Advertisement
10 ರನ್ನುಗಳ ಅಲ್ಪ ಮುನ್ನಡೆಯ ಬಳಿಕ ರವಿವಾರ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಜಿಂಬಾಬ್ವೆ 23 ರನ್ ಆಗುವಷ್ಟರಲ್ಲಿ 4 ವಿಕೆಟ್ ಉದುರಿಸಿಕೊಂಡು ತೀವ್ರ ಸಂಕಟದಲ್ಲಿತ್ತು. ಆದರೆ 3ನೇ ದಿನದಾಟದ ಅಂತ್ಯಕ್ಕೆ 6 ವಿಕೆಟಿಗೆ 252 ರನ್ ಪೇರಿಸಿ ಹಿಡಿತವನ್ನು ಬಿಗಿಗೊಳಿಸತೊಡಗಿದೆ. ಸಿಕಂದರ್ ರಾಜ 97 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದು, ಮೊದಲ ಶತಕದ ನಿರೀಕ್ಷೆಯಲ್ಲಿದ್ದಾರೆ. ಇವರೊಂದಿಗೆ ಕ್ರೀಸಿನಲ್ಲಿರುವವರು 57 ರನ್ ಮಾಡಿರುವ ಮಾಲ್ಕಂ ವಾಲರ್. ಇವರಿಬ್ಬರು ಮುರಿಯದ 7ನೇ ವಿಕೆಟಿಗೆ 107 ರನ್ ಪೇರಿಸಿದ್ದಾರೆ.
ಶ್ರೀಲಂಕಾ 7ಕ್ಕೆ 293 ರನ್ ಗಳಿಸಿದಲ್ಲಿಂದ ರವಿವಾರದ ಆಟವನ್ನು ಮುಂದುವರಿಸಿತ್ತು. ಅಂತಿಮವಾಗಿ 346ಕ್ಕೆ ಆಲೌಟ್ ಆಯಿತು. ಅಂದರೆ ಜಿಂಬಾಬ್ವೆ ಮೊತ್ತಕ್ಕಿಂತ ಹತ್ತೇ ರನ್ ಹಿಂದುಳಿಯಿತು. ಗುಣರತ್ನ 45, ಹೆರಾತ್ 22, ಲಕ್ಮಲ್ 14 ರನ್ ಮಾಡಿ ಔಟಾದರು. ಜಿಂಬಾಬ್ವೆ ಪರ ಲೆಗ್‌ಸ್ಪಿನ್ನರ್ ಗ್ರೇಮ್ ಕ್ರೆಮರ್ 116 ರನ್ನಿತ್ತು 5 ವಿಕೆಟ್ ಕೆಡವಿದರು. ಇದು ಅವರ ಜೀವನಶ್ರೇಷ್ಠ ಬೌಲಿಂಗ್ ಎನಿಸಿದೆ.
ದ್ವಿತೀಯ ಸರದಿ ಆರಂಭಿಸಿದ ಜಿಂಬಾಬ್ವೆ ಲಂಚ್ ಒಳಗಾಗಿ 23 ರನ್ ಮಾಡುವಷ್ಟರಲ್ಲಿ 4 ವಿಕೆಟ್‌ಗಳನ್ನು ಉದುರಿಸಿ ಕೊಂಡಿತು. ಇದರಲ್ಲಿ 3 ವಿಕೆಟ್ ಹೆರಾತ್ ಬುಟ್ಟಿಗೆ ಬಿತ್ತು. ಸ್ಕೋರ್ 59ಕ್ಕೆ ಏರಿದಾಗ ವಿಲಿಯಮ್ಸ್ (22) ಔಟಾದರು. 145ರಲ್ಲಿ ಮೂರ್ (40) ನಿರ್ಗಮಿಸಿದರು. ಮುಂದಿನದು ರಾಜ-ವಾಲರ್ ಜೋಡಿಯ ಬ್ಯಾಟಿಂಗ್ ವೈಭವ.
ಸಿಕಂದರ್ ರಾಜ 158 ಎಸೆತ ಎದುರಿಸಿದ್ದು, 97ರಲ್ಲಿ ಅಜೇಯರಾಗಿದ್ದಾರೆ (7 ಬೌಂಡರಿ, 1 ಸಿಕ್ಸರ್). ವಾಲರ್ ಅವರ ಅಜೇಯ 57 ರನ್ 76 ಎಸೆತಗಳಿಂದ ಬಂದಿದೆ (8 ಬೌಂಡರಿ). ಲಂಕಾ ಪರ ಹೆರಾತ್ 85 ರನ್ನಿಗೆ 4 ವಿಕೆಟ್ ಕಿತ್ತರು.
ಸಂಕ್ಷಿಪ್ತ ಸ್ಕೋರ್: ಜಿಂಬಾಬ್ವೆ-356 ಮತ್ತು 6 ವಿಕೆಟಿಗೆ 252. ಶ್ರೀಲಂಕಾ-346.