Advertisement
ಉತ್ಸವದಲ್ಲಿ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳನ್ನು ಜನರ ಮನತಣಿಸಲಿವೆ. ಸೋಮವಾರ ಬೆಳಗಾವಿಯಲ್ಲಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಿನಾಂಕ 23 ರಂದು ಸಂಜೆ 7 ಗಂಟೆಗೆ ಈ ಉತ್ಸವವನ್ನು ಉದ್ಘಾಟಿಸಲಿದ್ದು, ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಇತಿಹಾಸವನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದರು.
Related Articles
Advertisement
ಸಮಾರಂಭದ ಮುಖ್ಯ ವೇದಿಕೆಯಲ್ಲಿ ಇಂಚಲದ ಶಿವಾನಂದ ಭಾರತಿ ಭಜನಾ ಮಂಡಳಿಯಿಂದ ಭಜನಾ ಪದ, ಸಾಣಿಕೊಪ್ಪದ ಪವಾಡ ಬಸವೇಶ್ವರ ನಾಟ್ಯಸಂಘದಿಂದ ಶ್ರೀಕೃಷ್ಣ ಪಾರಿಜಾತ ಬಯಲಾಟ, ವಿಜಯಪುರದ ಗಿರಿಮಲ್ಲಪ್ಪ ಭಜಂತ್ರಿ ಅವರಿಂದ ಶಹನಾಯಿ ವಾದನ, ಬೆಳಗಾವಿಯ ರಾಜಪ್ರಭು ಧೋತ್ರೆ ಸುಗಮ ಸಂಗೀತ, ಲೋಕಾಪುರದ ಮಂಜುಳಾ ಸಂಬಾಳಮಠ ಅವರಿಂದ ಜಾನಪದ ಸಂಗೀತ, ಬಾಗಲಕೋಟೆಯ ಶ್ರೇಯಾ ಪ್ರಹ್ಲಾದ ಕುಲಕರ್ಣಿ ಅವರಿಂದ ಭರತನಾಟ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಬಾರಿಯ ಉತ್ಸವದಲ್ಲಿ ಕುಸ್ತಿ ಸ್ಪರ್ಧೆಗಳನ್ನು ಕೈಬಿಡಲಾಗಿದೆ. ಆದರೆ ಸೈಕ್ಲಿಂಗ್, ವಾಲಿಬಾಲ್ ಸ್ಪರ್ಧೆಗಳು ನಡೆಯಲಿವೆ.
ದಿನಾಂಕ 24 ರಂದು ಬೆಳಿಗ್ಗೆ 7 ಗಂಟೆಗೆ ಸೈಕ್ಲಿಂಗ್ ಸ್ಪರ್ಧೆಗಳು ನಡೆಯಲಿದ್ದು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಉಳವಪ್ಪ ಉಳ್ಳಿಗಡ್ಡಿ ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಕಿತ್ತೂರಿನ ಸರಕಾರಿ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಮುಕ್ತ ವಾಲಿಬಾಲ್ ಸ್ಪರ್ಧೆಗಳು ನಡೆಯಲಿದ್ದು, ಕಿತ್ತೂರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಚಿನ್ನಪ್ಪ ಮುತ್ನಾಳ ಸ್ಪರ್ಧೆಗಳನ್ನು ಉದ್ಘಾಟಿಸುವರು. 24 ರಂದು ಬೆಳಿಗ್ಗೆ 10 ಗಂಟೆಗೆ ಮುಖ್ಯವೇದಿಕೆಯಲ್ಲಿ ನಡೆಯುವ ವಿಚಾರ ಸಂಕಿರಣವನ್ನು ಶಾಸಕ ಮಹಾಂತೇಶ ದೊಡ್ಡಗೌಡರ ಉದ್ಘಾಟಿಸಲಿದ್ದಾರೆ.
ಧಾರವಾಡದ ಕನ್ನಡ ಸಂಶೋಧನಾ ಸಂಸ್ಥೆಯ ಪ್ರಭಾರಿ ನಿರ್ದೇಶಕ ಡಾ| ಆರ್ ಎಂ ಷಡಕ್ಷರಯ್ಯ ಆಶಯ ಭಾಷಣ ಮಾಡಲಿದ್ದಾರೆ. ನಂತರ ವಿವಿಧ ವಿಷಯಗಳ ಕುರಿತು ಏಳು ಗೋಷ್ಠಿಗಳು ನಡೆಯಲಿವೆ. ನಂತರ ಮಧ್ಯಾಹ್ನ 3 ಗಂಟೆಯಿಂದ ವಿವಿಧ ಕಲಾವಿದರಿಂದ ಶಹನಾಯಿ, ಗಾಯನ, ಜಾನಪದ ಸಂಗೀತ, ನೃತ್ಯ, ನೃತ್ಯ ರೂಪಕ, ರಾಜಣ್ಣ ಜೇವರ್ಗಿ ತಂಡದವರಿಂದ ನಾಟಕ, ವಚನ ಸಂಗೀತ, ನೃತ್ಯ ವೈವಿಧ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇದಾದ ಬಳಿಕ ರಾತ್ರಿ 9.15 ರಿಂದ ಖ್ಯಾತ ಗಾಯಕ ವಿಜಯಪ್ರಕಾಶ ಹಾಗೂ ತಂಡದವರು ನಡೆಸಿಕೊಡುವ ರಸಮಂಜರಿ ಕಾರ್ಯಕ್ರಮ ಉತ್ಸವದ ಪ್ರಮುಖ ಆಕರ್ಷಣೆಯಾಗಿದೆ.
ಸಂಜೆ 7 ಗಂಟೆಗೆ ಮುಖ್ಯ ವೇದಿಕೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ನಿಚ್ಚಣಕಿ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮಿಗಳು, ಕಾದರವಳ್ಳಿ ಸೀಮೀಮಠದ ಡಾ ಪಾಲಾಕ್ಷ ಶಿವಯೋಗಿಶ್ವರ, ಹಾಗೂ ಬೆ„ಲೂರು ನಿಷ್ಕಲ ಮಂಟಪದ ನಿಜಗುಣಪ್ರಭು ತೋಂಟದಾರ್ಯ ಸ್ವಾಮಿಗಳು ಸಾನ್ನಿಧ್ಯವಹಿಸುವರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಂ ರಾಮಚಂದ್ರಗೌಡ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರು ಮತ್ತು ರಾಣಿ ಚನ್ನಮ್ಮನ ವಿಜಯೋತ್ಸವದ ರೂವಾರಿಗಳಿಗೆ ಸನ್ಮಾನ ಮಾಡಲಾಗುವುದು ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು.