Advertisement

‘ಕಿಸಾನ್‌ ಸಮ್ಮಾನ್‌’ನಿಧಿ ಯೋಜನೆಯಡಿ 9.5 ಕೋಟಿ ರೈತರಿಗೆ ಮೊದಲ ಕಂತಿನ ಹಣ ಬಿಡುಗಡೆ

08:57 PM May 14, 2021 | Team Udayavani |

ಹೊಸದಿಲ್ಲಿ/ಬೆಂಗಳೂರು: ನಿರೀಕ್ಷಿಸಿದಂತೆಯೇ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ಪ್ರಸಕ್ತ ವರ್ಷದ ಮೊದಲ ಕಂತಿನ ಹಣವನ್ನು ಶುಕ್ರವಾರ ಪ್ರಧಾನಿ ಮೋದಿ ಬಿಡುಗಡೆ ಮಾಡಿದ್ದಾರೆ. ದೇಶದ ಒಟ್ಟು 9.5 ಕೋಟಿ ರೈತರಿಗೆ 20,667 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಕರ್ನಾಟಕದ 55.36 ಲಕ್ಷ ರೈತ ಕುಟುಂಬಗಳಿಗೆ ಒಟ್ಟು 985.61 ಕೋಟಿ ರೂ. ಲಭಿಸಲಿದೆ.

Advertisement

ಮೊದಲ ಕಂತಿನ ಹಣ ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ, ಇದುವರೆಗೆ ಪಿಎಂ-ಕಿಸಾನ್‌ ಯೋಜನೆ ಅಡಿಯಲ್ಲಿ 1,35,000 ಕೋಟಿ ರೂ.ಗಳನ್ನು ರೈತರ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಲಾಗಿದೆ. ಶುಕ್ರವಾರ ಬಿಡುಗಡೆಗೊಳಿಸಿರುವುದು ಯೋಜನೆಯ 8ನೇ ಕಂತು ಎಂದರು.

ಕಳೆದ ವರ್ಷ ಕೊರೊನಾ ಕಾಲದಲ್ಲಿ 60,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿತ್ತು. ಈ ಯೋಜನೆಯಂತೆ ವರ್ಷಕ್ಕೆ ಪ್ರತೀ ರೈತರಿಗೆ 6,000 ರೂ. ನೀಡಲಾಗುತ್ತಿದೆ. ಇದನ್ನು ಮೂರು ಭಾಗಗಳಾಗಿ ವಿಂಗಡಿಸಿ ತಲಾ 2,000 ರೂ. ಹಾಕಲಾಗುತ್ತಿದೆ. ಇದೇ ಮೊದಲ ಬಾರಿಗೆ ಪಶ್ಚಿಮ ಬಂಗಾಲದ ರೈತರೂ ಯೋಜನೆಯಡಿ ಹಣ ಪಡೆದಿದ್ದಾರೆ ಎಂದರು.

ಇದನ್ನೂ ಓದಿ :ಪುಣೆಯಲ್ಲಿ ಲಸಿಕೆ ಉತ್ಪಾದಿಸಲಿದೆ  ಭಾರತ್ ಬಯೋಟೆಕ್ ಇಂಟರ್ ನ್ಯಾಷನಲ್ ಲಿಮಿಟೆಡ್..!

ಅಜ್ಞಾತ ಶತ್ರುವಿನ ಜತೆ ಹೋರಾಟ
ದೇಶ ಇಂದು ಎದುರಿಸುತ್ತಿರುವ ಕೊರೊನಾ ಕಷ್ಟಕಾಲವನ್ನು ತನ್ನ ಮಾತಿನ ನಡುವೆ ಮೋದಿ ನೆನೆದರು. ನಾವಿಂದು ಕಣ್ಣಿಗೆ ಕಾಣದ ಶತ್ರುವಿನ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ. ಕಳೆದ 100 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ಸಾಂಕ್ರಾಮಿಕ ರೋಗ ಇಡೀ ಜಗತ್ತನ್ನು ಹೆಜ್ಜೆ ಹೆಜ್ಜೆಗೂ ಪರೀಕ್ಷಿಸುತ್ತಿದೆ. ಕೊರೊನಾದಿಂದ ಸಾವನ್ನಪ್ಪಿದವರ ಕುಟುಂಬದವರ ನೋವಿನಲ್ಲಿ ನಾನೂ ಭಾಗಿಯಾಗಿದ್ದೇನೆ. ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳಿ. ಈ ಹೋರಾಟದಲ್ಲಿ ಅದೊಂದೇ ನಮ್ಮ ಮುಂದಿರುವ ಅಸ್ತ್ರ ಎಂದರು.

Advertisement

ರಾಜ್ಯಕ್ಕೆ 985 ಕೋ.ರೂ. ಬಿಡುಗಡೆ
ಪಿಎಂ-ಕಿಸಾನ್‌ ಯೋಜನೆಯಡಿ ರಾಜ್ಯದ 55.36 ಲಕ್ಷ ರೈತರು ಮೊದಲ ಕಂತಾಗಿ 2 ಸಾವಿರ ರೂ.ಗಳನ್ನು ಪಡೆದರು. ಇದಕ್ಕಾಗಿ ಕೇಂದ್ರ ಸರಕಾರ 985 ಕೋಟಿ ರೂ. ನೀಡಿದೆ. ವೀಡಿಯೊ ಕಾನ್ಫರೆನ್ಸ್‌ನಲ್ಲಿ ಸಿಎಂ ಯಡಿಯೂರಪ್ಪ ಅವರು ಭಾಗಿಯಾಗಿದ್ದರು. 2019ರ ಮಾರ್ಚ್‌ನಿಂದ 2021ರ ಮಾರ್ಚ್‌ವರೆಗೆ ರಾಜ್ಯದ 55.06 ಲಕ್ಷ ರೈತ ಕುಟುಂಬಗಳಿಗೆ ಕೇಂದ್ರ ಸರಕಾರವು ಒಟ್ಟು 6936.98 ಕೋಟಿ ರೂ. ಸಹಾಯಧನ ವರ್ಗಾಯಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next