ಬೆಂಗಳೂರು: ಕಿಚ್ಚ ಸುದೀಪ್ (Kiccha Sudeep) ಅವರ ಹುಟ್ಟುಹಬ್ಬಕ್ಕೆ ʼಮ್ಯಾಕ್ಸ್ʼ ಸಿನಿಮಾದಿಂದ ʼಮಾಸ್ʼ ಹಾಡು ರಿಲೀಸ್ ಆಗುತ್ತಿದ್ದಂತೆ ಅವರ ಮುಂದಿನ ಸಿನಿಮಾದ ಕುರಿತ ಅಪ್ಡೇಟ್ ವೊಂದು ಹೊರಬಿದ್ದಿದೆ.
ವಿಕ್ರಾಂತ್ ರೋಣʼ ಬಳಿಕ ನಿರ್ದೇಶಕ ಅನೂಪ್ ಭಂಡಾರಿ (Anup Bhandari) ಜತೆ ಕಿಚ್ಚ ಅವರು ʼಬಿಲ್ಲ ರಂಗ ಬಾಷʼ (Billa Ranga Baashaa) ಸಿನಿಮಾವನ್ನು ಮಾಡುತ್ತಿರುವುದು ಗೊತ್ತೇ ಇದೆ. ಅನೌನ್ಸ್ ಆದ ಬಳಿಕದಿಂದ ಸಿನಿಮಾದ ಬಗ್ಗೆ ಸಾಕಷ್ಟು ವಿಚಾರಗಳು ಕುತೂಹಲ ಹೆಚ್ಚಿಸಿದೆ.
ಈ ಹಿಂದೆ ಅನೂಪ್ ʼಬಾ ರಾಜಾ ಬಾ’ ಎನ್ನುವ ಸಣ್ಣ ಹಾಡಿನ ಝಲಕ್ ಕೇಳಿಸಿ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿಸಿದ್ದರು. ಇದೀಗ ಹೇಳಿದಂತೆ ಕಿಚ್ಚನ ಹುಟ್ಟುಹಬ್ಬಕ್ಕೆ ʼಬಿಲ್ಲ ರಂಗ ಬಾಷʼ ಹೊಸ ಮಾಹಿತಿಯನ್ನು ನೀಡಿದ್ದಾರೆ.
ಬಹಳ ವಿಭಿನ್ನವಾಗಿ ಕಿಚ್ಚ ʼಬಿಲ್ಲ ರಂಗ ಬಾಷʼ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ʼಬಿಲ್ಲ ರಂಗ ಬಾಷʼ ಸಿನಿಮಾದ ಟೈಟಲ್ ಲೋಗೋ ಹಾಗೂ ಕಾನ್ಸೆಪ್ಟ್ ವಿಡಿಯೋವನ್ನು ರಿಲೀಸ್ ಮಾಡಲಾಗಿದ್ದು, ʼವಿಕ್ರಾಂತ್ ರೋಣʼದಂತೆ ಈ ಸಿನಿಮಾದಲ್ಲೂ ವಿಎಫ್ ಎಕ್ಸ್ ಹೆಚ್ಚಾಗಿ ಇರಲಿದೆ ಎನ್ನುವುದು ಝಲಕ್ ನಲ್ಲಿ ಗೊತ್ತಾಗುತ್ತದೆ.
ಈ ಹಿಂದೆಯೇ ಅನೂಪ್ ಭಂಡಾರಿ ಅವರು ʼಬಿಲ್ಲ ರಂಗ ಬಾಷʼ ಭವಿಷ್ಯದ ಕಥೆಯನ್ನು ಹೇಳುವ ಚಿತ್ರವೆಂದು ಹೇಳಿದ್ದರು. ಅದರಂತೆ ‘ಬಿಲ್ಲ ರಂಗ ಬಾಷ’ ಇಂದಿನಿಂದ 185 ವರ್ಷಗಳಷ್ಟು ಭವಿಷ್ಯದ ಕಥೆ ಅಂದರೆ ʼ2209 ADʼಯ ಕಥೆಯನ್ನು ಹೇಳಲಿದೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ.
ಅಂದಹಾಗೆ ಟಾಲಿವುಡ್ ನಲ್ಲಿ ʼಹನುಮಾನ್ʼ ಸಿನಿಮಾಕ್ಕೆ ಬಂಡವಾಳ ಹಾಕಿ ಗೆದ್ದಿದ್ದ ನಿರಂಜನ್ ರೆಡ್ಡಿ ಹಾಗೂ ಚೈತನ್ಯ ರೆಡ್ಡಿ ‘ಬಿಲ್ಲ ರಂಗ ಬಾಷ’ನಿಗೆ ʼಪ್ರೈಮ್ ಶೋ ಎಂಟರ್ಟೈನ್ಮೆಂಟ್ʼ ಬ್ಯಾನರ್ ಅಡಿಯಲ್ಲಿ ಬಂಡವಾಳ ಹಾಕಲಿದ್ದಾರೆ.
ನನ್ನ ಮತ್ತು ಅನೂಪ್ ಚಿತ್ರಜೀವನದಲ್ಲೇ ದೊಡ್ಡ ಸಿನಿಮಾವಿದು:
ಇತ್ತೀಚೆಗೆ ಸುದೀಪ್ ʼಬಿಲ್ಲ ರಂಗ ಬಾಷʼ ಸಿನಿಮಾ ಬಗ್ಗೆ ಮಾತನಾಡಿದ ಅವರು, ‘ಬಿಲ್ಲ ರಂಗ ಭಾಷಾ’ ಸದ್ಯದಲ್ಲೇ ಪ್ರಾರಂಭವಾಗಲಿದೆ. ಆರೇಳು ವರ್ಷಗಳಿಂದ ಕೆಲಸ ನಡೆಯುತ್ತಿದೆ. ‘ವಿಕ್ರಾಂತ್ ರೋಣʼಗೂ ಮೊದಲೇ ಆ ಚಿತ್ರ ಮಾಡಬೇಕೆನ್ನುವ ಯೋಚನೆ ಇತ್ತು. ‘ವಿಕ್ರಾಂತ್ ರೋಣ’ ಚಿತ್ರವನ್ನು ನಾವು ಮಾಡಿದ್ದೇ ‘ಬಿಲ್ಲ ರಂಗ ಭಾಷಾ’ ಮಾಡುವುದಕ್ಕೆ ಸಾಧ್ಯವೋ ಇಲ್ಲವೋ ಎಂದು ನೋಡುವುದಕ್ಕೆ. ಏಕೆಂದರೆ, ನಮ್ಮ ಹತ್ತಿರ ದುಡ್ಡಿರಬಹುದು. ಆದರೆ, ಸಾಮರ್ಥ್ಯ ಇರುತ್ತದೋ ಇಲ್ಲವೋ ಗೊತ್ತಿರುವುದಿಲ್ಲ. ನಾವು ಹೇಳೋಕೆ ಹೋಗಿ ಅದು ತೆರೆಯ ಮೇಲೆ ಜೋಕ್ ಆಗಿ ಕಾಣಿಸಬಹುದು. ಹಾಗಾಗಿ, ಮೊದಲು ಈ ಚಿತ್ರ ಆಗುತ್ತಾ ಎಂದು ಗೊತ್ತಾಗಬೇಕಿದ್ದರೆ, ಬೇರೆ ಏನಾದರೂ ಮಾಡಬೇಕು. ‘ವಿಕ್ರಾಂತ್ ರೋಣ’ ಮಾಡಿದ್ದರಿಂದ ನಮ್ಮ ಸಾಮರ್ಥ್ಯ ಅರ್ಥವಾಯಿತು. ಒಂದು ತಂಡವಾಯಿತು. ನಮಗೆ ನಮ್ಮ ಮೇಲೆ ನಂಬಿಕೆ ಬಂತು. ಈಗ ‘ಬಿಲ್ಲ ರಂಗ ಭಾಷಾ’ ಮಾಡುವುದಕ್ಕೆ ಕೈ ಹಾಕಿದ್ದೇವೆ. ಈ ಚಿತ್ರ ನನ್ನ ಮತ್ತು ಅನೂಪ್ ಚಿತ್ರಜೀವನದಲ್ಲೇ ದೊಡ್ಡ ಸಿನಿಮಾಗಳು. ಚಿತ್ರಕ್ಕೆ ಸಾಕಷ್ಟು ರೀಸರ್ಚ್ ಕೆಲಸದ ಅವಶ್ಯಕತೆ ಇತ್ತು. ಅದಕ್ಕೆ ಸಾಕಷ್ಟು ಸಮಯವಾಯಿತು. ಅದು ಬಹಳ ಅಪರೂಪದ ಚಿತ್ರವಾಗಿರುತ್ತದೆ ಮತ್ತು ಹಲವು ಭಾಷೆಗಳಲ್ಲಿ ಮೂಡಿಬರುತ್ತದೆ” ಎಂದು ಹೇಳಿದ್ದರು.
ಪ್ಯಾನ್ ಇಂಡಿಯಾ ಭಾಷೆಯಲ್ಲಿ ಸಿನಿಮಾ ತೆರೆಗೆ ಬರಲಿದೆ. ಸಿನಿಮಾದ ಪಾತ್ರವರ್ಗ ಹಾಗೂ ಇತರೆ ಮಾಹಿತಿ ಮುಂದಿನ ದಿನಗಳಲ್ಲಿ ರಿವೀಲ್ ಆಗುವ ಸಾಧ್ಯತೆಯಿದೆ.