Advertisement
“ದುಡಿತವೇ ನನ್ನ ದೇವರು, ಲೋಕ ದೇವಕುಲಬೆವರೆ ಹೂ, ಹಣ್ಣು, ಕಾಯ್, ಕಣ್ಣೀರೇ ತೀರ್ಥಂ
ಎನ್ನೊಂದಿಗರ ಬಾಳ ಸಾವುನೋವಿನ ಗೋಳ
ಉಂಡಿಹೆನು ಸಮಪಾಲ – ನನಗದೆ ಪ್ರಸಾದಂ”
Related Articles
Advertisement
ಒಂದೊಮ್ಮೆ ಇವರು ಬೆಂಗಳೂರಿನಂಥ ಮಹಾನಗರಗಳಲ್ಲಿ ಇದ್ದಿದ್ದರೆ ರಾಷ್ಟ್ರಕವಿ ಬಿರುದಿಗೆ ಮಾನ್ಯರಾಗುತ್ತಿದ್ದರು ಎಂಬ ಮಾತು ಸಾಹಿತ್ಯ ವಲಯದಿಂದಲೇ ಕೇಳಿಬಂದಿತ್ತು. ಆದರೆ ಡಾ| ಕಯ್ನಾರರು ಯಾವತ್ತೂ ಪ್ರಚಾರದ ಹಿಂದೆ ಬಿದ್ದವರೇ ಅಲ್ಲ. ನೇರ ನಡೆ ನುಡಿ, ಸರಳತೆಯನ್ನು ಕೊನೆಯ ವರೆಗೂ ಉಳಿಸಿಕೊಂಡವರು. ಅದೇ ಕಾರಣಕ್ಕೆ ಇವರು ಇತರೆಲ್ಲ ಸಾಹಿತಿಗಳಿಗಿಂತ ಭಿನ್ನವಾಗಿ ನಿಲ್ಲುತ್ತಾರೆ ಹಾಗೂ ಹೆಚ್ಚು ಆಪ್ತರಾಗುತ್ತಾರೆ.
1915 ಜೂನ್ 8ರಂದು ದುಗ್ಗಪ್ಪ ರೈ – ದೈಯಕ್ಕೆ ದಂಪತಿಯ ಪುತ್ರನಾಗಿ ಜಗತ್ತಿನ ಬೆಳಕು ಕಂಡಿದ್ದ ಡಾ| ಕಯ್ನಾರ ಕಿಂಞಣ್ಣ ರೈ ಅವರು ಎಂ.ಎ. ಪದವೀಧರರು. ಕನ್ನಡ ಮತ್ತು ಸಂಸ್ಕೃತದಲ್ಲಿ ಅಪಾರ ಜ್ಞಾನ ಸಂಪಾದಿಸಿಕೊಂಡಿರುವ ಅವರು ರಾಷ್ಟ್ರಕವಿ ಗೋವಿಂದ ಪೈಗಳಿಗೆ ಸಮಾನರಾಗಿ ನಿಲ್ಲಬಹುದಾದ ಸಾಹಿತಿ.
ಕಾಸರಗೋಡಿನ ಯೋಧ: ಡಾ| ಕಯ್ನಾರರು “ಕಾಸರಗೋಡಿನ ಯೋಧ’ ಎಂದೇ ಗುರುತಿಸಿಕೊಂಡವರು. ಅದಕ್ಕೆ ಕಾರಣ ಅವರು ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಬೇಕು, ಮಹಾಜನ ವರದಿ ಜಾರಿಯಾಗಬೇಕು ಎಂದು ತಮ್ಮ ಜೀವನದುದ್ದಕ್ಕೂ ಆಗ್ರಹಿಸುತ್ತಲೇ ಬಂದಿದ್ದರು ಮತ್ತು ಅದಕ್ಕಾಗಿ ಅವರು ಮಾಡಿರುವ ಹೋರಾಟ ಅಷ್ಟಿಷ್ಟಲ್ಲ. ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ ಮಾಡಿ, ಕರ್ನಾಟಕದ ಹಲವಾರು ಮುಖ್ಯಮಂತ್ರಿಗಳನ್ನು ಅವರ ಅಧಿಕಾರಾ ವಧಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿ ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂದು ಕೇಳಿಕೊಂಡಿದ್ದರು. ಆದರೆ ಇವರಿಗೆ ಸಿಕ್ಕಿದ್ದು ಕೇವಲ ಭರವಸೆ ಮಾತ್ರವಾಗಿತ್ತು. ನಾನು ಸಾಯುವ ಮೊದಲಾದರೂ ಕಾಸರಗೋಡನ್ನು ಕರ್ನಾಟಕದ ಭಾಗವಾಗಿ ನೋಡಬೇಕಿತ್ತು ಎಂದು ಎಷ್ಟೋ ವೇದಿಕೆಯಲ್ಲಿ ಹೇಳಿಕೊಂಡು ಕಣ್ಣೀರು ಸುರಿಸಿದ್ದರು.
ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಲು ಆಗ್ರಹಿಸಿ ಭಾಷಾವಾರು ರಾಜ್ಯ ವಿಭಜನೆ ಸಂದರ್ಭ ನಡೆಸಿದ್ದ ಹೋರಾಟಕ್ಕೆ ಇವರು ಮುಂಚೂಣಿ ನಾಯಕರಾಗಿದ್ದರು. ಕಾಸರಗೋಡಿನ ಬಗ್ಗೆ ಡಾ| ಕಯ್ನಾರರು ಬರೆದಿರುವ “ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ’ ಕವನವು ಅವರಿಗೆ ಅತೀವ ಖ್ಯಾತಿಯನ್ನು ತಂದು ಕೊಟ್ಟಿದೆ.
ಅಪ್ಪಟ ಕೃಷಿಕ: ಡಾ| ಕಯ್ನಾರರು ಎಷ್ಟು ಎತ್ತರಕ್ಕೆ ಏರಿದರೂ, ಜನಪ್ರಿಯತೆ ಪಡೆದುಕೊಂಡರೂ ಕೃಷಿಯನ್ನು ಕೈಬಿಟ್ಟವರಲ್ಲ. ಕೃಷಿಯೇ ನನ್ನ ದೇವರು. ಕೃಷಿಯಿಂದಲೇ ನೆಮ್ಮದಿಯ ಬದುಕು, ಗ್ರಾಮೀಣಾಭಿವೃದ್ಧಿ ಸಾಧ್ಯ ಎಂದು ನಂಬಿಕೊಂಡವರು. ಗಾಂಧೀಜಿಯ ಕರೆಗೆ ಓಗೊಟ್ಟು ಹಳ್ಳಿಗೆ ಬಂದು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡವರು. ಆರೋಗ್ಯ ವಂತರಾಗಿರಲು ಕೃಷಿ ಮತ್ತು ಗ್ರಾಮೀಣ ವಾಸ ಒಂದು ಸೂಕ್ತ ದಾರಿ ಎಂಬ ನಿಲುವು ಅವರದ್ದಾಗಿತ್ತು. ಕೃಷಿ ಕುರಿತು ಹಲವಾರು ಕೃತಿಗಳನ್ನು ಬರೆದಿದ್ದಾರೆ. ಸ್ವಾತಂತ್ರ್ಯ ದ ಬಗ್ಗೆಯೂ ಸಾಕಷ್ಟು ಕವನಗಳನ್ನು, ಲೇಖನಗಳನ್ನು ಬರೆದಿರುವ ಮೇರು ಸಾಹಿತಿ ಇವರು.
ಕಯ್ನಾರರ ಮತ್ತೂಂದು ವಿಶೇಷ ಗುಣ ಎಂದರೆ ಯಾರು ಪತ್ರ ಬರೆದರೂ ಅದಕ್ಕೆ ಕೂಡಲೇ ಉತ್ತರಿ ಸುತ್ತಿದ್ದುದು. ಪತ್ರ ಕೈಗೆ ತಲುಪಿದ ಕೂಡಲೇ “ನಿಮ್ಮ ಪತ್ರ ತಲುಪಿದೆ’ ಎಂಬ ಒಂದು ವಾಕ್ಯದ ಮರುಪತ್ರ ಬರೆಯುವುದನ್ನು ರೂಢಿಸಿಕೊಂಡಿರುವುದು ಅವರ ಸರಳತೆಯನ್ನು ತೋರಿಸುತ್ತದೆ.
ದುಡಿತವೇ ನನ್ನ ದೇವರು: ಡಾ| ಕಯ್ನಾರ ಕಿಂಞಣ್ಣ ರೈ ಅವರು ಬರೆದಿರುವ ಅವರ ಆತ್ಮಕಥೆ ದುಡಿತವೇ ನನ್ನ ದೇವರು ಕೃತಿ 1995ರಲ್ಲಿ ಮೊದಲ ಆವೃತ್ತಿಯಾಗಿ ಪ್ರಕಟಗೊಂಡು, 1997ರಲ್ಲಿ ಮರು ಮುದ್ರ ಣಗೊಂಡಿತು. ಅವರ ಜೀವನದ ಏರಿಳಿತಗಳು, ಸಾಧನೆಗಳು, ಅವುಗಳ ಹಿಂದಿರುವ ಶಕ್ತಿ, ಹೋರಾಟದ ದಿನಚರಿ, ಸಾಹಿತ್ಯದ ವ್ಯಾಪ್ತಿ, ಹುಟ್ಟೂರು… ಹೀಗೆ ಎಲ್ಲವನ್ನೂ ಅವರು ಈ ಕೃತಿಯಲ್ಲಿ ಪಡಿಮೂಡಿಸಿದ್ದಾರೆ. ಸರಳ ಕನ್ನಡದಲ್ಲಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ, ಜತೆಗೆ ಓದಿಸಿಕೊಂಡು ಹೋಗುವ ಸಾಮಾನ್ಯ ಶೈಲಿಯಲ್ಲಿ ಅವರು ಬರೆದಿರುವ ಈ ಕೃತಿಯು ಈ ಮಹಾನ್ ಶಕ್ತಿಯ ಬಗ್ಗೆ ತಿಳಿದುಕೊಳ್ಳಲು ನಮಗೆ ತುಂಬಾ ಸಹಕಾರಿಯಾಗಿದೆ.
ಪ್ರಮುಖ ಪ್ರಶಸ್ತಿಗಳು: 1969ರಲ್ಲಿ ಶ್ರೇಷ್ಠ ಅಧ್ಯಾಪಕ ರಾಷ್ಟ್ರ ಪ್ರಶಸ್ತಿ, ಡಾಕ್ಟರೆಟ್, 1970ರಲ್ಲಿ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ, 1985ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 1990ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗೌರವ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ… ಇತ್ಯಾದಿ.
ಡಾ| ಕಯ್ನಾರ ಕಿಂಞಣ್ಣ ರೈ ಅವರು ಶತಾಯುಷಿಯಾಗಿ 101 ವರ್ಷಗಳ ಸಾರ್ಥಕ ಬದುಕನ್ನು ಕಂಡು 2015ರ ಆಗಸ್ಟ್ 9ರಂದು ಇಹಲೋಕವನ್ನು ತ್ಯಜಿಸಿದರು. ಈ ಮೂಲಕ ಕಾಸರಗೋಡಿನ ಕನ್ನಡ ಹೋರಾಟದ ಪ್ರಮುಖ ಕೊಂಡಿಯೊಂದು ಕಳಚಿಕೊಂಡಿತು. ಅಷ್ಟು ಮಾತ್ರವಲ್ಲದೆ ಕನ್ನಡ ಸಾಹಿತ್ಯ ಲೋಕ ಅಪ್ರತಿಮ ಸವ್ಯಸಾಚಿ ಬರಹಗಾರರೋರ್ವರನ್ನು ಕಳೆದುಕೊಂಡಿತು.
ಪುತ್ತಿಗೆ ಪದ್ಮನಾಭ ರೈ