ಸವಣೂರು: ಬಹುಗ್ರಾಮ ಕುಡಿಯುವ ನೀರಿನ ಯೊಜನೆ ಸಲುವಾಗಿ ಕಡಬ ತಾಲೂಕಿನ ಶಾಂತಿಮೊಗರು ಬಳಿ ಕುಮಾರಧಾರಾ ನದಿಯಲ್ಲಿ ನಿರ್ಮಾಣ ಗೊಳ್ಳುತ್ತಿರುವ ಕಿಂಡಿ ಅಣೆಕಟ್ಟು ಕಾಮಗಾರಿ ಯು ಭರದಿಂದ ಸಾಗುತ್ತಿದ್ದು, ಕೃಷಿಕರಿಗೂ ಅನುಕೂಲವಾಗಲಿದೆ. ಕಡಬ ತಾಲೂಕಿನ ಕುದ್ಮಾರು, ಸವಣೂರು, ಬೆಳಂದೂರು, ಕಾಣಿಯೂರು, ಪುಣcಪ್ಪಾಡಿ, ಆಲಂಕಾರು, ಪೆರಾಬೆ, ಕುಂತೂರು ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶ ಇರಿಸಲಾಗಿದೆ. ಈ ಯೋಜನೆಯು ಶೀಘ್ರ ಪೂರ್ಣಗೊಳ್ಳುವ ನಿರೀಕ್ಷೆ ಹೊಂದಲಾಗಿದೆ.
ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಮುಖಾಂತರ ಯೋಜನೆಗೆ 7.5 ಕೋಟಿ ರೂ. ಅನುದಾನ ಒದಗಿಸಿದ್ದು, ಪಶ್ಚಿಮ ವಾಹಿನಿ ಯೋಜನೆಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಈ ಕಿಂಡಿ ಅಣೆಕಟ್ಟು ನಿರ್ಮಾಣದಿಂದ ನದಿ ಪಾತ್ರದ ಎರಡು ಭಾಗದ ಮೂರು ಕಿ.ಮೀ. ಸುತ್ತಳತೆಯಲ್ಲಿ ಅಂತರ್ಜಲ ವೃದ್ಧಿಯಾಗಲಿದೆ. ಎರಡು ವರ್ಷಗಳ ಹಿಂದೆ ಆರಂಭಗೊಂಡ ಕಿಂಡಿ ಅಣೆಕಟ್ಟಿನ ನಿರ್ಮಾಣ ಕಾಮಗಾರಿಯು ಇದೀಗ ವೇಗವನ್ನು ಪಡೆದುಕೊಂಡಿದೆ. 2020ರೊಳಗೆ ಕಾಮಗಾರಿ ಮುಗಿಸಲು ಅವಧಿ ನಿಗದಿ ಯಾಗಿತ್ತು. ಆದರೆ ನದಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗದ ಕಾರಣ ಕಾಮಗಾರಿ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಸಾಗಿರಲಿಲ್ಲ. ಇದೀಗ ಕಾಮಗಾರಿ ಪ್ರಾರಂಭಗೊಂಡಿದ್ದು, ಒಂದು ಭಾಗದಲ್ಲಿ ಪಿಲ್ಲರ್ ಅಳವಡಿಕೆಗೆ ಪೂರಕವಾಗಿ ಯಂತ್ರಗಳಿಂದ ಅಗೆತ, ನೀರಿನ ಹರಿವು ತಡೆಗಟ್ಟಲು ಮಣ್ಣಿನ ಕಟ್ಟದ ಕಾಮಗಾರಿ ನಡೆದಿದೆ.
ನೀರಿನ ಕಷ್ಟ ನೀಗಿಸುವ ಉದ್ದೇಶದಿಂದ ಎಸ್.ಅಂಗಾರ ಶಿಪಾರಸ್ಸಿನಂತೆ ಈ ಕಿಂಡಿ ಅಣೆಕಟ್ಟು ಯೋಜನೆಗೆ 7.5 ಕೋಟಿ ರೂ. ಮಂಜೂರುಗೊಂಡಿದೆ. ನದಿಯ ತಳ ಮಟ್ಟದಿಂದ ನಾಲ್ಕು ಮೀಟರ್ ಎತ್ತರಕ್ಕೆ ನಿರ್ಮಾಣವಾಗುತ್ತಿರುವ ಈ ಅಣೆಕಟ್ಟು 221 ಮೀಟರ್ ಉದ್ದ ಹಾಗೂ ಮೂರು ಮೀಟರ್ ಅಗಲವಿರಲಿದೆ. ಐವತ್ತಾರು ಕಿಂಡಿಗಳನ್ನು ನಿರ್ಮಾಣ ಮಾಡಲಾಗುತ್ತದೆ. ಇದರಲ್ಲಿ ಸುಮಾರು 18.56 ಎಂಸಿಎಫ್‌ಟಿ ನೀರು ಶೇಖರಣೆಯಾಗಲಿದೆ. ಡಿಸೆಂಬರ್ ಆರಂಭದಿಂದ ನದಿಯ ನೀರಿನ ಮಟ್ಟವನ್ನು ನೋಡಿಕೊಂಡು ಕಿಂಡಿಗಳಿಗೆ ಹಲಗೆಗಳನ್ನು ಜೋಡಣೆ ಮಾಡಲಾಗುತ್ತದೆ. ಮಳೆಗಾಲ ಪ್ರಾರಂಭವಾಗಿ ನದಿಯಲ್ಲಿ ನೀರಿನ ಮಟ್ಟ ಜಾಸ್ತಿಯಾಗುತ್ತಿದ್ದಂತೆ ಹಲಗೆಗಳನ್ನು ತೆಗೆದು ಬಿಡಲಾಗುತ್ತದೆ.
ಬಹು ಬೇಡಿಕೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಯು ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ ಪೂರ್ಣಗೊಂಡು ಲೋಕಾರ್ಪಣೆಯಾಗಲಿದೆ. ಯೋಜನೆಯಿಂದ ಸುಮಾರು 4 ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ. ಅಲ್ಲದೆ ನದಿಯ ಇಕ್ಕಡೆಗಳಲ್ಲಿ ನೀರಿನ ಒರತೆ ಹೆಚ್ಚಲಿದೆ.
–ಎಸ್.ಅಂಗಾರ, ಸಚಿವರು, ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ