ಕಿರಿಕ್ ಮಾಡಿದರೆ ಯಾರಿಗೆ ತಾನೇ ಇಷ್ಟವಾಗುತ್ತದೆ? ಕಿರಿಕ್ ಮಾಡುವವರನ್ನು ಯಾರು ತಾನೇ ಹೆಚ್ಚು ಹೊತ್ತು ಸಹಿಸಿಕೊಂಡಾರು? ಅದರಲ್ಲೂ ಪಡ್ಡೆ ಹುಡುಗರು ಮಾಡುವ ಕಿರಿಕ್‌ಗಳ ಬಗ್ಗೆ ಕೇಳಿದ್ರೆ, ಉರಿದು ಬೀಳುವವರೇ ಹೆಚ್ಚು. ಆದರೆ ಇಂಥ ಹುಡುಗರು ಮಾಡುವ ಕಿರಿಕ್‌ಗಳಿಂದ ಬೇರೆಯವರಿಗೆ ಒಳ್ಳೆಯದಾಗುತ್ತಿದ್ದರೆ, ಹೇಗಿರುತ್ತದೆ? ಇಂಥದ್ದೇ ಒಂದು ಎಳೆಯನ್ನು ಇಟ್ಟುಕೊಂಡು ಈ ವಾರ ತೆರೆಗೆ ಬಂದಿರುವ ಸಿನಿಮಾ “ಕಿರಿಕ್ ಶಂಕರ್’.
ಸಿನಿಮಾದ ಟೈಟಲ್ ಕೇಳುತ್ತಿದ್ದಂತೆ, ಬಹುತೇಕರಿಗೆ ಅರ್ಥವಾಗುವಂತೆ ಯಾವಾಗಲೂ “ಕಿರಿಕ್’ ಮಾಡಿಕೊಳ್ಳುತ್ತಿರುವ “ಶಂಕರ್’ ಎಂಬ ಹುಡುಗ ಮತ್ತವನ ಗ್ಯಾಂಗ್‌ನ ಸ್ಟೋರಿ ಈ ಸಿನಿಮಾ. ಹಳ್ಳಿಯೊಂದರಲ್ಲಿ ಅವರಿವರಿಗೆ “ಕಿರಿಕ್’ ಮಾಡಿ ಯಾಮಾರಿಸಿ “ಶಂಕರ್’ ಮತ್ತವನ ಸ್ನೇಹಿತರು ಆರಾಮಾಗಿರುತ್ತಾರೆ. ಇಂಥ ಊರಿಗೆ ಬರುವ ನಾಯಕಿಗೆ, ಶಂಕರ್ ಮತ್ತವನ ಬೇಜವಾಬ್ದಾರಿ ಹುಡುಗರು ಸ್ನೇಹಿತರಾಗುತ್ತಾರೆ. ಯಾವಾಗಲೂ ಕಿರಿಕ್ ಮಾಡಿಕೊಂಡು ಅವರಿಂದ ಬೈಸಿಕೊಳ್ಳುತ್ತಿದ್ದ ಈ ಹುಡುಗರನ್ನು ತಿದ್ದಿ ಸರಿದಾರಿಗೆ ತರುವ ಹೊತ್ತಿಗೆ, ನಾಯಕಿ ಸಿಲುಕಿಕೊಂಡಿರುವ ಸಮಸ್ಯೆಯೊಂದು ಬಹಿರಂಗವಾಗುತ್ತದೆ. ಆಗ ಶಂಕರ್ ಮತ್ತವನ ಗೆಳೆಯರು ಸೇರಿ ನಾಯಕಿಯನ್ನು ರಕ್ಷಿಸುವ ಸಾಹಸಕ್ಕೆ ಮುಂದಾಗುತ್ತಾರೆ. ಆಮೇಲೆ ಏನಾಗುತ್ತದೆ ಎನ್ನುವುದೇ “ಕಿರಿಕ್ ಶಂಕರ್’ ಸಿನಿಮಾದ ಕಥಾಹಂದರ.
ಇದನ್ನೂ ಓದಿ:ಅಂಬರೀಶ್ ಜನ್ಮದಿನ: ರೆಬೆಲ್‌ಸ್ಟಾರ್ ನೆನಪಿನಲ್ಲಿ ಅಭಿಮಾನಿಗಳ ಸಾಮಾಜಿಕ ಕಾರ್ಯ
ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ಬಂದು ಹೋಗಿರುವಂತೆ, ನಾಯಕನ ಜೀವನದಲ್ಲಿ ನಾಯಕಿ ಪ್ರವೇಶವಾಗಿ ಅವನನ್ನು ಬದಲಾಯಿಸುವುದು. ಆನಂತರ ನಡೆಯುವ ಒಂದಷ್ಟು ಸನ್ನಿವೇಶಗಳು ಈ ಸಿನಿಮಾದಲ್ಲೂ ಇರುವುದರಿಂದ ಕಥೆಯಲ್ಲಿ ಹೊಸದೇನೂ ನಿರೀಕ್ಷಿಸುವಂತಿಲ್ಲ. ಆದರೆ ಚಿತ್ರಕಥೆಯಲ್ಲಿ ಒಂದಷ್ಟು ಕಾಮಿಡಿ, ಸಸ್ಪೆನ್ಸ್, ಆ್ಯಕ್ಷನ್ ಸನ್ನಿವೇಶಗಳನ್ನು ಹದವಾಗಿ ಬೆರೆಸಿ ಎಲ್ಲೂ ಪ್ರೇಕ್ಷಕರಿಗೆ ಬೋರ್ ಹೊಡೆಸದಂತೆ ಸಿನಿಮಾವನ್ನು ನಡೆಸುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ. ಚಿತ್ರದ ಮೇಕಿಂಗ್, ಡೈಲಾಗ್ಸ್, ಸಂಕಲನ, ಸೌಂಡ್ ಎಫೆಕ್ಟ್ ಮತ್ತಿತರ ತಾಂತ್ರಿಕ ಕಾರ್ಯಗಳಿಗೆ ಚಿತ್ರತಂಡ ಇನ್ನಷ್ಟು ಗಮನ ನೀಡಿದ್ದರೆ, “ಕಿರಿಕ್ ಶಂಕರ್’ ಇನ್ನಷ್ಟು ಪರಿಣಾಮಕಾರಿಯಾಗಿ ತೆರೆಗೆ ಬರುವ ಸಾಧ್ಯತೆಗಳಿದ್ದವು.
ನಾಯಕ ಲೂಸ್‌ಮಾದ ಯೋಗಿ ಸಹಜ ಅಭಿನಯದಲ್ಲಿ ಗಮನ ಸೆಳೆದರೆ, ನಾಯಕಿ ಅದ್ವಿಕಾ ರೆಡ್ಡಿ ಅಂದ ಮತ್ತು ಅಭಿನಯ ಎರಡರಲ್ಲೂ ತೆರೆಮೇಲೆ ಗಮನ ಸೆಳೆಯುತ್ತಾರೆ. ಬಲರಾಜವಾಡಿ, ಪ್ರಶಾಂತ್ ಸಿದ್ದಿ ತಮಗೆ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇನ್ನುಳಿದ ಪಾತ್ರಗಳ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ. ಒಟ್ಟಾರೆ ಒಂದಷ್ಟು ಕಿರಿಕ್, ಕೊನೆಯಲ್ಲೊಂದು ಮೆಸೇಜ್ ನೋಡುವ ಬಯಸುವವರು ಒಮ್ಮೆ “ಕಿರಿಕ್ ಶಂಕರ್’ನ ದರ್ಶನ ಮಾಡಿ ಬರಲು ಅಡ್ಡಿಯಿಲ್ಲ.
ಜಿ.ಎಸ್.ಕೆ ಸುಧನ್