ಕರಾಚಿ: ಪಾಕಿಸ್ತಾನದಲ್ಲಿ ಹಿಂದೂ ಸಮುದಾಯಕ್ಕೆ ಸೇರಿದ ವ್ಯಕ್ತಿಗಳ ಹತ್ಯೆ, ಅಪಹರಣ ಇತ್ತೀಚೆಗೆ ಸರ್ವೇ ಸಾಮಾನ್ಯವಾಗಿದೆ. ಇದೀಗ ಬೋಲ್ ಸುದ್ದಿ ವಾಹಿನಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಆಕಾಶ್ ರಾಮ್‌ನನ್ನು ಕರಾಚಿಯ ಅವರ ನಿವಾಸದಿಂದಲೇ ಅಪಹರಣ ಮಾಡಲಾಗಿದೆ! ಮಂಗಳವಾರ ನಸುಕಿನ 6 ಗಂಟೆ ಸುಮಾರಿನಲ್ಲಿ ಸಿಲ್ವರ್ ಬಣ್ಣದ ಕಾರಿನಲ್ಲಿ ಬಂದ ಅಪಹರಣಕಾರರು, ಅಕಾಶ್ ರಾಮ್ ಅವರ ಭದ್ರತಾ ಸಿಬ್ಬಂದಿ ಮತ್ತು ಇಬ್ಬರು ಕೆಲಸಗಾರರ ಸಮೇತ ಅಪಹರಿಸಿದ್ದಾರೆ. ಇದೇ ಕಾರು ಕೆಲವು ದಿನಗಳಿಂದ ಸುದ್ದಿವಾಹಿನಿಯ ಪ್ರಧಾನ ಕಚೇರಿಯ ಸುತ್ತಮುತ್ತ ಹಲವು ಬಾರಿ ಸಂಚಾರ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೂಡಲೇ ಅಪಹರಣಕಾರರಿಂದ ಪುತ್ರನನ್ನು ಬಿಡಿಸುವಂತೆ ಅಕಾಶ್ ತಾಯಿ ಪಾಕಿಸ್ತಾನ ಅಧಿಕಾರಿಗಳಿಗೆ ಪರಿಪರಿಯಾಗಿ ಕೇಳಿಕೊಂಡಿದ್ದಾರೆ.
ರಾಯಭಾರ ಕಚೇರಿ ಮುಚ್ಚಿದ ಸ್ವೀಡನ್
ಇಸ್ಲಾಮಾಬಾದ್: ಪಾಕ್‌ನಲ್ಲಿ ಭದ್ರತಾ ಭೀತಿಯ ಕಾರಣದಿಂದಾಗಿ ಸ್ವೀಡನ್‌ನ ತನ್ನ ರಾಯಭಾರ ಕಚೇರಿಯನ್ನು ಮುಚ್ಚುವುದಾಗಿ ಘೋಷಿಸಿದೆ. ಸುಪ್ರೀಂ ಕೋರ್ಟ್ ಹಾಗೂ ಸರ್ಕಾರದ ನಡುವಿನ ವಿವಾದ ಒಂದೆಡೆಯಾದರೆ, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬೆಂಬಲಿಗರ ದಾಂಧಲೆ ಮತ್ತೂಂದೆಡೆ. ಈ ನಡುವೆಯೇ ತಾಲಿಬಾನಿಗಳ ದಾಳಿಯೂ ಪಾಕ್‌ನಲ್ಲಿ ಹೆಚ್ಚುತ್ತಿದೆ. ಇವೆಲ್ಲವನ್ನೂ ಸ್ವೀಡನ್ ಪರಿಗಣಿಸಿದೆ.