ಬೀದರ್: ‘ಹತ್ಯೆಗೆ ಸಂಚು’ ಆರೋಪ ಸಂಬಂಧ ಕೇಂದ್ರ ಸಚಿವ ಭಗವಂತ ಖೂಬಾ ಮತ್ತು ಔರಾದ ಶಾಸಕ ಪ್ರಭು ಚವ್ಹಾಣ ಅವರ ನಡುವೆ ಮಾತಿನ ಜಟಾಪಟಿ ಈಗ ಮತ್ತೊಂದು ಮಜಲು ತಲುಪಿದೆ. ಸೋಮವಾರ ಸಚಿವ ಖೂಬಾ ಅವರು ಔರಾದ ಗ್ರಾಮ ದೇವತೆ ಶ್ರೀ ಅಮರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನನ್ನ ವಿರುದ್ಧದ ಆರೋಪಗಳನ್ನು ಉಡಿಗೆ ಹಾಕುತ್ತೇನೆ, ಈ ಆಘಾತದಿಂದ ಹೊರಗೆ ತರುವಂತೆ ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಬೆಳಿಗ್ಗೆ ದೇವಸ್ಥಾನಕ್ಕೆ ಆಗಮಿಸಿದ ಸಚಿವ ಖೂಬಾ, ಪೂಜೆ- ಅಭಿಷೇಕ ಮಾಡಿ ಪ್ರಾರ್ಥನೆ ಮಾಡಿದ್ದಾರೆ. ಬಳಿಕ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನನ್ನ ಜೀವನದಲ್ಲಿ ಯಾವುದೇ ಘಟನೆಗಳು ನಡೆದಾಗ ಶ್ರೀ ಅಮರೇಶ್ವರರ ದರ್ಶನ ಪಡೆಯುತ್ತೇನೆ. ಆದರೆ, ಈ ಬಾರಿ ಶಾಸಕ ಚವ್ಹಾಣ ಅವರು ಹತ್ಯೆಗೆ ಸಂಚಿನ ಆರೋಪ ನನ್ನ ಮೇಲೆ ಹೊರಿಸಿದ್ದಾರೆ. ಇದರಿಂದ ಮನಸ್ಸು ಘಾಸಿಯಾಗಿದ್ದು, ಎಲ್ಲ ಆರೋಪಗಳಿಗೆ ಉತ್ತರ ಕೊಡದೆ, ದೇವರ ಉಡಿಗೆ ಹಾಕಿ ಧೈರ್ಯ ಕೊಡುವಂತೆ ಕೇಳಿಕೊಂಡಿದ್ದೇನೆ ಎಂದು ಹೇಳಿದರು.
ನಾನೊಬ್ಬ ರೈತರ ಮಗ, ಸಾಮಾನ್ಯ ಕಾರ್ಯಕರ್ತನಾಗಿ ಜನ ಮತ್ತು ಕಾರ್ಯಕರ್ತರ ಆಶೀರ್ವಾದಿಂದ ಎರಡು ಬಾರಿ ಸಂಸದನಾಗಿದ್ದೇನೆ. ನನ್ನ ಪರಿಶುದ್ಧ ಮನಸ್ಸು ಮತ್ತು ಹಸ್ತದಿಂದಾಗಿ ಕೇಂದ್ರದಲ್ಲಿ ಸಚಿವ ಸ್ಥಾನ ಒಲಿದಿದೆ. ನಾನು ಗುಂಡಾ ಪ್ರವೃತ್ತಿವುಳ್ಳವನಾಗಿದ್ದರೆ ಶಾಸಕ ಚವ್ಹಾಣ ನನ್ನ ವಿರುದ್ಧ ಹತ್ಯೆ ಸ್ಕೆಚ್ ನಂತ ಆರೋಪ ಮಾಡುವ ಧೈರ್ಯ ತೋರುತ್ತಿರಲಿಲ್ಲ. ನಾನೊಬ್ಬ ಸಾತ್ವಿಕ ರಾಜಕಾರಣಿ. ವಿಧಾನಸಭೆ ಚುನಾವಣೆಯಲ್ಲಿ ನಾನು ಅವರಿಗೆ ವಿರೋಧ ಮಾಡಿದ್ದೇನೆಂಬ ಆರೋಪ ಮಾಡಿದ್ದಾರೆ. ಪಕ್ಷದ ವರಿಷ್ಠರಿಗೆ ಪಿತೂರಿ ಮಾಡಿ ಬಂದಿದ್ದು, ಇದ್ಯಾವುದಕ್ಕೂ ನಾನು ತಲೆ ಕೆಡಿಸಿಕೊಳ್ಳಲ್ಲ ಎಂದರು.
ಔರಾದನಲ್ಲಿ ಜರುಗಿದ ವಿಜಯ ಸಂಕಲ್ಪ ಯಾತ್ರೆಗೆ ಶಾಸಕರು ನನ್ನನ್ನು ಆಹ್ವಾನಿಸಿರಲಿಲ್ಲ. ಆದರೂ ತಂಡದ ಒಬ್ಬ ಸದಸ್ಯನಾಗಿ ಭಾಗವಹಿಸಿದ್ದೆ ಮತ್ತು ಚವ್ಹಾಣ ಅವರು ಅಧಿಕ ಬಹುಮತದಿಂದ ಗೆದ್ದು ಬರುತ್ತಾರೆ ಎಂದು ಭಾಷಣದಲ್ಲಿ ಹೇಳಿದ್ದೆ. ಪಕ್ಷ ವಿರೋಧಿ ಚಟುವಟಿಕೆ ನನ್ನ ಸ್ವಭಾವದಲ್ಲೇ ಇಲ್ಲ. ಚುನಾವಣೆ ಪೂರ್ವದಲ್ಲೇ ನಿಮ್ಮ ಕ್ಷೇತ್ರದಲ್ಲಿ ಯಾವುದಾದರೂ ಕಾರ್ಯಕ್ರಮ ಕೊಡಿ, ಹಿರಿಯ ಕಾರ್ಯಕರ್ತರನ್ನು ಕಡೆಗಣಿಸಬೇಡಿ ಎಂದು ಚವ್ಹಾಣ ಅವರಿಗೆ ಹೇಳಿದ್ದೆ. ಆದರೆ, ಚವ್ಹಾಣ ಅವರು ನೀವು ಬರುವುದು ಬೇಕಾಗಿಲ್ಲ, ಪಕ್ಷದ ಬೇರೆ ಜವಾಬ್ದಾರಿಗಳನ್ನು ಮಾಡಿ ಹೇಳಿದ್ದರು. ಹೀಗಾಗಿ ಶಾಸಕರ ದರ್ಪ, ದುರ್ವರ್ತನೆಯಿಂದ ಬೇಸತ್ತು ಪಕ್ಷದಿಂದ ಹೊರಹೋಗಿದ್ದಾರೆ ಎಂದು ಆರೋಪಿಸಿದರು.
ಈ ವೇಳೆ ಪ್ರಮುಖರಾದ ಗಣಪತರಾವ್ ಖೂಬಾ, ಬಂಡೆಪ್ಪ ಕಂಟೆ, ರಮೇಶ ಬಿರಾದಾರ, ರವಿ ಮೀಸೆ, ಚಂದ್ರಪ್ಪ ಪಾಟೀಲ, ಪ್ರಕಾಶ ಘೂಳೆ ಮತ್ತು ಮಾದಪ್ಪ ಖೂಬಾ ಮತ್ತಿತರರಿದ್ದರು.