Advertisement

ಮನೆ ಯಜಮಾನನನ್ನೇ ಕೊಂದು ಕತೆ ಕಟ್ಟಿದ್ರು!

01:07 PM Jun 30, 2017 | Team Udayavani |

ದಾವಣಗೆರೆ: ಸಾಲದ ಹೊರೆ ನಿವಾರಣೆಗೆ ಜಮೀನು ಮಾರಾಟಕ್ಕೆ ಮುಂದಾದ ತಂದೆಯನ್ನೇ ಕೊಲೆಗೈದು, ಆತ್ಮಹತ್ಯೆ ಘಟನೆ ಎಂಬುದಾಗಿ ದೂರು ನೀಡಿದ್ದ ಪ್ರಕರಣ ಭೇದಿಸಿರುವ ಪೊಲೀಸರು, ಮೃತನ ಪತ್ನಿ ಹಾಗೂ ಮಕ್ಕಳನ್ನು ಬಂಧಿಸಲಾಗಿದೆ. ಚನ್ನಗಿರಿ ತಾಲೂಕು ಸಾರಥಿ ಹೊಸೂರು ಗ್ರಾಮದ ರತ್ನಮ್ಮ (55), ದೇವರಾಜ (28), ರವಿ(27) ಬಂಧಿತ ಆರೋಪಿಗಳು. 

Advertisement

ಕಳೆದ ಮಾ 14ರಂದು ಚನ್ನಗಿರಿ ಠಾಣೆಯಲ್ಲಿ ದಾಖಲಾಗಿದ್ದ ರೈತ ರುದ್ರೇಶಪ್ಪ (60)ನ ಅಸಹಜ ಸಾವು ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ, ಸಾವಿಗೀಡಾದ ರೈತನ ಹೆಂಡತಿ, ಮಕ್ಕಳು ಸೇರಿಕೊಂಡು ಕೊಲೆಗೈದು, ಅಸಹಜ ಸಾವು ಎಂಬುದಾಗಿ ಕತೆ ಕಟ್ಟಿದ್ದು ಬೆಳಕಿಗೆ ಬಂದಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಭೀಮಾಶಂಕರ್‌ ಎಸ್‌. ಗುಳೇದ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. 

ರುದ್ರೇಶಪ್ಪ 8 ಎಕರೆ ಅಡಕೆ ತೋಟ ಹೊಂದಿದ್ದ. ವಿವಿಧ ಕಾರಣದಿಂದಾಗಿ ಖಾಸಗಿಯವರಿಂದ 40 ಲಕ್ಷ ರೂ. ಸಾಲ ಪಡೆದುಕೊಂಡಿದ್ದ. ಸಾಲ ತೀರಿಸಲು 2 ಎಕರೆ ಜಮೀನು ಮಾರಾಟ ಮಾಡಲು ಸಿದ್ಧನಾಗಿದ್ದ. ಇದಕ್ಕೆ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಸಾಲದ ಹೊರೆ ತಪ್ಪಿಸಿಕೊಳ್ಳಲು ಹೊಲ ಮಾರಾಟ ಮಾಡುವುದು ಅನಿವಾರ್ಯ ಎಂಬುದಾಗಿ ಮನೆಯವರನ್ನು ಒಪ್ಪಿಸಿದ್ದ.

ಆತನ ಮುಂದೆ ಒಪ್ಪಿಗೆ ಸೂಚಿಸಿದ್ದ ಇಬ್ಬರು, ಮಕ್ಕಳು, ಪತ್ನಿ ನಂತರ ಆತನ ಕೊಲೆಗೆ ಯೋಜನೆ ರೂಪಿಸಿದ್ದರು. ಅದರಂತೆ ಮಾ.12ರಂದು ರುದ್ರೇಶಪ್ಪನನ್ನು ಹಗ್ಗದಿಂದ  ಕೊರಳು ಬಿಗಿದು, ಉಸಿರುಗಟ್ಟಿಸಿಕೊಲೆ ಮಾಡಿದ್ದರು. ದುಷ್ಕೃತ್ಯದ  ನಂತರ ಆತನ ಶವವನ್ನು ತಮ್ಮದೇ ಅಡಕೆ ತೋಟದಲ್ಲಿ ಇರಿಸಿ, ಪಕ್ಕದಲ್ಲಿ ಮದ್ಯ, ವಿಷದ ಬಾಟಲಿ ಇಟ್ಟಿದ್ದರು. ಇತ್ತ ಪೊಲೀಸ್‌ ಠಾಣೆಗೆ ದೂರು ನೀಡಿ, ರುದ್ರೇಶಪ್ಪ 2 ದಿನದಿಂದ ನಾಪತ್ತೆಯಾಗಿದ್ದಾರೆ. 

ಅವರಿಗೆ ಸಾಲಗಾರರ ಕಾಟ ಇತ್ತು. ಇದೇ ಕಾರಣಕ್ಕೆ ಅವರು ಕಾಣೆ ಆಗಿರಬಹುದು. ಹುಡುಕಿಕೊಡಿ ಎಂದು ಮನವಿ ಮಾಡಿದ್ದರು ಎಂದು ಮಾಹಿತಿ ನೀಡಿದರು. ಕೊನೆಗೆ ರುದ್ರೇಶಪ್ಪನ ಶವ ಸಿಕ್ಕಾಗ, ಸಾಲ ನೀಡಿದವರ ಮೇಲೆ ಅನುಮಾನ ವ್ಯಕ್ತಪಡಿಸಿ, ಪೊಲೀಸರಿಗೆ ಹೇಳಿಕೆ ನೀಡಿದ್ದರು. 

Advertisement

ಸಾಲ ನೀಡಿದವರೇ ತಮ್ಮ ತಂದೆಯನ್ನ ಕೊಲೆ ಮಾಡಿರಬೇಕು ಎಂದು ಅನುಮಾನ ಸಹ ವ್ಯಕ್ತಪಡಿಸಿದ್ದರು. ಇತ್ತ ಮರಣೋತ್ತರ ಪರೀಕ್ಷೆ ಸೇರಿದಂತೆ ವಿವಿಧ ವೈದ್ಯಕೀಯ ವರದಿಗಳು ಸಹ ಸಾವು ವಿಷ ಸೇವನೆಯಿಂದ ಆಗಿದ್ದಲ್ಲ, ಉಸಿರುಗಟ್ಟಿಸಿ, ಸಾಯಿಸಿದ್ದು ಎಂಬುದನ್ನು ದೃಢಪಡಿಸಿದ್ದವು ಎಂದು ಎಸ್ಪಿ ತಿಳಿಸಿದರು. ವರದಿ ಆಧಾರದಲ್ಲಿ ರುದ್ರೇಶಪ್ಪನ ಮಕ್ಕಳು, ಪತ್ನಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಯಲಾಗಿದೆ.

ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಯಶೋಧ ಎಸ್‌. ವಂಟಿಗೋಡ, ಗ್ರಾಮಾಂತರ ಪೊಲೀಸ್‌ ಪ್ರಭಾರ ಉಪಾಧೀಕ್ಷಕ ಮಂಜುನಾಥ ಗಂಗಲ್‌, ಸಿಪಿಐ ಆರ್‌.ಆರ್‌. ಪಾಟೀಲ್‌, ಪಿಎಸ್‌ಐ ವೀರಬಸಪ್ಪ ಎಲ್‌. ಕಸಲಾಪುರ ಸುದ್ದಿಗೋಷ್ಠಿಯಲ್ಲಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next