Advertisement
ಕಳೆದ ವಾರವಷ್ಟೇ ಖ್ಯಾತ ವನ್ಯಜೀವಿ ಛಾಯಾಗ್ರಾಹಕರಾದ ಕೆ. ಡಿ. ಸತ್ಯನಾರಾಯಣ ಮತ್ತು ಗೌತಮ್ ರಮೇಶ್ ಕರೆ ಮಾಡಿ, ಮಹಾರಾಷ್ಟ್ರದ ಬಾಂದಾ ಕಾಡಿನಲ್ಲಿ ಓರಿಯಂಟಲ್ ಡ್ವಾರ್ಫ್ ಕಿಂಗ್ ಫಿಷರ್ ಗೂಡು ಕಟ್ಟಿ ಮರಿ ಮಾಡಿದ್ದಾವೆಂದೂ, ಅಲ್ಲಿಗೆ ಹೋಗಿ ಛಾಯಾಗ್ರಹಣ ಮಾಡೋಣವೆಂದೂ ಸಲಹೆ ಇತ್ತರು. ತರಾತುರಿಯಲ್ಲಿ ಕ್ಯಾಮರಾ ಬ್ಯಾಗ್ ಹೆಗಲಿಗೇರಿಸಿ, ಗೋವಾ ತಲುಪಿ ಅಲ್ಲಿಂದ ಎರಡು ತಾಸು ಕಾರಿನಲ್ಲಿ ಪ್ರಯಾಣಿಸಿ, ಬೆಳಗಿನ ಆರು ಗಂಟೆಯ ಹೊತ್ತಿಗೆ ಬಾಂದಾ ತಲುಪಿದೆವು. ಅಲ್ಲಿ ನಮಗಾಗಿಯೇ ಕಾಯುತ್ತಿದ್ದ ಪ್ರವೀಣ್, ಆ ದಟ್ಟ ಕಾಡಿನ ಎರಡು ಸ್ಥಳಗಳಲ್ಲಿ ಈ ಪಕ್ಷಿ ಸಿಗುವದೆಂದು ತಿಳಿಸಿ, ಅಲ್ಲಿಗೆ ಕರೆದುಕೊಂಡು ಹೋದರು.
ಇಳಿಜಾರಿನ ದಟ್ಟ ಕಾನನದ ಮಧ್ಯೆ ಪಕ್ಷಿಯ ಗೂಡಿನಿಂದ ಸ್ವಲ್ಪ ದೂರದಲ್ಲಿ ಮರೆಗೋಡೆಯೊಂದನ್ನು (ಏಜಿಛಛಿ) ವ್ಯವಸ್ಥೆ ಮಾಡಲಾಗಿತ್ತು. ಪಕ್ಷಿ ಛಾಯಾಗ್ರಹಣಕ್ಕೆ ಈ ತರದ ಮರೆಗೋಡೆಗಳು ಅನಿವಾರ್ಯ. ನಾವು ಅದರಲ್ಲಿ ಕುಳಿತು ಕ್ಯಾಮರಾ ಕಾರ್ಯಾಚರಣೆಗೆ ತೊಡಗಿದೆವು. ಮರಿಗಳು ಸ್ವಲ್ಪ ದೊಡ್ಡದಾಗಿವೆಯೆಂದೂ, ಅವಕ್ಕೆ ಆಹಾರ ಪೂರೈಸಲು ಮಿಂಚುಳ್ಳಿ ದೊಡ್ಡ ದೊಡ್ಡ ಕೀಟಗಳನ್ನು ಹಿಡಿದು ತರುತ್ತಿದೆಯೆಂದೂ ಪ್ರವೀಣ್ ತಿಳಿಸಿದ. ನೋಡನೋಡುತ್ತಿದ್ದಂತೆಯೇ ಮುಷ್ಟಿ ಗಾತ್ರದ ಚಂದದ ಹಕ್ಕಿ, ಕಪ್ಪೆಯೊಂದನ್ನು ಕೊಕ್ಕಿನಲ್ಲಿ ಕಚ್ಚಿ ತಂದು, ಗೂಡಿನ ಹೊರಗೆ ಸ್ವಲ್ಪ ದೂರದಲ್ಲಿದ್ದ ಟೊಂಗೆಯೊಂದರ ಮೇಲೆ ಕುಳಿತೇಬಿಟ್ಟಿತು. ಅತ್ತಿತ್ತ ನೋಡುತ್ತ, ತನ್ನನ್ನು ಯಾವ ಪ್ರಾಣಿ-ಪಕ್ಷಿಗಳೂ ಗಮನಿಸುತ್ತಿಲ್ಲ ಎನ್ನುವದನ್ನು ಖಾತ್ರಿ ಪಡಿಸಿಕೊಂಡು ವೇಗವಾಗಿ ಗೂಡಿಗೆ ಹೋಗಿ ಮರಿಗಳಿಗೆ ಕಪ್ಪೆಯನ್ನು ಆಹಾರವಾಗಿ ಕೊಟ್ಟು ಸರ್ರನೆ ಹಾರಿ ಹೋಯಿತು. ಕ್ಲಿಕ್… ಕ್ಲಿಕ್… ಕ್ಲಿಕ್… ಕ್ಲಿಕ್!
ಹೀಗೆ ಹಾರಿಹೋದ ಹಕ್ಕಿ ಹತ್ತು-ಹದಿನೈದು ನಿಮಿಷಕ್ಕೊಮ್ಮೆ ಮತ್ತೆ ಆಹಾರ ಹುಡುಕಿ ತರುತ್ತಿತ್ತು. ಅದು ಆಹಾರ ಹೊತ್ತು ಬರುವದನ್ನೇ ನಮ್ಮ ಕ್ಯಾಮರಾ ಕಾಯತೊಡಗಿತು. ಒಮ್ಮೆ ಕಪ್ಪೆ, ಇನ್ನೊಮ್ಮೆ ಹಾವುರಾಣಿ, ಓತಿಕ್ಯಾತ, ಮಿಡತೆ, ಜೇಡ, ಏಡಿ ಹೀಗೆ ಹತ್ತು ಹಲವು ಬಗೆಯ ಕೀಟಗಳನ್ನು ಹಿಡಿದು ತರುತ್ತಿತ್ತು. ನಮಗೆ, ನಮ್ಮ ಕ್ಯಾಮರಾಕ್ಕೆ ಅವತ್ತು ಹಬ್ಬ. ರೆಕ್ಕೆ ಬಿಚ್ಚಿದ ಹಕ್ಕಿ, ಹಾರಲನುವಾದ ಹಕ್ಕಿ, ತಾನು ತಂದ ಕೀಟವನ್ನು ಕೊಕ್ಕಿನಿಂದ ಎಗರಿಸಿ ಹಾರಿಸಿ ಹಿಡಿಯುತ್ತಿದ್ದ ಹಕ್ಕಿ, ಹೀಗೆ… ಮಿಂಚುಳ್ಳಿಯ ನಾನಾ ಭಂಗಿಗಳು ನಮ್ಮ ಕ್ಯಾಮರಾದಲ್ಲಿ ಸೆರೆಯಾದವು. ಬೆಳಿಗ್ಗೆ ಆರರಿಂದ ಆರಂಭಿಸಿದವರು ಸಂಜೆ ಆಗುವವರೆಗೂ ಬರ್ಡ್ ಫೋಟೋಗ್ರಫಿ ಮಾಡಿದೆವು. ನಾವು ಕುಳಿತಲ್ಲಿಗೇ ಪ್ರವೀಣ್ ಊಟ ತಿಂಡಿ ಕರುಣಿಸುತ್ತಿದ್ದ.
Related Articles
ಇವು ಸಾಮಾನ್ಯವಾಗಿ ಅರಣ್ಯ ಪ್ರದೇಶ ಮತ್ತು ಜೌಗು ಭೂಮಿಯಲ್ಲಿ ವಾಸಿಸುತ್ತವೆ. ಕಾಡಿನ ತೊರೆ-ಕೊಳಗಳ ಬಳಿ ಹೆಚ್ಚಾಗಿ ಕಂಡು ಬರುತ್ತವೆ. ಗೂಡುಗಳನ್ನು ಕಡಿದಾದ ಗುಡ್ಡಗಳ ತಳದಲ್ಲಿ, ಬಿದ್ದ ಮರದ ಬೇರುಗಳ ಬಳಿ ಮಣ್ಣಿನಲ್ಲಿ ನಿರ್ಮಿಸುತ್ತವೆ. ಗಂಡು ಮತ್ತು ಹೆಣ್ಣು ಹಕ್ಕಿಗಳು ಒಟ್ಟಾಗಿ 100 ಸೆಂಟಿಮೀಟರ್ ಉದ್ದದ 3 ರಿಂದ 4 ಸೆಂಟಿಮೀಟರ್ ವ್ಯಾಸದ ಸಮತಳವಾದ ಸುರಂಗ ಕೊರೆದು ಗೂಡು ನಿರ್ಮಿಸಿಕೊಳ್ಳುತ್ತವೆ. ಮೊಟ್ಟೆ ಇಡುವ ಕೋಣೆ ಮೇಲ್ಮುಖವಾಗಿರುತ್ತದೆ. ಕೋಣೆಯೊಳಗೆ ನೀರು ನುಗ್ಗದಂತೆ ಮತ್ತು ಒಳಗಿನ ತ್ಯಾಜ್ಯ ಹೊರಗೆ ಹರಿದು ಹೋಗಲನುವಾಗುವಂತೆ ಚಾಕಚಕ್ಯತೆಯಿಂದ ಗೂಡನ್ನು ನಿರ್ಮಿಸುತ್ತವೆ. ಒಮ್ಮೆ 3 ರಿಂದ 7 ಮೊಟ್ಟೆಗಳನ್ನು ಇಡುತ್ತದೆ. ಅಂತಿಮ ಮೊಟ್ಟೆ ಇಟ್ಟ ನಂತರ ಸುಮಾರು 17 ರಿಂದ 18 ದಿನ ಗಂಡು-ಹೆಣ್ಣು ಸರದಿಯ ಮೇಲೆ ಕಾವು ಕೊಡುತ್ತವೆ. ಮೊಟ್ಟೆಯೊಡೆದು ಹೊರಬಂದ ಮರಿಗಳಿಗೆ ಮೊದಮೊದಲು ಚಿಕ್ಕ ಚಿಕ್ಕ ಕೀಟಗಳನ್ನು ಹಿಡಿದು ತರುತ್ತವೆ. ಒಂದು ವಾರದ ನಂತರ, ಕಪ್ಪೆ ಓತಿಕ್ಯಾತದಂತಹ ದೊಡ್ಡ ಪ್ರಾಣಿಗಳನ್ನೇ ತಂದು ಮರಿಗಳ ಹೊಟ್ಟೆ ತುಂಬಿಸುತ್ತವೆ. ಇದನ್ನೆಲ್ಲಾ ಮರೆಯಲ್ಲಿ ಅಡಗಿ ಕುಳಿತು ಪ್ರತ್ಯಕ್ಷ ನೋಡಿದ ಖುಷಿ ನಮ್ಮದು. ಕರ್ನಾಟಕದಲ್ಲಿ ವಿರಳವಾದ ಡ್ವಾರ್ಫ್ ಕಿಂಗ್ ಫಿಷರ್ ಹಕ್ಕಿಯ ಛಾಯಾಗ್ರಹಣ ಮಾಡಬೇಕೆಂಬ ಬಹುದಿನದ ಆಸೆ ನೆರವೇರಿದ್ದು ಹೀಗೆ..
Advertisement
ಬಣ್ಣಗಳ ಬೆಡಗು ಬಿನ್ನಾಣಓರಿಯಂಟಲ್ ಡ್ವಾರ್ಫ್ ಕಿಂಗ್ ಫಿಷರ್, ಮಿಂಚುಳ್ಳಿ ಜಾತಿಯ ಪಕ್ಷಿಗಳಲ್ಲಿ ಕಂಡುಬರುವ ಅತ್ಯಂತ ಸಣ್ಣ ಪಕ್ಷಿ. ಬಾಲ, ಕೊಕ್ಕು ಸೇರಿ ಸುಮಾರು 12 ರಿಂದ 14 ಸೆಂಟಿಮೀಟರ್ ಉದ್ದ. ಹೆಣ್ಣು ಹಕ್ಕಿ 14 ರಿಂದ 16 ಗ್ರಾಂ ತೂಕ ಹೊಂದಿದ್ದರೆ ಗಂಡು ಹಕ್ಕಿ ಸುಮಾರು 22 ಗ್ರಾಂ ನಷ್ಟು ತೂಕ ಹೊಂದಿರುತ್ತವೆ. ಗಂಡು ಮತ್ತು ಹೆಣ್ಣು ಹಕ್ಕಿಗಳು ನೋಡಲು ಒಂದೇ ತರ. ನೆತ್ತಿಯ ಮೇಲೆ ಕಪ್ಪು ಚುಕ್ಕೆ, ಕತ್ತಿನ ಪಕ್ಕಗಳಲ್ಲಿ ನೀಲಿ ಮತ್ತು ಬಿಳಿ ಬಣ್ಣ, ಗಾಢ ನೀಲಿ ಮತ್ತು ಕಪ್ಪು ಬಣ್ಣದ ರೆಕ್ಕೆಗಳು, ಗಲ್ಲ ಮತ್ತು ಗಂಟಲು ಭಾಗ ಬಿಳಿ, ಅಡಿ ಭಾಗ ತೆಳು ಹಳದಿ, ಕಿತ್ತಳೆ ಬಣ್ಣ ಹೊಂದಿರುತ್ತವೆ. ಕಾಲು ಮತ್ತು ಕೊಕ್ಕುಗಳು ಕೆಂಪು ಬಣ್ಣ. ಕಾಲುಗಳಲ್ಲಿ ಮೂರೇ ಬೆರಳುಗಳನ್ನು ಹೊಂದಿರುವದು ಇದರ ವಿಶೇಷ. ಹಾಗಾಗಿಯೇ ಇದನ್ನು ಮೂರು ಬೆರಳಿನ ಮಿಂಚುಳ್ಳಿ ಎಂದೂ ಕರೆಯುತ್ತಾರೆ. ಚಿಕ್ಕ ಗಾತ್ರದ ಈ ಹಕ್ಕಿ, ತನ್ನ ಆಕರ್ಷಕ ಬಣ್ಣಗಳಿಂದಾಗಿ ಬೆರಗುಗೊಳಿಸುತ್ತವೆ. ಚಿತ್ರ – ಲೇಖನ: ಜಿ. ಆರ್. ಪಂಡಿತ್, ಸಾಗರ