ದೇವನಹಳ್ಳಿ: ವಾರ್ಷಿಕ 6 ಸಾವಿರ ಆರ್ಥಿಕ ನೆರವು ದೊರೆಯುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ತಾಲೂಕಿನ ಎಲ್ಲ ರೈತರು ಅರ್ಹರು ಎಂದು ಜಿಲ್ಲಾಧಿಕಾರಿ ಸಿ.ಎಸ್.ಕರೀಗೌಡ ತಿಳಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಪಿಡಿಒ, ಗ್ರಾಮ ಲೆಕ್ಕಾಧಿಕಾರಿ, ರಾಜ್ಯಸ್ವ ನಿರೀಕ್ಷಕರೊಂದಿಗೆ ಕಿಸಾನ್ ಸಮ್ಮಾನ್ ಯೋಜನೆ ಅನುಷ್ಠಾನದ ಸಭೆಯಲ್ಲಿ ಮಾತನಾಡಿದರು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ವಾರ್ಷಿಕದಲ್ಲಿ 6 ಸಾವಿರ ರೂ.ಹಣ ಬರಲಿದೆ. ಅದು 3 ಕಂತುಗಳಲ್ಲಿ ರೈತರ ಖಾತೆಗೆ ಜಮೆ ಆಗಲಿದೆ. ಈಗಾಗಲೇ ಅಧಿಕಾರಿಗಳ ಸಭೆ ಕರೆದು ಯೋಜನೆಗೆ ಸಂಬಂಧಿಸಿದಂತೆ ಮಾರ್ಗದರ್ಶನ ಮತ್ತು ಸಲಹೆ ನೀಡಲಾಗಿದೆ. ತಾಲೂಕಿಗೆ ಒಬ್ಬರಂತೆ ಹಾಗೂ ಹೋಬಳಿಗಳಿಗೂ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ತಾಲೂಕಿನ ನೋಡಲ್ ಅಧಿಕಾರಿಯಾಗಿ ಮಂಜುನಾಥ್, ಕುಂದಾಣ ಮತ್ತು ಚನ್ನರಾಯಪಟ್ಟಣ ಎರಡು ಹೋಬಳಿಗಳಿಗೆ ನೋಡಲ್ ಅಧಿಕಾರಿಯಾಗಿ ಮನಿಲಾ, ವಿಜಯಪುರ ಹೋಬಳಿಗೆ ಲಕ್ಷ್ಮಣ್, ಕಸಬಾ ಹೋಬಳಿಗೆ ಶಿವಮೂರ್ತಿ ಅವರನ್ನು ನೇಮಕ ಮಾಡಲಾಗಿದೆ. ಅರ್ಜಿಗಳನ್ನು ತಕ್ಷಣ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಪ್ರತಿ ಗ್ರಾಮದಲ್ಲಿ ಪಿಡಿಒ ಹಾಗೂ ರಾಜ್ಯಸ್ವ ನಿರೀಕ್ಷರು, ಗ್ರಾಮ ಲೆಕ್ಕಾಧಿಕಾರಿಗಳು ನೀಡಿರುವ ಅರ್ಜಿಯಲ್ಲಿ ರೈತರು ಸಂಪೂರ್ಣ ವಿಳಾಸ ಸಂಗ್ರಹಿಸಬೇಕು. ರೈತರಿಂದ ದೂರುಗಳು ಕೇಳಿಬರಬಾರದು. ಹೆಚ್ಚಿನ ಪ್ರಚಾರ ನೀಡಿ ರೈತರಿಗೆ ತಲುಪಬೇಕು.
ದೇವನಹಳ್ಳಿ ತಾಲೂಕಿನಲ್ಲಿ 60 ಸಾವಿರ ರೈತರಿದ್ದು, ಪ್ರಯೋಜನ ಪಡೆಯಲಿದ್ದಾರೆ. ಅರ್ಜಿಗಳನ್ನು ವಿತರಿಸಲಾಗುತ್ತಿದ್ದು, ನಿಯಮಗಳನ್ನು ಪಾಲಿಸಬೇಕು. ಸರ್ಕಾರಿ ನೌಕರರು, ತೆರಿಗೆ ಪಾವತಿಸುವವರ, ವಕೀಲರು, ತಾಪಂ ಮತ್ತು ಜಿಪಂ ಅಧ್ಯಕ್ಷರು, ಸದಸ್ಯರು ಈ ಯೋಜನೆಗೆ ಒಳಪಡುವುದಿಲ್ಲ ಎಂದು ಹೇಳಿದರು.
ದಾಖಲೆಗಳು: ಅರ್ಜಿ ನೀಡಲು ಜೂ.25 ಕೊನೆದಿನ. ನಾಡ ಕಚೇರಿ, ಗ್ರಾಪಂ ಕಚೇರಿಗಳಿಗೆ ಸಂಪರ್ಕಿಸಿ ರೈತರು, ಸ್ವಯಂ ಘೋಷಣೆ, ಆಧಾರ್, ಬ್ಯಾಂಕ್ ಖಾತೆ ನಕಲು ಪ್ರತಿ ಹಾಗೂ ಭಾವಚಿತ್ರಗಳನ್ನು ನೀಡಬೇಕು.
ಎಸಿ ಮಂಜುನಾಥ್, ತಹಶೀಲ್ದಾರ್ ಕೇಶವಮೂರ್ತಿ, ಇಒ ಮುರುಡಯ್ಯ, ತಾಪಂ ಸಹಾಯಕ ನಿರ್ದೇಶಕ ಪ್ರದೀಪ್, ವಿವಿಧ ಇಲಾಖಾಧಿಕಾರಿಗಳು ಇದ್ದರು.