ಬೆಂಗಳೂರು: ಅನಗತ್ಯ ಸಿಬ್ಬಂದಿ ನೇಮಕಾತಿ ಕೈಬಿಡಲು ರಾಜ್ಯ ಒಕ್ಕಲಿಗರ ಸಂಘ ಮುಂದಾದ ಹಿನ್ನೆಲೆಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ಸಂಸ್ಥೆಗಳ ನೌಕರರ ಸಂಘ ಪ್ರತಿಭಟನೆ ಹಿಂಪಡೆದಿದೆ. ಭಾನುವಾರದಿಂದ ಕಿಮ್ಸ್ ಆಸ್ಪತ್ರೆಯಲ್ಲಿ ಹೊರ ರೋಗಿಗಳ ವಿಭಾಗದ (ಒಪಿಡಿ) ಸೇವೆ ಪುನಾರಂಭವಾಗಲಿದೆ.
ರಾಜ್ಯ ಒಕ್ಕಲಿಗರ ಸಂಘದ ಕಚೇರಿಯಲ್ಲಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಮುಖಂಡರ ನಡುವೆ ಶನಿವಾರ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು, ಭಾನುವಾರದಿಂದ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.
280ಕ್ಕೂ ಅಧಿಕ ಅನಗತ್ಯ ಸಿಬ್ಬಂದಿ ನೇಮಕಾತಿ ಹಿಂಪಡೆಯಲಾಗುವುದು. ಇನ್ನು ಅತಿಗಣ್ಯ (ವಿಐಪಿ) ಕೋಟಾದ ನೇಮಕಾತಿ ವಿಚಾರವನ್ನು ಮುಂದಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುಲಾಗುವುದು ಎಂದು ಆಡಳಿತ ಮಂಡಳಿ ಭರವಸೆ ನೀಡಿದ್ದರಿಂದ ಕಿಮ್ಸ್ ಸಿಬ್ಬಂದಿ ಕಳೆದ 14ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ವಾಪಸ್ ಪಡೆದರು.
ಆಡಳಿತ ಮಂಡಳಿ ಬೇಡಿಕೆ ಈಡೇರಿಸಿದ ಬಳಿಕ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 2,300 ಸಿಬ್ಬಂದಿ ಸಿಹಿ ಹಂಚಿ ಸಂಭ್ರಮಿಸಿದರು. ಈ ಹಿಂದೆ ನಡೆದ ಆಡಳಿತ ಮಂಡಳಿಯ ಕಾರ್ಯಕಾತಿ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಂಡಂತೆ ನೇಮಕಾತಿ ಪ್ರಮಾಣವನ್ನು 280ಕ್ಕೆ ಇಳಿಸಿ, ಹೆಚ್ಚುವರಿ ನೇಮಕಾತಿ ಸೇವಾ ಬಿಡುಗಡೆ ಮಾಡುವುದಾಗಿ ಪತ್ರ ಹಾಜರುಪಡಿಸಿದೆ.
ವಜಾ ಮಾಡಿದ 5 ನೌಕರರನ್ನು ಮರು ನೇಮಕ ಮಾಡಿಕೊಳ್ಳುವ ವಿಚಾರವಾಗಿ ಆದೇಶ ಪ್ರತಿ ನೀಡಿದೆ. ಉಳಿದಂತೆ ಸಮಯಕ್ಕೆ ಸರಿಯಾಗಿ ವೇತನ, ಪೂರ್ಣಾವಧಿ ಶುಶೂಷಕರು ಹಾಗೂ ವಾರ್ಡ್ ಬಾಯ್‌ಗಳಿಗೆ 15 ದಿನ ವೇತನ ಸಹಿತ ರಜೆ ನೀಡುವುದು ಸೇರಿ ಸಿಬ್ಬಂದಿ ಇರಿಸಿದ್ದ ಬಹುತೇಕ ಎಲ್ಲ ಬೇಡಿಕೆಗಳು ಈಡೇರಿವೆ.
6ನೇ ವೇತನ ಆಯೋಗದ ಶಿಫಾರಸುಗಳ ಜಾರಿ ವಿಚಾರವಾಗಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಆಡಳಿತ ಮಂಡಳಿ ತಿಳಿಸಿದೆ ಎಂದು ರಾಜ್ಯ ಒಕ್ಕಲಿಗರ ಸಂಘದ ಸಂಸ್ಥೆಗಳ ನೌಕರರ ಸಂಘದ ಅಧ್ಯಕ್ಷ ಡಾ.ವಿನೋದ್ ಕುಮಾರ್ ಎ.ಸಿ ತಿಳಿಸಿದ್ದಾರೆ.
ಅಗತ್ಯದಷ್ಟು ಸಿಬ್ಬಂದಿಯನ್ನಷ್ಟೇ ಉಳಿಸಿಕೊಂಡು ಉಳಿದವರನ್ನು ಕೈಬಿಡಲಾಗುತ್ತದೆ. ನೇಮಕ ಸಂಖ್ಯೆಯನ್ನು 360ಕ್ಕೆ ಇಳಿಸುತ್ತೇವೆ. ಅದೇ ರೀತಿ 6ನೇ ವೇತನ ಆಯೋಗದ ಶಿಫಾರಸು ಜಾರಿಯನ್ನು ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗುತ್ತದೆ.
-ಬೆಟ್ಟೇಗೌಡ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ