು. ಶಹಬಾಜ್‌ ಅಹ್ಮದ್‌ ಸೇರಿದಂತೆ 6 ಮಂದಿ ಬೌಲರ್‌ಗಳನ್ನೇ ಆಡಿಸಲಾಗಿತ್ತು. ಇವರ ಬ್ಯಾಟಿಂಗ್‌ ತಾಕತ್ತು ಎಲ್ಲರಿಗೂ ತಿಳಿದಿರುವಂಥದ್ದೇ. ಇವರಲ್ಲೊಬ್ಬರನ್ನು ಕೈಬಿಟ್ಟು ಸುಯಶ್‌ ಪ್ರಭುದೇಸಾಯಿ ಅಥವಾ ಮಹಿಪಾಲ್‌ ಲೊಮ್ರಾರ್‌ ಅವರನ್ನು ಆಡಿಸುವುದು ಒಳ್ಳೆಯದು. ಹಾಗೆಯೇ ರೀಸ್‌ ಟಾಪ್ಲೆ ಗಾಯಾಳಾಗಿದ್ದು, ಈ ಸ್ಥಾನ ಡೇವಿಡ್‌ ವಿಲ್ಲಿ ಪಾಲಾಗಬಹುದು.

Advertisement

ಆರ್‌ಸಿಬಿ ಬೌಲಿಂಗ್‌ ವಿಭಾಗ ಭಾರೀ ಘಾತಕವೇನಲ್ಲ. ಮುಂಬೈಯನ್ನು ಒಂದು ಹಂತದ ತನಕ ಹಿಡಿದಿರಿಸಿದರೂ ಬಳಿಕ ಬೆಂಗಳೂರು ತಂಡದ ಬೌಲಿಂಗ್‌ ಹಳಿ ತಪ್ಪಿತ್ತು. ಈಡನ್‌ ಪಿಚ್‌ ಸೀಮರ್‌ಗಳಿಗೆ ನೆರವು ನೀಡುವ ಸಾಧ್ಯತೆ ಇದೆ. ಸಿರಾಜ್‌, ಹರ್ಷಲ್‌, ಆಕಾಶ್‌ದೀಪ್‌ ಅವರೆಲ್ಲ ಹೆಚ್ಚು ಪರಿಣಾಮಕಾರಿಯಾಗಬೇಕಿದೆ.

ಕೆಕೆಆರ್‌ಗೆ ಸೂಕ್ತ ಸಾರಥಿ ಇಲ್ಲ: ಕೆಕೆಆರ್‌ಗೆ ಎದುರಾಗಿರುವ ದೊಡ್ಡ ಸಮಸ್ಯೆ ಸಾರಥಿಯದ್ದು. ಕಳೆದೆರಡು ವರ್ಷಗಳಿಂದ ನಾಯಕತ್ವದ ತೊಳಲಾಟದಲ್ಲಿರುವ ತಂಡ ಈ ಬಾರಿ ಇನ್ನಷ್ಟು ಒತ್ತಡಕ್ಕೆ ಸಿಲುಕಿದೆ. ಮೊದಲೇ ಬ್ಯಾಟಿಂಗ್‌ ಬರಗಾಲದಲ್ಲಿರುವ ನಿತೀಶ್‌ ರಾಣಾ ಈ ಜವಾಬ್ದಾರಿ ಹೊರಲು ಎಷ್ಟು ಶಕ್ತರು ಎಂಬ ಪ್ರಶ್ನೆ ತಂಡದೊಳಗೇ ಉದ್ಭವಿಸಿದೆ. ತಂಡದ ಬ್ಯಾಟಿಂಗ್‌ ಸರದಿ ಸಾಮಾನ್ಯ. ಯಾವುದೇ ಸ್ಟಾರ್‌ ಆಟಗಾರರನ್ನು ಹೊಂದಿಲ್ಲ. ಮನ್‌ದೀಪ್‌ ಸಿಂಗ್‌, ಅನುಕೂಲ್‌ ರಾಯ್‌, ರಿಂಕು ಸಿಂಗ್‌ ಮಾಮೂಲು ದರ್ಜೆಯ ಬ್ಯಾಟರ್. ರಸೆಲ್‌, ಸುನೀಲ್‌ ನಾರಾಯಣ್‌, ವೆಂಕಟೇಶ್‌ ಐಯ್ಯರ್‌ ಹಿಟ್ಟರ್‌ಗಳಾದರೂ ನಂಬುವುದು ಕಷ್ಟ. ಜೇಸನ್‌ ರಾಯ್‌ ಸೇರ್ಪಡೆಯಿಂದ ಓಪನಿಂಗ್‌ಗೆ ಬಲ ಬರುವುದು ಖಚಿತ. ಆದರೆ ಇವರು ಆರ್‌ಸಿಬಿ ಪಂದ್ಯಕ್ಕೆ ಲಭ್ಯರಾಗುವುದು ಇನ್ನೂ ಖಾತ್ರಿಯಾಗಿಲ್ಲ.

ಬೌಲಿಂಗ್‌ನಲ್ಲಿ ಸೌಥಿ, ಉಮೇಶ್‌ ಯಾದವ್‌, ಚಕ್ರವರ್ತಿ, ನಾರಾಯಣ್‌ ಅವರನ್ನು ಅವಲಂಬಿಸಿದೆ. ಆದರೆ ಮೊಹಾಲಿಯಲ್ಲಿ ಇವರಿಗೆ ಪಂಜಾಬ್‌ ತಂಡವನ್ನು ನಿಯಂತ್ರಿಸಲಾಗಿರಲಿಲ್ಲ. ತವರಿನಂಗಳದಲ್ಲಿ ಹಿಡಿತ ಸಾಧಿಸಬಹುದೇ ಎಂಬುದೊಂದು ಪ್ರಶ್ನೆ.
ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಫ್ಲಡ್‌ಲೈಟ್‌ ಕೈಕೊಟ್ಟದ್ದು ಕೆಕೆಆರ್‌ಗೆ ಮುಳುವಾಯಿತು. ಇಲ್ಲಿ ಅರ್ಧ ಗಂಟೆಯಷ್ಟು ಆಟ ನಷ್ಟವಾಯಿತು, ಕೊನೆಯಲ್ಲಿ ಮಳೆ ಸುರಿಯಿತು. ತವರಲ್ಲಿ ಅದೃಷ್ಟ ಒಲಿದೀತೇ?

48ಕ್ಕೆ 4 ವಿಕೆಟ್‌, 14ನೇ ಓವರ್‌ನಲ್ಲಿ 98ಕ್ಕೆ 5 ವಿಕೆಟ್‌ ಕಳೆದುಕೊಂಡ ಸ್ಥಿತಿಯಲ್ಲಿದ್ದ ಮುಂಬೈ 7ಕ್ಕೆ 171ರ ತನಕ ಬೆಳೆದಿತ್ತು. ಸಿರಾಜ್‌ ಎಸೆದ ಸಾಲು ಸಾಲು ವೈಡ್‌ ಎಸೆತಗಳು ಯೋಚಿಸುವಂತೆ ಮಾಡಿವೆ. 10 ವೈಡ್‌ ಎಸೆತಗಳಿಂದ ಆರ್‌ಸಿಬಿ ಬೌಲಿಂಗ್‌ಗೆ ಕಳಂಕ ಮೆತ್ತಿತ್ತು. ಇದಕ್ಕೆ ಪರಿಹಾರ ಅತ್ಯಗತ್ಯ.

Advertisement

Udayavani is now on Telegram. Click here to join our channel and stay updated with the latest news.

Next