ಒಂದು ಕಡೆ “ಗಾಳಿಪಟ’ ಚಿತ್ರಕ್ಕೆ 11 ವರ್ಷ, ಇನ್ನೊಂದು ಕಡೆ “ಗಾಳಿಪಟ-2′ ಆರಂಭ … ಈ ಎರಡು ಸಂಭ್ರಮಕ್ಕೆ ಯೋಗರಾಜ್ ಭಟ್ ಹಾಗೂ ತಂಡ ಸಾಕ್ಷಿಯಾಗಿತ್ತು. “ಗಾಳಿಪಟ’ ಚಿತ್ರಕ್ಕೆ 11 ವರ್ಷ ತುಂಬಿದ ದಿನವೇ ತಮ್ಮ ಹೊಸ ಚಿತ್ರ “ಗಾಳಿಪಟ-2′ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಮಾಧ್ಯಮ ಮುಂದೆ ಬಂದಿದ್ದರು ಭಟ್ಟರು. ಈ ಬಾರಿಯೂ ಭಟ್ಟರು ತಮ್ಮ ಹೊಸ ಚಿತ್ರಕ್ಕಾಗಿ ದೊಡ್ಡ ತಂಡವನ್ನು ಸೇರಿಸಿದ್ದಾರೆ. ಈ ಬಾರಿ ಭಟ್ಟರದ್ದು ಮಲ್ಟಿಸ್ಟಾರ್ ಸಿನಿಮಾ ಎನ್ನಬಹುದು. ಮೂವರು ನಾಯಕಿಯರು ಹಾಗೂ ಐವರು ನಾಯಕರಿದ್ದಾರೆ. ಜೊತೆಗೆ ಅನಂತ್‌ನಾಗ್ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. “ಗಾಳಿಪಟ-2′ ಚಿತ್ರದಲ್ಲಿ ಯೋಗರಾಜ್ ಭಟ್ಟರು ಬೇರೆ ಬೇರೆ ಪ್ರಾದೇಶಿಕತೆಯನ್ನು ಒಟ್ಟು ಸೇರಿಸಿದ್ದಾರೆ. ಕರಾವಳಿ, ವಿದೇಶ, ಉತ್ತರ ಕರ್ನಾಟಕ, ಮಂಡ್ಯ ಹಾಗೂ ಬೆಂಗಳೂರು … ಈ ಭಾಗದ ಪಾತ್ರಗಳೊಂದಿಗೆ ಭಟ್ಟರು ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರವನ್ನು ಮಹೇಶ್ ದಾನನ್ನವರ್ ನಿರ್ಮಿಸುತ್ತಿದ್ದಾರೆ. “ಶು ತಾಯ್’ ಎಂಬ ಪಂಜಾಬಿ ಸಿನಿಮಾ ನಿರ್ಮಿಸಿರುವ ಮಹೇಶ್ ಅವರಿಗೆ ಇದು ಮೊದಲ ಸಿನಿಮಾ.
ಚಿತ್ರದಲ್ಲಿ ನಾಯಕರಾಗಿ ಶರಣ್, ಪವನ್( ಲೂಸಿಯಾ), ರಿಷಿ ಹಾಗೂ ನಾಯಕಿಯರಾಗಿ ಸೋನಾಲ್ ಮೊಂತೆರೋ, ಶರ್ಮಿಳಾ ಮಾಂಡ್ರೆ ಈಗಾಗಲೇ ಆಯ್ಕೆಯಾಗಿದ್ದು, ಇನ್ನೊಬ್ಬಳು ಮಾಡೆಲ್ ಹಾಗೂ ಚೈನಾ ಹುಡುಗಿಯ ಆಯ್ಕೆ ನಡೆಯಬೇಕಿದೆ. ಚಿತ್ರದ ಬಗ್ಗೆ ಮಾತನಾಡುವ ಯೋಗರಾಜ್ ಭಟ್, “ಮೊದಲ “ಗಾಳಿಪಟ’ಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. “ಗಾಳಿಪಟ-2′ ಮಾಡಬೇಕೆಂದುಕೊಂಡಾಗಲೇ ಮೊದಲ ಪಾತ್ರಗಳು ಯಾವುದೂ ಇರಲ್ಲ ಅಂದುಕೊಂಡಿದ್ದೆ. ಅದರಂತೆ ಮಾಡುತ್ತಿದ್ದೇನೆ. ಈ ಚಿತ್ರದಲ್ಲಿ ಇವತ್ತಿನ ಹುಡುಗರ ಬಾಳು-ಗೋಳು ಪ್ರೇಮ-ಕಾಮ, ಜೀವನವನ್ನು ನೋಡುವ ಹಾಗೂ ಹೆಣೆಯುವ ರೀತಿಯನ್ನು ಹೇಳಲು ಹೊರಟಿದ್ದೇನೆ. ಮೊದಲ ಬಾರಿಗೆ ಜಯಂತ್ ಕಾಯ್ಕಿಣಿ ಹಾಗೂ ನಾನು ಜೊತೆಗೆ ಕುಳಿತು ಸ್ಕ್ರಿಪ್ಟ್ ಮಾಡುತ್ತಿದ್ದೇವೆ’ ಎನ್ನುವುದು ಅವರ ಮಾತು. ನಿರ್ಮಾಪಕ ಮಹೇಶ್ ಈ ಸಿನಿಮಾವನ್ನು ಅಕ್ಟೋಬರ್ 4ಕ್ಕೆ ಬಿಡುಗಡೆ ಮಾಡಲು ಮುಂದಾಗಿದ್ದಾರಂತೆ. “ಮಹೇಶ್ ಚಿತ್ರವನ್ನು ಅಕ್ಟೋಬರ್ 4 ಬಿಡುಗಡೆ ಮಾಡುವುದಾಗಿ ಘೋಷಿಸುವ ಎಂದರು. ಆಗ ನಾನು ಹೇಳಿದೆ, “ಬಿಡುಗಡೆಯ ತಾರೀಕು ಹಾಗೂ ತಿಂಗಳು ಬೇಕಾದರೆ ಹೇಳುವ, ಆದರೆ ಇಸವಿ ಬೇಡ. ಇದು ಕರ್ನಾಟಕ’ ಎಂದು. ಈ ಬಾರಿ ಅಕ್ಟೋಬರ್ 4ಕ್ಕೆ ರಿಲೀಸ್ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇವೆ’ ಎನ್ನುವುದು ಭಟ್ಟರ ಮಾತು. ಚಿತ್ರದ ಬಹುತೇಕ ಭಾಗ ವಿದೇಶದಲ್ಲಿ ಚಿತ್ರೀಕರಣವಾಗಲಿದೆಯಂತೆ.
ಚಿತ್ರದ ಬಗ್ಗೆ ಮಾತನಾಡುವ ಜಯಂತ್ ಕಾಯ್ಕಿಣಿ, “ಮೊದಲ “ಗಾಳಿಪಟ’ ಹುಟ್ಟಿ 11 ವರ್ಷ. ಆಗಲೂ ನಾನಿದ್ದೆ, ಈಗಲೂ ನಾನಿದ್ದೇನೆ ಎಂಬ ಖುಷಿ. “ಗಾಳಿಪಟ’ ಸ್ವತ್ಛಂದವಾಗಿ ಹಾರಬೇಕಾದರೆ ಸೂತ್ರ ಗಟ್ಟಿ ಇರಬೇಕು. ಆ ಸೂತ್ರ ಯಾವುದಾದರೂ ಇರಬಹುದು, ಜೀವನಪ್ರೀತಿ, ಭಾವನಾತ್ಮಕ ಕೇಂದ್ರ ಅಥವಾ ಸಂಬಂಧಗಳು … ಈ ತರಹದ ಅಂಶಗಳೊಂದಿಗೆ ಈ ಸಿನಿಮಾ ಸಾಗಲಿದೆ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಬೆಂಗಳೂರಿನ ಬಗ್ಗೆ ಆಕರ್ಷಿತರಾಗಿ ಬರುವ ಯುವಕರ ಕಣ್ಣಿನ ಖುಷಿ, ದುಃಖ, ಹತಾಶೆಯನ್ನು ಕಟ್ಟಿಕೊಡುವ ಅಪರೂಪದ ನಿರ್ದೇಶಕ ಯೋಗರಾಜ್ ಭಟ್. ಈ ಚಿತ್ರದಲ್ಲಿ ಅದನ್ನು ಕಟ್ಟಿಕೊಡಲಿದ್ದಾರೆ’ ಎಂದರು. ಹಿರಿಯ ನಟ ಅನಂತ್‌ನಾಗ್, ಭಟ್ಟರ ಜೊತೆಗೆ ಈ ಹಿಂದಿನ ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವ ಹಂಚಿಕೊಂಡರು. ರಂಗಾಯಣ ರಘು ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಉಳಿದಂತೆ ಚಿತ್ರದಲ್ಲಿ ನಟಿಸುತ್ತಿರುವ ಶರಣ್ ಇಲ್ಲಿ ಉತ್ತರ ಕರ್ನಾಟಕದ ಹುಡುಗನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜನಪದ ಕಲೆಯನ್ನು ಮೈಗೂಢಿಸಿಕೊಂಡಿರುವ ಹುಡುಗನಾದರೆ, ಸೋನಾಲ್ ಮೊಂತೆರೋ ಕರಾವಳಿಯ ಯಕ್ಷಗಾನ ಕಲಾವಿದೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ತರಬೇತಿ ಕೂಡಾ ಪಡೆಯುತ್ತಿದ್ದಾರಂತೆ. ರಿಷಿ ಮಂಡ್ಯ ಹುಡುಗನಾದರೆ, ಶರ್ಮಿಳಾ ವಿದೇಶದಿಂದ ಬಂದ ಹುಡುಗಿಯಾಗಿ ನಟಿಸಲಿದ್ದಾರೆ. ಪವನ್ ಪಕ್ಕಾ ಬೆಂಗಳೂರು ಹುಡುಗನಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತವಿದೆ. ಮೊದಲ ಬಾರಿಗೆ ಭಟ್ಟರ ಚಿತ್ರಕ್ಕೆ ಕೆಲಸ ಮಾಡುತ್ತಿರುವ ಖುಷಿ ಅರ್ಜುನ್ ಅವರದು.