Advertisement

ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ಕಿತ್ತೂರ ಚೆನ್ನಮ್ಮ ಹೆಸರು: ಎಂ.ಬಿ ಪಾಟೀಲ್

03:45 PM Jun 11, 2023 | keerthan |

ವಿಜಯಪುರ:  ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರ ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿ, ನುಡಿದಂತೆ ನಡೆದಿದೆ. ರಾಜ್ಯ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಗ್ಯಾರಂಟಿ ಅನುಷ್ಠಾನದ ಮೂಲಕ ನಮ್ಮ ಬದ್ಧತೆ ತೋರಿದ್ದೇವೆ ಎಂದು ಕೈಗಾರಿಕಾ ಖಾತೆ ಹೊಂದಿರುವ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

Advertisement

ವಿಜಯಪುರದ ಕೇಂದ್ರ ಬಸ್ ನಿಲ್ದಾಣದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆಯ  ‘ಶಕ್ತಿ’ ಯೋಜನೆಗೆ ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದ ಅವರು, ಹನ್ನೆರಡನೆಯ ಶತಮಾನದಲ್ಲಿ ಮಹಿಳಾ ಸಮಾನತೆ ಸಾರಿದ ಬಸವೇಶ್ವರ ಜನ್ಮ ಭೂಮಿಯಲ್ಲಿ ಮಹಿಳಾ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡುವ ಸೌಭಾಗ್ಯ ನನ್ನದಾಗಿದೆ ಎಂದರು.

ಸ್ವಾತಂತ್ರ್ಯ ಸಂಗ್ರಾಮದ ಮೊದಲ ಹೋರಾಟದಲ್ಲಿ ಬ್ರಿಟಿಷರ ವಿರುದ್ದ ಹೋರಾಡಿ ವಿಜಯ ಸಾಧಿಸಿದ ಭಾರತ ಮೊದಲ  ವೀರರಾಣಿ ಕಿತ್ತೂರ ಚೆನ್ನಮ್ಮ ಅವರ ಹೆಸರನ್ನು ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ನಾಮಕರಣ ಮಾಡಲು  ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ‌ ಹೇಳಿದರು.

21ನೇ ಶತಮಾನದ ‌ಮಹಿಳೆ ಕೂಡ ಎಲ್ಲ ರಂಗದಲ್ಲಿ ಮುನ್ನೆಲೆಗೆ ಬರಲು ಮಹಿಳೆಯರ ಅನುಕೂಲಕ್ಕಾಗಿ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ರೂಪಿಸಲಾಗಿದೆ ಎಂದರು.

ವಿನಾಕಾರಣ ಈ ಯೋಜನೆ ಬಗ್ಗೆ ಗೊಂದಲ ಸೃಷ್ಟಿಸಲು ಪ್ರಯತ್ನ ನಡೆಸಿರುವ ವಿಪಕ್ಷಗಳ ಹುನ್ನಾರ ಇನ್ನು ನಡೆಯುವುದಿಲ್ಲ. ಯಾವ ಗೊಂದಲಗಳು ಇಲ್ಲ ಶೇ.95. ರಷ್ಟು ಬಸ್ ಗಳಲ್ಲಿ ಮಹಿಳೆಯರು ಉಚಿತ ಸಂಚಾರಕ್ಕೆ ಅವಕಾಶ ಅನ್ವಯವಾಗುತ್ತಿದೆ., ಶೇ.6 ರಷ್ಟಿರುವ ಹವಾನಿಯಂತ್ರಿತ ವ್ಯವಸ್ಥೆಯ ಬಸ್ ಹೊರತು ಪಡಿಸಿ ಎಲ್ಲ ಬಸ್ ಈ ಸೌಲಭ್ಯ ದೊರಕಲಿದೆ ಎಂದರು.

Advertisement

ಈ ಯೋಜನೆಗಳಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆ, ಅಭಿವೃದ್ಧಿ ಹಿನ್ನೆಡೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ, ಆದರೆ 13 ಬಾರಿ ಬಜೆಟ್ ಮಂಡನೆಯ ಶ್ರೇಯಸ್ಸು ಹೊಂದಿರುವ ಹಾಗೂ ಆರ್ಥಿಕ ತಜ್ಞರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಮರ್ಥವಾಗಿದೆ. ಅಭಿವೃದ್ಧಿ ಪರ್ವ ಹಾಗೂ ಗ್ಯಾರಂಟಿ ಯೋಜನೆ ಅನುಷ್ಠಾನ ಎರಡೂ ಸಮಾನವಾಗಿ ತೆಗೆದುಕೊಂಡು ಹೋಗುವ ಬದ್ದತೆ ಮಾತ್ರವಲ್ಲ, ಜಾಣ್ಮೆಯೂ ಅವರಲ್ಲಿದೆ ಎಂದರು.

ಕಾಂಗ್ರೆಸ್ ಪಕ್ಷ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಮತದಾರರಿಗೆ ನೀಡಿದ್ದ ಪಂಚ ಗ್ಯಾರಂಟಿ ಭರವಸೆಗಳಲ್ಲಿ  ಪ್ರಥಮವಾಗಿ ಶಕ್ತಿ ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದರು.

ಕುಟುಂಬದಲ್ಲಿ ಹಲವು ರೀತಿಯಲ್ಲಿ ತ್ಯಾಗದ ಜೀವನ ನಡೆಸುವ ಮಹಿಳೆಯರ ಮಹತ್ವದ ಪಾತ್ರವಿದೆ. ಸ್ತ್ರೀ ಸಮಾನತೆ ಸಾರಿದ ಬಸವಾದಿ ಶರಣರ ಆಶಯ ಈಡೇರಿಸುವಲ್ಲಿ ನಮ್ಮ ಸರ್ಕಾರ ಹಾಗೂ ಸಿ.ಎಂ. ಸಿದ್ದರಾಮಯ್ಯ ದಿಟ್ಟ ಹೆಜ್ಜೆ ಇರಿಸಿದೆ. ಈ ಹಿಂದೆ ಅನ್ನಭಾಗ್ಯ ಯೋಜನೆಯ ಬಗ್ಗೆ ಟೀಕೆ ಕೇಳಿಬಂದಿತ್ತು, ಆದರೆ ಕೊರೊನಾ ಸಂದರ್ಭದಲ್ಲಿ ಈ ಯೋಜನೆಯೇ ಬಡವರಿಗೆ ನೆರವಾಯಿತು ಎಂಬುದನ್ನು ರಾಜ್ಯದ ಜನರು ಮರೆತಿಲ್ಲ ಎಂದರು.

ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್, ಎಸ್ಪಿ ಎಚ್.ಡಿ. ಆನಂದಕಯಮಾರ, ಸಿಇಓ ರಾಹುಲ್ ಶಿಂಧೆ, ಪಾಲಿಕೆ ಸದಸ್ಯರಾದ ದಿನೇಶ ಹಳ್ಳಿ, ಆಸೀಫ ಶಾನವಾಲೆ, ಅಲ್ತಾಫ ಇಟಗಿ, ಆರತಿ ಶಹಾಪೂರ, ರಾಜು ಚವ್ಹಾಣ, ಅಬ್ದುಲ್ ರಜಾಕ ಹೊರ್ತಿ, ಕೈಸರ ಇನಾಮದಾರ, ಜಿ.ಪಂ. ಮಾಜಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಸಾರಿಗೆ ಇಲಾಖೆಯ ಕಾರ್ಮಿಕ ಕಲ್ಯಾಣ ಮುಖ್ಯ ಅಧಿಕಾರಿ ಕೋಟ್ರೇಶ ವೇದಿಕೆ ಮೇಲಿದ್ದರು.

ಜಿಲ್ಲಾಧಿಕಾರಿ ಡಾ.ವಿ.ಬಿ. ದಾನಮ್ಮನವರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಟಿಕೇಟ್ ನೀಡುವ ಮೂಲಕ ಚಾಲನೆ: ವಿಜಯಪುರ ನಗರ ಕೇಂದ್ರ ಬಸ್ ನಿಲ್ದಾಣದಿಂದ ಹೊರಟ ಹುಬ್ಬಳ್ಳಿ ಹಾಗೂ ಬಿ.ಎಂ.ಪಾಟೀಲ ನಗರ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಟಿಕೆಟ್ ವಿತರಿಸಿ ಶಕ್ತಿ ಯೋಜನೆಗೆ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next