Advertisement

BiggBoss ನಿರೂಪಣೆಗೆ 10 ವರ್ಷ.. ಸುದೀಪ್‌ ಹರ್ಷ…

01:03 PM Oct 05, 2023 | Team Udayavani |

ನಟ ಸುದೀಪ್‌ “ಬಿಗ್‌ಬಾಸ್‌’ ರಿಯಾಲಿಟಿ ಶೋದ ಕಳೆದ 9 ಸೀಸನ್‌ಗಳಲ್ಲಿ ನಿರೂಪಕನಾಗಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದು, ಈಗ “ಬಿಗ್‌ಬಾಸ್‌ ಕನ್ನಡ ಸೀಸನ್‌ 10′ ನಿರೂಪಣೆಗೆ ಸಜ್ಜಾಗಿದ್ದಾರೆ. “ಈ ನಿರೂಪಣೆಯಲ್ಲಿ ತನಗೆ ದೊಡ್ಡ ಜವಾಬ್ದಾರಿ ಮತ್ತು ಸವಾಲು ಇದೆ. ಆ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸದೇ ಇದ್ದರೆ ಆ ದಿನ ತಮ್ಮ ಆ್ಯಂಕರಿಂಗ್‌ ಮುಗಿಯುತ್ತದೆ’ ಎಂದು ಸುದೀಪ್‌ ಹೇಳಿದ್ದಾರೆ.

Advertisement

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ “ಬಿಗ್‌ ಬಾಸ್‌’ನ 10ನೇ ಸೀಸನ್‌ ಇದೇ ಅಕ್ಟೋಬರ್‌ 8 ರಿಂದ ಅದ್ಧೂರಿಯಾಗಿ ಶುರುವಾಗಲಿದೆ. “ಬಿಗ್‌ಬಾಸ್‌’ 10ನೇ ಸೀಸನ್‌ ಪ್ರಸಾರವಾಗುವ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಾಜರಾಗಿದ್ದ ನಟ ಕಂ ಬಿಗ್‌ಬಾಸ್‌ ನಿರೂಪಕ ಸುದೀಪ್‌ ಮತ್ತು “ಬಿಗ್‌ಬಾಸ್‌’ ರಿಯಾಲಿಟಿ ಶೋನ ತಂಡ, ಕಾರ್ಯಕ್ರಮದ ರೂಪುರೇಷೆಗಳು ಮತ್ತು ಸ್ವರೂಪದ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿತು.

ಇದೇ ವೇಳೆ ಮಾತನಾಡಿದ ಸುದೀಪ್‌, “ಆರಂಭದಿಂದಲ್ಲಿ ಬಿಗ್‌ಬಾಸ್‌ ನಿರೂಪಣೆಯ ಸಿದ್ಧಸೂತ್ರವನ್ನು ಇಟ್ಟುಕೊಂಡು ನಿರೂಪಣೆ ಮಾಡೋಣ ಎಂದು ಆಯೋಜಕರು ಹೇಳಿದ್ದರು. ಆದರೆ ನಾಲ್ಕು ವಾರಗಳ ಕಾಲ ನನ್ನದೇ ಸ್ಟೈಲ್‌ನಲ್ಲಿ ನಿರೂಪಣೆ ಮಾಡಲು ಅವಕಾಶ ಕೊಡಿ, ಅದರಲ್ಲಿ ಏನಾದರೂ ಫೆಲ್ಯೂರ್‌ ಆದರೆ, ನೀವು ಹೇಳಿದಂತೆಯೇ ನಿರೂಪಣೆ ಮಾಡುತ್ತೇನೆ ಎಂದು ಅವರಲ್ಲಿ ಕೇಳಿಕೊಂಡು, ಬಿಗ್‌ಬಾಸ್‌ ಮಾಮೂಲಿ ಶೈಲಿಯನ್ನು ಬದಿಗಿಟ್ಟು ನನ್ನದೇ ಶೈಲಿಯಲ್ಲಿ ನಿರೂಪಣೆ ಶುರು ಮಾಡಿದ್ದೆ. ಆನಂತರ ಅದು ಕ್ಲಿಕ್‌ ಆಯಿತು. ಭಾರತದ ಬೇರೆ ಬೇರೆ ಭಾಷೆಗಳಲ್ಲಿ ಪ್ರಸಾರವಾಗುತ್ತಿದ್ದ ಬಿಗ್‌ಬಾಸ್‌ ಶೋಗಳಲ್ಲೂ ಕನ್ನಡದ ಬಿಗ್‌ಬಾಸ್‌ ಶೋದ ನಿರೂಪಣೆಯನ್ನು ಅನುಕರಿಸುತ್ತಿದ್ದರು. ಈಗ ಈ ಜರ್ನಿ 9 ಸೀಸನ್‌ಗಳನ್ನು ಮುಗಿಸಿ, 10ನೇ ಸೀಸನ್‌ಗೆ ಕಾಲಿಡುತ್ತಿದೆ. ನಿರೂಪಕನಾಗಿ ಬಿಗ್‌ಬಾಸ್‌ ಜರ್ನಿ ಸಾಕಷ್ಟು ಕಲಿಸಿದೆ, ಖುಷಿಕೊಟ್ಟಿದೆ’ ಎಂದಿದ್ದಾರೆ.

ಇನ್ನು ತಮ್ಮ ಸಿನಿಮಾಗಳ ಕೆಲಸದ “ಬಿಗ್‌ಬಾಸ್‌’ ಶೋಗಳಲ್ಲಿ ನಡೆಯುವ ಬೆಳವಣಿಗೆಗಳು, ಅದರಲ್ಲಿರುವ ಸ್ಪರ್ಧಿಗಳ ಬಗ್ಗೆ ತಾವು ಗಮನ ಹರಿಸುವುದರ ಬಗ್ಗೆ ಮತ್ತು ಅವರೊಂದಿಗೆ ಸಂವಹನ ನಡೆಸುವುದರ ಬಗ್ಗೆ ಮಾತನಾಡಿರುವ ಸುದೀಪ್‌, “”ಬಿಗ್‌ಬಾಸ್‌’ ನಿರೂಪಣೆ ಮಾಡುವಾಗ ನನ್ನ ಮಾತಿನ ಮೇಲೆ ಹಿಡಿತ ಇಲ್ಲ ಎಂದರೆ, ನಾನು ಕೇಳಿದ ಪ್ರಶ್ನೆಗಳ ಮೇಲೆ ನನಗೆ ನಿಯಂತ್ರಣ ಇಲ್ಲ ಎಂದರೆ, ಎಡವಟ್ಟಾಗಿ ನಾನು ಬೇರೆ ಪ್ರಶ್ನೆಗಳನ್ನು ಕೇಳಿದರೆ, ಸ್ಪರ್ಧಿಗಳ ಹೇಳಿಕೆಯನ್ನು ನಾನು ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಂಡರೆ ಅವರಿಗೆ ವೋಟ್ಸ್‌ ಕಡಿಮೆ ಆಗುತ್ತದೆ. ಅವರ ವ್ಯಕ್ತಿತ್ವ ಬಿದ್ದು ಹೋಗುತ್ತದೆ. ಸ್ಪರ್ಧಿಗಳಿಗೆ ನನ್ನ ಮೇಲಿನ ನಂಬಿಕೆ ಹೊರಟು ಹೋಗುತ್ತದೆ. “ಕ್ಷಮಿಸಿ ಸರ್‌… ನಾನು ಹೇಳಿದ್ದು ಹಾಗಲ್ಲ. ನೀವು ಬೇಕಿದ್ದರೆ ಇನ್ನೊಮ್ಮೆ ಚೆಕ್‌ ಮಾಡಿ’ ಅಂತ ಸ್ಪರ್ಧಿಗಳು ನನಗೆ ಹೇಳುವಂತಹ ಪರಿಸ್ಥಿತಿ ಬಂದರೆ ಆ ದಿನ ನನ್ನ ಆ್ಯಂಕರಿಂಗ್‌ ಅಂತ್ಯವಾಗುತ್ತದೆ. ಅದೃಷ್ಟವಶಾತ್‌ ಇಂದಿನ ತನಕ ಅದು ಆಗಿಲ್ಲ. ಯಾಕೆಂದರೆ ನಾನು ಗಮನ ಕೊಟ್ಟು ಎಲ್ಲವನ್ನೂ ನೋಡುತ್ತೇನೆ. ನನ್ನ ದೃಷ್ಟಿಕೋನ ಮುಖ್ಯವಾಗುತ್ತದೆ. ಪಕ್ಷಪಾತ ಮಾಡುವ ಹಾಗಿಲ್ಲ’ ಎಂದು ಸುದೀಪ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next