Advertisement

ಪುಸ್ತಕ-ಪೆನ್ನು ಹಿಡಿವ ಕೈಗಳಲ್ಲಿ ಸೌಟು!

08:54 PM Apr 05, 2021 | Team Udayavani |

ಚಿತ್ರದುರ್ಗ: ನಗರದ ಎಸ್‌ಆರ್‌ಎಸ್‌ ಕಾಲೇಜಿನ ಎಪಿಜೆ ಅಬ್ದುಲ್‌ ಕಲಾಂ ಸೈನ್ಸ್‌ ಪಾರ್ಕಿನ ವಾತಾವರಣ ಘಮಘಮಿಸುತ್ತಿತ್ತು. ಸ್ಟಾರ್‌ ಹೋಟೆಲಿನ ಶೆಫ್‌ಗಳನ್ನು ನಾಚಿಸುವಂತೆ ದಿರಿಸು ತೊಟ್ಟಿದ್ದ ವಿದ್ಯಾರ್ಥಿಗಳ ಕೈಯಲ್ಲಿ ಬಾಣಲೆ, ಸೌಟು, ತರಕಾರಿ ಕಾಣುತ್ತಿದ್ದವು.

Advertisement

ಕಾಲೇಜಿನಿಂದ ಆಯೋಜಿಸಿದ್ದ ಕಿಚನೋಮಿಕ್ಸ್‌ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತರಹೇವಾರಿ ಖಾದ್ಯಗಳನ್ನು ತಯಾರಿಸಿ ಸೈ ಅನ್ನಿಸಿಕೊಂಡರು. ಸದಾ ಓದು, ಬರಹದಲ್ಲಿ ಮಗ್ನರಾಗುತ್ತಿದ್ದ ವಿದ್ಯಾರ್ಥಿಗಳು ಅಡುಗೆಯ ಅಭಿರುಚಿಯನ್ನೂ ಬೆಳೆಸಿಕೊಳ್ಳಲಿ ಎಂಬ ಕಾರಣಕ್ಕೆ ಕಾಲೇಜಿನಿಂದ ಪ್ರತಿವರ್ಷ ಕಿಚನೋಮಿಕ್ಸ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.

ಈ ವರ್ಷ ಕೂಡ ವಿದ್ಯಾರ್ಥಿಗಳು ಬಾಯಲ್ಲಿ ನೀರೂರಿಸುವ ತಿನಿಸುಗಳನ್ನು ತಯಾರಿಸಿದ್ದರು. ಈ ವರ್ಷ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದ ಹತ್ತು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಅವರ ಅಭಿರುಚಿಗೆ ತಕ್ಕಂತೆ ವಿವಿಧ ಖಾದ್ಯಗಳನ್ನು ತಯಾರಿಸಿ ಅದರಲ್ಲಿ ಉಪಯೋಗಿಸಿರುವ ಹಣ್ಣು, ತರಕಾರಿ, ಸಾಂಬಾರು ಪದಾರ್ಥಗಳು ಹಾಗೂ ಅವುಗಳ ಔಷಧ ಗುಣಗಳು, ಪೌಷ್ಟಿಕತೆ, ಆರೋಗ್ಯಕ್ಕೆ ಲಭ್ಯವಾಗುವ ಜೀವಸತ್ವಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದರು. ಹೋಟೆಲ್‌ಗ‌ಳಲ್ಲಿ ಇಂತಹ ರುಚಿಯಾದ ಅಡುಗೆಗಳನ್ನು ತಯಾರಿಸಿ ಜನರನ್ನು ಗಮನ ಸೆಳೆಯುವುದು ಹೇಗೆ, ಹೋಟೆಲ್‌ಗ‌ಳು ಖರ್ಚು ಮಾಡುವ ಹಣ ಹಾಗೂ ಪಡೆದುಕೊಳ್ಳುವ ಲಾಭಗಳ ಬಗ್ಗೆ ಒಂದೊಂದು ತಂಡ ತಮ್ಮದೇ ಆದ ನಿರೂಪಣಾ ಶೈಲಿಯಲ್ಲಿ ತೀರ್ಪುಗಾರರ ಎದುರು ಸ್ಪಷ್ಟಪಡಿಸಿದರು.

ಸಂಸ್ಥೆಯ ಕಾರ್ಯದರ್ಶಿ ಸುಜಾತ ಲಿಂಗಾರೆಡ್ಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮುಂದೆ ಉನ್ನತ ವ್ಯಾಸಂಗಕ್ಕೆ ಹೋದಾಗ ಹೋಟೆಲ್‌ ಮ್ಯಾನೇಜ್‌ಮೆಂಟ್‌ನಂತಹ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವಾಗ ಇಂತಹ ಕಾರ್ಯಕ್ರಮದ ಅನುಭವಗಳು ಅತ್ಯಂತ ಉಪಯುಕ್ತವಾಗುತ್ತವೆ ಎಂದರು. ಪ್ರಾಚಾರ್ಯ ಈ. ಗಂಗಾಧರ ಮಾತನಾಡಿ, ಜೀವನವೇ ಒಂದು ಅಭಿರುಚಿ, ಸಂತೋಷದ ಜೀವನವನ್ನು ಸಾಗಿಸಲು ಅಭಿರುಚಿಗಳು ಮುಖ್ಯ. ಯಾರಿಗೆ ಅಭಿರುಚಿಗಳು ಹೆಚ್ಚಿರುತ್ತವೊ ಅಂಥವರ ಬದುಕು ಸುಖಮಯವಾಗಿರುತ್ತದೆ.

ಬಹುರಾಷ್ಟ್ರೀಯ ಕಂಪನಿಗಳಲ್ಲಿ ದುಡಿದರೆ ಮಾತ್ರ ಸಂತೋಷ ಸಿಗುವುದಿಲ್ಲ, ಬದಲು ಒಂದು ಅಡುಗೆ ಮನೆಯಲ್ಲಿ ರುಚಿ-ರುಚಿಯಾದ ಅಡುಗೆಗಳನ್ನು ಸಿದ್ಧಪಡಿಸಿ ತಮ್ಮ ನೈಪುಣ್ಯತೆಯೊಂದಿಗೆ ಜೀವನದಲ್ಲಿ ಸುಖವಾಗಿರಬಹುದು ಎಂದು ತಿಳಿಸಿದರು. ಸಂಸ್ಥೆಯ ಆಡಳಿತಾಧಿ ಕಾರಿ ಡಾ| ಟಿ.ಎಸ್‌. ರವಿ, ಸಂಚಾಲಕ ಎಂ.ವಿ. ನಟರಾಜ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next