ಬೆಂಗಳೂರು: ಬಿಗ್‌ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ ಮೇಲೆ ಪಬ್‌ವೊಂದರಲ್ಲಿ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸದಾಶಿವನಗರದ ಪೊಲೀಸರು ಐವರನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
ಡಿಸೆಂಬರ್ 2ರ ಮಧ್ಯರಾತ್ರಿ ಸದಾಶಿವನಗರದ ಪಬ್‌ನಲ್ಲಿ ಘಟನೆ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ಅನಿಲ್, ವಿಜಯ್, ಅಜಯ್ ಸೇರಿ ಐವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಡಿಸಿಪಿ ಎಂ.ಎನ್. ಅನುಚೇತ್ ಮಾಹಿತಿ ನೀಡಿದ್ದಾರೆ.
ಪಬ್‌ನಲ್ಲಿ ನಡೆದ ಗಲಾಟೆಯಲ್ಲಿ ಕಿರಿಕ್ ಕೀರ್ತಿ ಅವರ ತಲೆಗೆ ಬಿಯರ್ ಬಾಟಲ್‌ಗಳಿಂದ ಹಲ್ಲೆ ನಡೆದಿತ್ತು. ಈ ವೇಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವರು, ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದರು. ದೂರು ಆಧರಿಸಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಅಂದಿನ ಗಲಾಟೆಗೆ ಕಾರಣ ಏನು ಎಂಬುದನ್ನು ಪೊಲೀಸರ ಎದುರು ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ.
ಪಬ್‌ನಲ್ಲಿ ಕಿರಿಕ್ ಕೀರ್ತಿ ಕುಳಿತಿದ್ದ ಪಕ್ಕದ ಟೇಬಲ್‌ನಲ್ಲಿ ಅನಿಲ್, ವಿಜಯ್, ಅಜಯ್ ಹಾಗೂ ಸ್ನೇಹಿತರು ಕುಳಿತಿದ್ದರು. ಈ ವೇಳೆ ಅನಿಲ್ ತನಗೆ ಕಿರಿಕ್ ಕೀರ್ತಿಯ ಪರಿಚಯವಿದೆ ಎಂದು ಸ್ನೇಹಿತರ ಬಳಿ ಹೇಳಿಕೊಂಡಿದ್ದ. ಹಾಗಿದ್ದರೆ ಹೋಗಿ ಮಾತನಾಡಿಸು ಎಂದು ಸ್ನೇಹಿತರು ಒತ್ತಾಯಿಸಿದ್ದರು. ಈ ವೇಳೆ ಕಿರಿಕ್ ಕೀರ್ತಿ ಬಳಿ ಬಂದು ನಾನ್ಯಾರು ಗೊತ್ತಾಯ್ತಾ ಎಂದು ಅನಿಲ್ ಕೇಳಿದ. ನನಗೆ ಗೊತ್ತಿಲ್ಲ ಎಂದು ಕೀರ್ತಿ ಉತ್ತರಿಸಿದರು. ಈ ಸಂದರ್ಭದಲ್ಲಿ ಪಬ್‌ನಲ್ಲಿದ್ದ ಅನಿಲ್ ಸ್ನೇಹಿತರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಸೆರೆಹಿಡಿಯುತ್ತಿದ್ದರು.
“ವೀಡಿಯೋ ಯಾಕೆ ಮಾಡಿಕೊಳ್ಳುತ್ತಿದ್ದೀರಿ?’ ಎಂದು ಕಿರಿಕ್ ಕೀರ್ತಿ ಪ್ರಶ್ನಿಸಿದ್ದರು. ಈ ವೇಳೆ ನಡೆದ ಗಲಾಟೆಯಲ್ಲಿ ಕೀರ್ತಿ ಅವರಿಗೆ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು ಐವರು ಪರಾರಿಯಾಗಿದ್ದರು.