Advertisement

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

08:39 AM Apr 25, 2024 | Team Udayavani |

ಹೈದರಾಬಾದ್‌: ಹೈದರಾಬಾದ್‌ ಮ್ಯಾಚ್‌ ಎನ್ನುವಾಗ ಎದುರಾಳಿಗಳಿಗೆ ಢವಢವ ಆಗುವುದು ಈ ಐಪಿಎಲ್‌ನ ವಿಶೇಷ. ಈಗಾಗಲೇ 3 ಸಲ 250 ರನ್‌ ಗಡಿ ದಾಟಿ, ಐಪಿಎಲ್‌ನ ಅತ್ಯಧಿಕ ಮೊತ್ತದ ದಾಖಲೆಯನ್ನು 2 ಸಲ ಮುರಿದಿರುವ ಎಸ್‌ಆರ್‌ಎಚ್‌ ಬ್ಯಾಟಿಂಗ್‌ “ಶಕ್ತಿ ಕಣಜ’ವಾಗಿದೆ. ಇದರಲ್ಲಿ ಅತ್ಯಧಿಕ ರನ್ನಿನ ದಾಖಲೆ ನಿರ್ಮಾಣವಾದದ್ದು ಆರ್‌ಸಿಬಿ ವಿರುದ್ಧ ಎಂಬುದನ್ನು ಮರೆಯಲು ಸಾಧ್ಯವಿಲ್ಲ. ಇದೀಗ ಇತ್ತಂಡಗಳು ದ್ವಿತೀಯ ಸುತ್ತಿನ ಸ್ಪರ್ಧೆಗೆ ಅಣಿಯಾಗಿವೆ.

Advertisement

“ಹೊಸ ಅಧ್ಯಾಯ’ದ ಭರವಸೆಯನ್ನು ಈಡೇರಿ ಸಲು ಸಂಪೂರ್ಣ ವಿಫ‌ಲವಾಗಿರುವ ಆರ್‌ಸಿಬಿ ಪಾಲಿಗೆ ಈ ಋತು ಈಗಾಗಲೇ “ಮುಗಿದ ಅಧ್ಯಾಯ’ ಆಗಿದೆ. ಎಂಟರಲ್ಲಿ ಕೇವಲ ಒಂದು ಪಂದ್ಯ ಗೆದ್ದು, -1.046ರಷ್ಟು ಕಳಪೆ ರನ್‌ರೇಟ್‌ ಹೊಂದಿರುವ ಬೆಂಗಳೂರು ತಂಡ ಪವಾಡ ಸಂಭವಿಸಿದರೂ ಅಗ್ರ ನಾಲ್ಕಕ್ಕೆ ನೆಗೆಯದು. ಹೀಗಾಗಿ ಉಳಿದೆಲ್ಲವೂ ಆರ್‌ಸಿಬಿ ಪಾಲಿಗೆ ಲೆಕ್ಕದ ಭರ್ತಿಯ ಪಂದ್ಯಗಳಾಗಿವೆ. ಆದರೆ ಒಂದಿಷ್ಟು ಅಮೋಘ ಗೆಲುವು, ಅಸಾಮಾನ್ಯ ಸಾಧನೆ, ಅದ್ಭುತ ನಿರ್ವಹಣೆಯಿಂದ ತನ್ನ ಪ್ರತಿಷ್ಠೆಯನ್ನು ಮರಳಿ ಗಳಿಸಲು ಇನ್ನೂ ಅವಕಾಶ ಇದೆ.

ಕಳೆದ ಪಂದ್ಯದಲ್ಲಿ ತನ್ನೆದುರು ದಾಖಲೆಯ ಮೊತ್ತ ಪೇರಿಸಿದ ಹೈದರಾಬಾದ್‌ ವಿರುದ್ಧವೇ ಇಂಥದೊಂದು ಪರಾಕ್ರಮ ಮೆರೆದರೆ ಆರ್‌ಸಿಬಿಯ ಅಷ್ಟೂ ಹೀನಾಯ ಪ್ರದರ್ಶನವನ್ನು ಸ್ವಲ್ಪ ಕಾಲ ವಾದರೂ ಮರೆಯ ಬಹು ದಾಗಿದೆ. ತನ್ನ ತವರಿನ ಅಂಗಳದಲ್ಲಿ ಹೈದರಾ ಬಾದ್‌ಗೆ 287 ರನ್‌ ಬಿಟ್ಟು ಕೊಟ್ಟ ಆರ್‌ಸಿಬಿ, ಅವರ ತವರಿನಲ್ಲಿ ದೊಡ್ಡ ಮಟ್ಟ ದಲ್ಲಿ ಸೇಡು ತೀರಿಸಿಕೊಂಡರೆ ಇದಕ್ಕಿಂತ ಮಿಗಿಲಾದ ಖುಷಿ ಬೇರೇನಿದೆ?!

ಟಾರ್ಗೆಟ್‌ 300?!
ಆರ್‌ಸಿಬಿಯ ದೊಡ್ಡ ದೌರ್ಬಲ್ಯ ಇರುವುದೇ ಬೌಲಿಂಗ್‌ ವಿಭಾಗದಲ್ಲಿ. ಆದರೆ ಹೈದರಾಬಾದ್‌ಗೆ ಯಾವ ಬೌಲಿಂಗ್‌ ಯೂನಿಟ್‌ ಆದರೂ ಒಂದೇ. ಮುಂಬೈ, ಡೆಲ್ಲಿ ಬೌಲರ್‌ಗಳನ್ನೂ ಅದು ಚೆಂಡಾಡಿತ್ತು. ಡೆಲ್ಲಿ ವಿರುದ್ಧವಂತೂ ಪವರ್‌ ಪ್ಲೇಯಲ್ಲೇ ನೋಲಾಸ್‌ 125 ರನ್‌ ಪೇರಿಸಿ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ಹೀಗಾಗಿ ಆರ್‌ಸಿಬಿ ವಿರುದ್ಧ ಪುನಃ ಮೊದಲು ಬ್ಯಾಟಿಂಗ್‌ ನಡೆಸುವ ಅವಕಾಶ ಪಡೆದರೆ ಹೈದರಾಬಾದ್‌ ಮತ್ತೂಂದು ಬೃಹತ್‌ ಮೊತ್ತ ಪೇರಿಸುವ ಎಲ್ಲ ಸಾಧ್ಯತೆ ಇದೆ. ತನ್ನ ಟಾರ್ಗೆಟ್‌ 300 ರನ್‌ ಎಂದು ಹೇಳಿಕೊಂಡಿರುವ ಹೈದರಾಬಾದ್‌, ಇಂಥದೊಂದು ಸಾಮರ್ಥ್ಯವುಳ್ಳ ತಂಡವಂತೂ ಹೌದು. ಹೆಡ್‌, ಅಭಿಷೇಕ್‌ ಶರ್ಮ, ಕ್ಲಾಸೆನ್‌-ಈ ತ್ರಿಮೂರ್ತಿಗಳನ್ನು ನಿಯಂತ್ರಿಸುವುದು ಸುಲಭವಲ್ಲ.

ಹೈದರಾಬಾದ್‌ ಈವರೆಗೆ ತವರಲ್ಲಿ ಆಡಿದ್ದು 2 ಪಂದ್ಯ ಮಾತ್ರ. ಎರಡನ್ನೂ ಗೆದ್ದಿದೆ. ಮುಂಬೈ ಮತ್ತು ಚೆನ್ನೈ ವಿರುದ್ಧ ಈ ಗೆಲುವು ಸಾಧಿಸಿದೆ.

Advertisement

ಆರ್‌ಸಿಬಿ ಬ್ಯಾಟಿಂಗ್‌ ಬಲ
ಒಂದು ವೇಳೆ ಆರ್‌ಸಿಬಿಗೆ ಮೊದಲು ಬ್ಯಾಟಿಂಗ್‌ ಅವಕಾಶ ಲಭಿಸಿದರೆ ಅದು ಬೃಹತ್‌ ಮೊತ್ತವನ್ನು ಪೇರಿಸಿ ಸವಾಲೊಡ್ಡಬೇಕಿದೆ. ಬೌಲಿಂಗ್‌ ದುರ್ಬಲ ವಾದರೂ, ಆರ್‌ಸಿಬಿಯ ಬ್ಯಾಟಿಂಗ್‌ ವಿಭಾಗಕ್ಕೆ ಇಂಥದೊಂದು ತಾಕತ್ತು ಇದ್ದೇ ಇದೆ. ಇಲ್ಲಿ ಇನ್ನೊಂದು ಸಂಗತಿಯನ್ನು ಗಮನಿಸಬೇಕಿದೆ, ಚೇಸಿಂಗ್‌ ನಲ್ಲಿ ಹೈದರಾಬಾದ್‌ ತುಸು ಹಿಂದೆ. ಹಾಗೆಯೇ ಬೌಲಿಂಗ್‌ ಕೂಡ ಬಲಿಷ್ಠವಲ್ಲ.

ಮೊದಲ ಸುತ್ತಿನಲ್ಲಿ…
ಸರಿಯಾಗಿ 10 ದಿನಗಳ ಹಿಂದೆ ಇತ್ತಂಡಗಳು ಬೆಂಗಳೂರಿನಲ್ಲಿ ಮುಖಾಮುಖೀ ಆದಾಗ ರನ್‌ ಪ್ರವಾಹವೇ ಹರಿದಿತ್ತು. ಹೈದರಾಬಾದ್‌ 3ಕ್ಕೆ 287 ರನ್‌ ಪೇರಿಸಿ ಐಪಿಎಲ್‌ನಲ್ಲಿ ಸಾರ್ವಕಾಲಿಕ ಮೊತ್ತದ ದಾಖಲೆ ನಿರ್ಮಿಸಿತ್ತು. ಇದೇ ಸೀಸನ್‌ನಲ್ಲಿ ಮುಂಬೈ ವಿರುದ್ಧ ತಾನೇ ನಿರ್ಮಿಸಿದ 3ಕ್ಕೆ 277 ರನ್ನುಗಳ ದಾಖಲೆಯನ್ನು ಮುರಿದು ಮತ್ತೂಂದು ಎತ್ತರ ತಲುಪಿತ್ತು.

ಆರ್‌ಸಿಬಿ ಕೂಡ ದಿಟ್ಟ ಜವಾಬು ನೀಡಿ 7ಕ್ಕೆ 262 ರನ್‌ ಪೇರಿಸಿತ್ತು. ಈ ಹೈ ಸ್ಕೋರಿಂಗ್‌ ಪಂದ್ಯದಲ್ಲಿ ಸೋಲಿನ ಅಂತರ ಬರೀ 25 ರನ್‌ ಎಂಬುದು ಉಲ್ಲೇಖನೀಯ.

Advertisement

Udayavani is now on Telegram. Click here to join our channel and stay updated with the latest news.

Next