ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ಕುರಿತು ಬಂದಿರುವ ಸುಪ್ರೀಂ ಕೋರ್ಟಿನ ಆದೇಶ ಕರುನಾಡಿಗೆ ಗಾಯದ ಮೇಲೆ ಬರೆಯಾಗಿದೆ. ಕಾವೇರಿ ನೀರಿಗಾಗಿ ʼಕಾವೇರಿ ನಮ್ಮದುʼ ಎನ್ನುವ ಹೋರಾಟವನ್ನು ಕನ್ನಡಿಗರು ಆರಂಭಿಸಿದ್ದಾರೆ.
ʼಬೆಂಗಳೂರು ಬಂದ್ʼ ಮಾಡಿ ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಈ ನಡುವೆ ಚಿತ್ರರಂಗದವರು ಕೂಡ ಕಾವೇರಿ ಹೋರಾಟಕ್ಕೆ ಧ್ವನಿಗೂಡಿಸಿದ್ದಾರೆ. ಕಿಚ್ಚ ಸುದೀಪ್ ಸಿಎಂ ಸಿದ್ದರಾಮಯ್ಯ ಅವರಿಗೆ ಸುದೀರ್ಘ ಪತ್ರವೊಂದನ್ನು ಬರೆದಿದ್ದಾರೆ.
ಪತ್ರದಲ್ಲಿ ಏನಿದೆ..: ಸಮಸ್ತ ಕನ್ನಡ ಜನತೆ ನಮಸ್ಕಾರ; ಕಾವೇರಿ ಸಮಸ್ಯೆ ಈ ವರ್ಷವೂ ಶುರುವಾಗಿದೆ. ಕನ್ನಡ ಪರ ಸಂಘಟನೆಗಳು, ರೈತರು, ಹೋರಾಟ ನೆಡೆಸುತ್ತಿದ್ದಾರೆ. ಕನ್ನಡದ ನೆಲ, ಜಲ, ಭಾಷೆಯ ಎಲ್ಲ ಹೋರಾಟಗಳಲ್ಲೂ ನಾನು ಸದಾ ನಿಮ್ಮೊಂದಿಗೆ ಇದ್ದೇನೆ. ಮುಂಗಾರು ಮಳೆಯ ಅಭಾವದಿಂದ ರೈತರಿಗೆ ಜನತೆಯ ಕೃಷಿ ಮಾತ್ರವಲ್ಲದೇ, ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದೆ. ಮುಂಗಾರಿನ ಹೊರತಾಗಿ ನಮಗೆ ಕುಡಿಯುವ ನೀರಿಗಾಗಿ ಬೇರೆ ಮೂಲಗಳಿಲ್ಲ. ನಾವು ಕಾವೇರಿಯನ್ನೇ ನಂಬಿದ್ದೇವೆ. ನಾನು ತಿಳಿದುಕೊಂಡಂತೆ ಬರ ಅಧ್ಯಯನ ಸಮಿತಿ- ಕಾವೇರಿ ಸಮಿತಿಯ ತಂತ್ರಜ್ಞರು ಕೂಡಲೇ ನ್ಯಾಯಾಧಿಕರಣ ಮತ್ತು ಕೇಂದ್ರ ಸರಕಾರಕ್ಕೆ ಪ್ರಸ್ತುತ ಕರ್ನಾಟಕದ ಬರ ಪರಿಸ್ಥಿತಿಯನ್ನು ತುರ್ತಾಗಿ ಮನವರಿಕೆ ಮಾಡಕೊಡಬೇಕಿದೆ.
ಇದನ್ನೂ ಓದಿ: Sandalwood: ಹಿರಿಯ ನಟ ಬ್ಯಾಂಕ್ ಜನಾರ್ದನ್ ಅವರಿಗೆ ಹೃದಯಾಘಾತ
ಕೇಂದ್ರ ಸರಕಾರಕ್ಕೆ ಕರ್ನಾಟಕದ ಪರಿಸ್ಥಿತಿಯನ್ನು ಅರ್ಥ ಮಾಡಿಸಲು ಎಲ್ಲ ಪಕ್ಷದ ನಾಯಕರು ಒಗ್ಗಟ್ಟಾಗಿ ಮುಂದಾಗಲು ಮನವಿ ಮಾಡುತ್ತೇನೆ. ತಮಿಳುನಾಡು ರೈತರಿಗೂ ಕುರವೈ ಬೆಳೆಗೆ ನೀರು ಸಿಗಲಿ. ಆದರೆ, ನಮ್ಮ ಕುಡಿಯುವ ನೀರಿನ ಅಭಾವ ಮೊದಲು ಬಗೆಹರಿಯಲಿ. ಆದಷ್ಟು ಬೇಗ ಈ ಸಮಸ್ಯೆ ಬಗೆ ಹರಿದು ಹೋರಾಟಕ್ಕೆ ಜಯವಾಗಲಿ.
ಇದರ ಜೊತೆಗೆ ಉತ್ತರ ಕರ್ನಾಟಕದ ಕೃಷ್ಣ ನದಿ, ಮಹದಾಯಿ ನದಿ ಮತ್ತು ಕಳಸಾ ಬಂಡೂರಿ ವಿವಾದಗಳು ಬಗೆ ಹರಿದು ಜನರ ಸಂಕಷ್ಟ ತೀರಲೆಂದು ಆಶಿಸುವೆ. ನಮ್ಮ ಜಲ ನಮ್ಮ ಹಕ್ಕು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.