Advertisement

ಅಪ್ಪು – ದಚ್ಚು ಇಬ್ಬರಿಗೂ ನಾನು ಆತ್ಮೀಯ: ಇಂಥ ಅಗೌರವಕ್ಕೆ ದರ್ಶನ್‌ ಖಂಡಿತ ಅರ್ಹವಲ್ಲ; ಕಿಚ್ಚ ಸುದೀಪ್  

11:19 AM Dec 20, 2022 | Team Udayavani |

ಬೆಂಗಳೂರು: ಹೊಸಪೇಟೆಯಲ್ಲಿ ನಟ ದರ್ಶನ್‌ ಅವರ ಮೇಲಾದ ಕೃತ್ಯವನ್ನು ಸ್ಯಾಂಡಲ್‌ ವುಡ್ ಕಲಾವಿದರು ಒಂದಾಗಿ ಖಂಡಿಸಿದ್ದಾರೆ. ಶಿವರಾಜ್‌ ಕುಮಾರ್‌, ಜಗ್ಗೇಶ್‌ ನಂತಹ ಹಿರಿಯ ನಟರು ಇಂತಹ ಘಟನೆ ನಡೆಯಬಾರದೆಂದು ಹೇಳಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕಾಗಿ ಆಗ್ರಹಿಸಿದ್ದಾರೆ.

Advertisement

ಈ ಬಗ್ಗೆ ಕಿಚ್ಚ ಸುದೀಪ್‌ ಅವರು ಮೂರು ಪುಟಗಳಷ್ಟು ಟ್ವೀಟ್‌ ನಲ್ಲಿ ಬರೆದುಕೊಂಡು‌ ಸಹ ಕಲಾವಿದನ ಪರ ನಿಂತಿದ್ದಾರೆ. ಇಲ್ಲಿದೆ ಕಿಚ್ಚ ಬರೆದ ಪತ್ರದ ಸಾರಾಂಶ:

ನಮ್ಮ ನೆಲ, ಭಾಷೆ ಮತ್ತು ಸಂಸ್ಕೃತಿ ಎಲ್ಲವೂ ಪ್ರೀತಿ ಮತ್ತು ಗೌರವದಿಂದ ಕೂಡಿದೆ. ಪ್ರತಿಯೊಂದು ಸಮಸ್ಯೆಯೂ ಒಂದು ಪರಿಹಾರವನ್ನು ಹೊಂದಿದೆ ಮತ್ತು ಪ್ರತಿ ಪರಿಹಾರವನ್ನು ಕಂಡುಕೊಳ್ಳಲು ಹಲವಾರು ವಿಧಾನಗಳಿವೆ. ಪ್ರತಿಯೊಬ್ಬ ವ್ಯಕ್ತಿಯೂ ಘನತೆಯಿಂದ ವರ್ತಿಸಲು ಅರ್ಹರಾಗಿದ್ದಾರೆ ಮತ್ತು ಯಾವುದೇ ಸಮಸ್ಯೆಯನ್ನು ಶಾಂತ ರೀತಿಯಲ್ಲಿ ಪರಿಹರಿಸಬಹುದು.

ನಾನು ನೋಡಿದ ವೀಡಿಯೋ ತುಂಬಾ ಆಘಾತಕಾರಿಯಾಗಿತ್ತು. ಈ ಘಟನೆ ವೇಳೆ ಸಿನಿಮಾದ ನಾಯಕಿ ಹಾಗೂ ಚಿತ್ರ ತಂಡದವರು ಅಲ್ಲಿದ್ದರು. ಈ ರೀತಿ ಸಾರ್ವಜನಿಕವಾಗಿ ಅವಮಾನಿಸುವಂತಹ  ಪ್ರತಿಕ್ರಿಯೆಗಳಿಂದ ನಾವು ಕನ್ನಡಿಗರೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ದರ್ಶನ್‌ ಹಾಗೂ ಪುನೀತ್ ಅಭಿಮಾನಿಗಳ ನಡುವೆ ಉತ್ತಮ ಭಾಂದವ್ಯ ಇಲ್ಲದಿರುವುದನ್ನು ಒಪ್ಪುತ್ತೇನೆ. ಆದರೆ ಇದು ಪುನೀತ್ ಅವರೇ ಮೆಚ್ಚಿ ಬೆಂಬಲಿಸುವ ಘಟನೆಯೇ? ಇದಕ್ಕೆ ಉತ್ತರ ಬಹುಶಃ ಅವರ ಪ್ರತಿಯೊಬ್ಬ ಪ್ರೀತಿಯ ಅಭಿಮಾನಿಗಳಿಗೆ ತಿಳಿದಿರುವ ವಿಷಯ.

Advertisement

ಗುಂಪಿನಲ್ಲಿ ಯಾರೋ ಒಬ್ಬ ಮಾಡಿದ ತಪ್ಪಿಗೆ ಪ್ರೀತಿ, ಘನತೆ ಮತ್ತು ಗೌರವ ಹೆಸರುವಾಸಿಯಾದ ಪುನೀತ್‌ ಅವರ ಅಭಿಮಾನಕ್ಕೆ ಧಕ್ಕೆಯಾಗದು.

ಇದನ್ನೂ ಓದಿ: ಕುಮಾರಸ್ವಾಮಿ ಪುತ್ರನಾಗಿ ಹುಟ್ಟಿದ್ದು ನನ್ನ ಭಾಗ್ಯ…: ಭಾವುಕರಾದ ನಿಖಿಲ್

ದರ್ಶನ್ ಈ ಇಂಡಸ್ಟ್ರಿಗೆ ಮತ್ತು ನಮ್ಮ ಭಾಷೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ನಮ್ಮ ನಡುವಿನ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಈ ಕ್ಷಣದಲ್ಲಿ ನನಗೆ ಅನ್ನಿಸಿದ್ದನ್ನು ನಾನು ಹೇಳಿಯೇ ಹೇಳುತ್ತೇನೆ. ಜನರ ಇಂಥಹ ಅಗೌರವಕ್ಕೆ ದರ್ಶನ್‌ ಖಂಡಿತ ಅರ್ಹವಲ್ಲ. ಇದು ನನಗೂ ತುಂಬಾ ಆಘಾತ ತಂದಿದೆ. ಕನ್ನಡಿಗರಿಗೆ ಎಲ್ಲೆಡೆ ತುಂಬಾ ಗೌರವವಿದೆ. ನಾವು ಇಂಥ ಕೆಟ್ಟ ಸಂದೇಶವನ್ನು ಹರಡಬಾರದು. ಯಾವುದೇ ಪರಿಸ್ಥಿತಿಯಲ್ಲಿ ಅತಿರೇಕವಾಗಿ ವರ್ತಿಸುವುದರಿಂದ ಸಮಸ್ಯೆಗೆ ಪರಿಹಾರ ಸಿಗದು.

ಕೆಲವು ನಟರು, ಅಭಿಮಾನಿಗಳ ನಡುವೆ ಭಿನ್ನಾಭಿಪ್ರಾಯಗಳಿವೆ ಎಂದು ನನಗೂ ಅರ್ಥವಾಗುತ್ತದೆ. ಇದರ ಮಧ್ಯೆ ಮಾತನಾಡಲು ನಾನು ಯಾರೂ ಅಲ್ಲ. ದರ್ಶನ್‌ ಹಾಗೂ ಪುನೀತ್‌ ಇಬ್ಬರೊಂದಿಗೆ ನಾನು ಆತ್ಮೀಯನಾಗಿದ್ದವ. ಆ ಸ್ಥಾನವನ್ನು ಇವತ್ತಿಗೂ ಹಾಗೆಯೇ ಉಳಿಸಿಕೊಂಡಿದ್ದೇನೆ. ಅದಕ್ಕಾಗಿ ನಾನು ನನ್ನ ಭಾವನೆಗಳನ್ನು ಇಲ್ಲಿ ಬರೆದಿದ್ದೇನೆ.

ನಾನು ಏನಾದರೂ ಅಗತ್ಯಕ್ಕಿಂತ ಹೆಚ್ಚಾಗಿ ಮಾತನಾಡಿದ್ದರೆ ನನ್ನನು ಕ್ಷಮಿಸಿ. 27 ವರ್ಷದ ಪಯಣದಲ್ಲಿ ಒಂದನ್ನು ಅರಿತುಕೊಂಡಿದ್ದೇನೆ,  ಇಲ್ಲಿ ಯಾರೂ ಶಾಶ್ವತವಲ್ಲ. ಪ್ರೀತಿ, ಗೌರವವನ್ನು ಹಂಚೋಣ ಮತ್ತು ಎಲ್ಲರಿಂದಲೂ ಅದೇ ಪ್ರತಿಫಲವನ್ನು ಪಡೆಯೋಣ. ಅದೇ ಯಾರನ್ನಾದರೂ ಮತ್ತು ಯಾವುದೇ ಪರಿಸ್ಥಿತಿಯನ್ನು ಗೆಲ್ಲುವ ಏಕೈಕ ಮಾರ್ಗವಾಗಿದೆ ಎಂದು ಕಿಚ್ಚ ಸುದೀಪ್ ಅವರು ಬರೆದುಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next