Advertisement

ಮುಂದಿನ ಸುತ್ತಿನ ರೇಸ್‌ನಲ್ಲಿ ಪಂಜಾಬ್‌-ಹೈದರಾಬಾದ್‌

10:13 PM Oct 23, 2020 | mahesh |

ದುಬಾೖ: ಐಪಿಎಲ್‌ ಈಗ ರೋಚಕ ಘಟ್ಟ ತಲುಪಿದೆ. ಪ್ಲೇ ಆಫ್ ಪ್ರವೇಶಕ್ಕಾಗಿ ಸಾಮರ್ಥ್ಯ ಮೀರಿ ಹೋರಾಡುವ ಸ್ಥಿತಿ ಕನಿಷ್ಠ 5 ತಂಡಗಳ ಮುಂದೆ ಉದ್ಭವಿಸಿದೆ. ಕೊನೆಯ ಒಂದು ಸ್ಥಾನಕ್ಕಾಗಿ ಈ ತಂಡಗಳ ನಡುವೆ ರೋಚಕ ಹಣಾಹಣಿ ನಡೆಯಲಿರುವ ಸೂಚನೆಯೊಂದು ದಟ್ಟವಾಗಿದೆ. ಅದರಲ್ಲೂ ಪಂಜಾಬ್‌-ಹೈದರಾಬಾದ್‌ ತಂಡಗಳ ಮುಂದಿನ ಹಾದಿ ಬಹಳ ಕಠಿನ. 10 ಪಂದ್ಯಗಳನ್ನಾಡಿರುವ ಇತ್ತಂಡಗಳು ತಲಾ 5 ಜಯದೊಂದಿಗೆ 10 ಅಂಕ ಹೊಂದಿವೆ. ಶನಿವಾರ ಇತ್ತಂಡಗಳ ನಡುವೆ ಮಹತ್ವದ ಸ್ಪರ್ಧೆ ನಡೆಯಲಿದ್ದು, ಇಲ್ಲಿ ಗೆಲ್ಲಲೇಬೇಕಾದ ಒತ್ತಡ ಎರಡೂ ತಂಡಗಳ ಮೇಲಿದೆ.

Advertisement

ಚೈತನ್ಯ ತುಂಬಿದ ಗೇಲ್‌
ಸತತ ಸೋಲಿನಿಂದ ಕಂಗೆಟ್ಟಿದ್ದ ಪಂಜಾಬ್‌ಗ ಗೇಲ್‌ ಆಗಮನ ಅದೃಷ್ಟದ ಬಾಗಿಲೊಂದನ್ನು ತೆರೆದಿದೆ ಎನ್ನಲಡ್ಡಿಯಿಲ್ಲ. ಹಾಗೆಯೇ ಬ್ಯಾಟಿಂಗ್‌ ಬರ ಅನುಭವಿಸುತ್ತಿದ್ದ ಆಸೀಸ್‌ ಆಲ್‌ರೌಂಡರ್‌ ಮ್ಯಾಕ್ಸ್‌ ವೆಲ್‌ ಕಳೆದ ಪಂದ್ಯದಲ್ಲಿ ತುಸು ಚೇತರಿಕೆ ಕಂಡಿರುವುದು ತಂಡದ ಪಾಲಿನ ಶುಭ ಸಮಾಚಾರ. ಪೂರಣ್‌ ಕೂಡ ಬ್ಯಾಟಿಂಗ್‌ ಪರಾಕ್ರಮ ತೋರ್ಪಡಿಸುತ್ತಿದ್ದಾರೆ. ರಾಹುಲ್‌ ಪಡೆಯೀಗ ಹ್ಯಾಟ್ರಿಕ್‌ ಗೆಲುವಿನೊಂದಿಗೆ ಮುನ್ನುಗುತ್ತಿದ್ದು, ಹೈದರಾಬಾದನ್ನು ಮಣಿಸಿದರೆ ಪ್ಲೇ ಆಫ್ ಕನಸು ಜೀವಂತವಾಗಿರಲಿದೆ.

ಹೈದರಾಬಾದ್‌ ಸಮಸ್ಯೆ
ಕಳೆದ ಪಂದ್ಯದಲ್ಲಿ ರಾಜಸ್ಥಾನವನ್ನು 8 ವಿಕೆಟ್‌ಗಳಿಂದ ಭರ್ಜರಿಯಾಗಿ ಮಣಿಸಿದರೂ ಹೈದರಾಬಾದ್‌ ಸಮಸ್ಯೆಯೇನೂ ಪರಿಹಾರಗೊಂಡಿಲ್ಲ. ಬೇರ್‌ಸ್ಟೋ-ವಾರ್ನರ್‌ ಅವರ ಓಪನಿಂಗ್‌ ವೈಫ‌ಲ್ಯ ಮಧ್ಯಮ ಕ್ರಮಾಂಕದ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ಆದರೆ ವಿಂಡೀಸ್‌ ಆಲ್‌ರೌಂಡರ್‌ ಜಾಸನ್‌ ಹೋಲ್ಡರ್‌ ಆಗಮನದಿಂದ ತಂಡ ಹೆಚ್ಚು ಸಮತೋಲನಗೊಂಡಿರುವುದು ಸುಳ್ಳಲ್ಲ. ಕಳೆದ ಪಂದ್ಯದ ಹೀರೋಗಳಾದ ಮನೀಷ್‌ ಪಾಂಡೆ ಮತ್ತು ವಿಜಯ್‌ ಶಂಕರ್‌ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇರಿಸಿದೆ.

ಅಗ್ರಸ್ಥಾನ ಗಟ್ಟಿಗೊಳಿಸಲು ಡೆಲ್ಲಿ ಹೊರಾಟ
ಶನಿವಾರದ ಮೊದಲ ಪಂದ್ಯದಲ್ಲಿ ಡೆಲ್ಲಿ ಅಗ್ರಸ್ಥಾನ ಗಟ್ಟಿಪಡಿಸಲು ಹೋರಾಟ ನಡೆಸಲಿದೆ. ಅಯ್ಯರ್‌ ಪಡೆಯ ಎದುರಾಳಿ ಕೆಕೆಆರ್‌. ಇದು 4ನೇ ಸ್ಥಾನದಲ್ಲಿದ್ದು, ಇಲ್ಲಿಯೇ ಇನ್ನಷ್ಟು ಗಟ್ಟಿಯಾಗಿ ಬಳಿಕ ಮೇಲೇರುವ ಯೋಜನೆಯಲ್ಲಿದೆ. ಡೆಲ್ಲಿ ಆರಂಭಕಾರ ಶಿಖರ್‌ ಧವನ್‌ ಸತತ ಸೆಂಚುರಿ ಸಿಡಿಸಿ ಪ್ರಚಂಡ ಫಾರ್ಮ್ ಪ್ರದರ್ಶಿಸಿದ್ದಾರೆ. ಆದರೆ ಯುವ ಆಟಗಾರ ಪೃಥ್ವಿ ಶಾ ಅವರ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಅವರು ಈ ಪಂದ್ಯದಿಂದ ಹೊರಗುಳಿದರೂ ಅಚ್ಚರಿ ಇಲ್ಲ. ಮಧ್ಯಮ ಕ್ರಮಾಂಕದಲ್ಲಿ ನಾಯಕ ಶ್ರೇಯಸ್‌ ಅಯ್ಯರ್‌, ಪಂತ್‌ ಮತ್ತು ಸ್ಟೋಯಿನಿಸ್‌ ಆಧಾರವಾಗಿ ನಿಲ್ಲಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next