ಮಹಾನಗರ: ಕ್ರೀಡಾಪಟುಗಳು ಭವಿಷ್ಯದಲ್ಲಿ ಒಲಿಂಪಿಕ್ಸ್‌ನಂತಹ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಉತ್ತೇಜನ ನೀಡುವ ಉದ್ದೇಶದಿಂದ ಮಂಗಳೂರಿನಲ್ಲಿ “ಖೇಲೊ ಇಂಡಿಯಾ ತರಬೇತಿ ಕೇಂದ್ರ’ ಸ್ಥಾಪನೆಗೆ ನಿರ್ಧರಿಸಲಾಗಿದೆ. ಅದರಂತೆ ಮೊದಲ ಹಂತದ ಕೆಲಸಗಳು ಈಗಾಗಲೇ ಪ್ರಾರಂಭಗೊಂಡಿವೆ.
“ಒಂದು ಜಿಲ್ಲೆ ಒಂದು ಕ್ರೀಡೆ’ ಎಂಬ ಪರಿಕಲ್ಪನೆಯಡಿಯಲ್ಲಿ ಕ್ರೀಡೆ ಹಾಗೂ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಖೇಲೊ ಇಂಡಿಯಾ ಯೋಜನೆಯಡಿಯಲ್ಲಿ ಜಿಲ್ಲಾ ಮಟ್ಟದಲ್ಲಿ ತರಬೇತಿ ಕೇಂದ್ರ ಸ್ಥಾಪಿಸಲು ಕೇಂದ್ರ ಸರಕಾರ ಮುಂದೆ ಬಂದಿದೆ. ಅದರಂತೆ ದ.ಕ. ಜಿಲ್ಲಾ ಕೇಂದ್ರವು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಕಾರ್ಯ ನಿರ್ವಹಿಸಲಿದೆ. ತರಬೇತಿ ಕೇಂದ್ರದ ಪ್ರಾರಂಭೋತ್ಸವದ ಖರ್ಚು ವೆಚ್ಚ ಕ್ಕಾಗಿ ಮೂಲಸೌಕರ್ಯಕ್ಕೆಂದು ಸದ್ಯ 2 ಲಕ್ಷ ರೂ. ಬಿಡುಗಡೆಗೊಳಿಸಲಾಗಿದೆ.
ರಾಜ್ಯದ ಪ್ರತೀ ಜಿಲ್ಲೆಯಲ್ಲಿ ಅಲ್ಲಿನ ಪರಿಸರಕ್ಕೆ ಹೊಂದಿಕೊಂಡಿರುವ ಕ್ರೀಡೆಯ ಕುರಿತಂತೆ ಅಲ್ಲಿ ತರಬೇತಿ ನೀಡಲಾಗು ತ್ತದೆ. ಅದರಂತೆ ದ.ಕ. ಜಿಲ್ಲಾ ಕೇಂದ್ರದಲ್ಲಿ ಆ್ಯತ್ಲೆಟಿಕ್ ಕ್ರೀಡೆಗೆ ತರಬೇತಿ ನೀಡಲು ಆದೇಶಿಸ ಲಾಗಿದೆ.”ತರಬೇತಿಗಾಗಿ ಜಿಲ್ಲೆಯ ವಿವಿಧ ಕಡೆಗಳಿಂದ 30 ಮಂದಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾ ಗುತ್ತದೆ. ಶೇ. 50ರಷ್ಟು ಬಾಲಕಿಯರು ಮತ್ತು ಶೇ. 50ರಷ್ಟು ಬಾಲಕಿಯರ ಆಯ್ಕೆ ಪ್ರಕ್ರಿಯೆ ನಡೆ ಯಲಿದೆ. ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಪಾಲ್ಗೊಂಡ ಕ್ರೀಡಾಪಟುಗಳ ಆಯ್ಕೆಗೆ ಹೆಚ್ಚಿನ ಪ್ರಾಶಸ್ತÂ ನೀಡಲಾಗುತ್ತದೆ. ಈ ಆಯ್ಕೆ ಪ್ರಕ್ರಿಯೆಯು ಸದ್ಯ ಪ್ರಗತಿಯಲ್ಲಿದೆ’ ಎಂದು ಆ್ಯತ್ಲೆಟಿಕ್ ಹಿರಿಯ ತರಬೇತುದಾರ ಡಾ| ವಸಂತ್ ಕುಮಾರ್ ಅವರು ಸುದಿನಕ್ಕೆ ತಿಳಿಸಿದ್ದಾರೆ.
ಕ್ರೀಡಾಪಟುಗಳ ಆಯ್ಕೆ, ಗುಣಮಟ್ಟದ ತರ ಬೇತಿ ನೀಡುವ ಉದ್ದೇಶದಿಂದ ಈ ಕೇಂದ್ರಗಳನ್ನು ಸ್ಥಾಪಿಸ ಲಾಗುತ್ತಿದ್ದು, ಮಾಜಿ ಚಾಂಪಿಯನ್‌ಗಳು, ಅರ್ಹತೆ ಪಡೆದ ತರಬೇತುದಾರರು ಈ ಕೇಂದ್ರದಲ್ಲಿ ತರಬೇತುದಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ತರಬೇತಿ ನೀಡಲು ಇಚ್ಚಿಸಿದಲ್ಲಿ ವಾರ್ಷಿಕ 5 ಲಕ್ಷ ರೂ. ವೇತನ, ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ವಿಜೇತ ಕ್ರೀಡಾಪಟುಗಳು ತರಬೇತಿ ನೀಡಲು ಇಚ್ಚಿಸಿದಲ್ಲಿ ಅವರಿಗೆ ವಾರ್ಷಿಕ 4 ಲಕ್ಷ ರೂ. ನೀಡಲಾಗುತ್ತದೆ. ಈ ಎರಡೂ ವರ್ಗದಲ್ಲಿ ಇಲ್ಲದಿದ್ದರೆ ಎನ್‌ಐಎಸ್ ಶೈಕ್ಷಣಿಕ ಅರ್ಹತೆ ಪಡೆದ ಕೋಚ್, ಕ್ಲಬ್ ಮುಖೇನ ತರಬೇತಿ ನೀಡುವವರಿಗೆ ಆದ್ಯತೆ. ಆಯ್ಕೆಯಾದ ಪ್ರತಿ ಕ್ರೀಡಾ ಪಟುವು ಎನ್‌ಎಸ್‌ಆರ್‌ಎಸ್‌ನಲ್ಲಿ ಕಡ್ಡಾಯವಾಗಿ ನೋಂದಾಯಿಸಬೇಕು.
ಏನಿದು ತರಬೇತಿ ಕೇಂದ್ರ?
2028ರಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯಲಿದ್ದು, ಆ ವೇಳೆ ಪದಕ ಪಟ್ಟಿಯಲ್ಲಿ ಭಾರತ ದೇಶವು ಅಗ್ರ 10 ಸ್ಥಾನದೊಳಗೆ ಪಡೆಯುವಂತೆ ಮಾಡುವುದು ಕೇಂದ್ರ ಕ್ರೀಡಾ ಇಲಾಖೆಯ ಗುರಿ. ಈ ಗುರಿ ಸ್ಥಾಪನೆಗೆಂದು ದೇಶದ ಕ್ರೀಡಾ ಪ್ರತಿಭೆಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಪ್ರೋತ್ಸಾಹಿಸಬೇಕೆಂದು ಉದ್ದೇಶಕ್ಕೆ ಕೇಂದ್ರ ಸರಕಾರವು ಪ್ರತೀ ಜಿಲ್ಲೆಗಳಲ್ಲಿ ಖೇಲೊ ಇಂಡಿಯಾ ತರಬೇತಿ ಕೇಂದ್ರ ತೆರೆಯಲು ಉದ್ದೇಶಿಸಲಾಗಿದೆ ಅದರಂತೆ ದ.ಕ. ಜಿಲ್ಲೆಯಲ್ಲಿ ಮಂಗಳೂರಿನಲ್ಲಿ ಈ ಕೇಂದ್ರ ತಲೆ ಎತ್ತಲಿದೆ. 30 ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಈ ಕೇಂದ್ರದಲ್ಲಿ ತರಬೇತಿ ನೀಡಲಾಗುತ್ತದೆ.
30 ಮಂದಿ ಕ್ರೀಡಾಪಟುಗಳು
ತರಬೇತಿಗೆ ಆಯ್ಕೆ
ಮುಂಬರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕ್ರೀಡಾಪಟುಗಳನ್ನು ತರಬೇತಿಗೊಳಿಸುವ ಉದ್ದೇಶಕ್ಕೆ ಕೇಂದ್ರ ಸರಕಾರವು ಖೇಲೊ ಇಂಡಿಯಾ ತರಬೇತಿ ಕೇಂದ್ರ ತೆರೆಯಲು ಉದ್ದೇಶಿಸಿದೆ. ಅದರಂತೆ ಮಂಗಳೂರಿನಲ್ಲಿ ಈ ಕೇಂದ್ರ ಸ್ಥಾಪನೆಯಾಗಲಿದೆ. ಒಟ್ಟು 30 ಮಂದಿ ಕ್ರೀಡಾಪಟುಗಳನ್ನು ತರಬೇತಿಗಾಗಿ ಆಯ್ಕೆ ಮಾಡಲಾಗುತ್ತಿದ್ದು, ಈ ಪ್ರಕ್ರಿಯೆ ಆರಂಭಿಕ ಹಂತದಲ್ಲಿದೆ.
–
ಪ್ರದೀಪ್ ಡಿ’ಸೋಜಾ,
ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
-ನವೀನ್ ಭಟ್ ಇಳಂತಿಲ