Advertisement

ಒಲಿಂಪಿಕ್ಸ್‌ಗೆ ಗಟ್ಟಿ ಬುನಾದಿಯಾದ ಖೇಲೋ ಇಂಡಿಯಾ

12:14 AM May 04, 2022 | Team Udayavani |

ಒಲಿಂಪಿಕ್ಸ್‌ಗೆ ಕ್ರೀಡಾಪಟುಗಳನ್ನು ಸಜ್ಜುಗೊಳಿಸುವ ಉದ್ದೇಶದೊಂದಿಗೆ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಖೇಲೋ ಇಂಡಿಯಾ ಯಾವುದೇ ಅಡ್ಡಿ ಆತಂಕಗಳು ಇಲ್ಲದೇ ಯಶಸ್ವಿಯಾಗಿ ಮುಗಿದಿದೆ. ಈ ಕ್ರೀಡಾಕೂಟ ನಿರಾತಂಕವಾಗಿ ನಡೆಯುವಲ್ಲಿ ರಾಜ್ಯ ಕ್ರೀಡಾ ಇಲಾಖೆಯ ಪಾತ್ರ ಅತ್ಯುತ್ತಮವಾಗಿತ್ತು ಎಂದರೆ ಅತಿಶಯೋಕ್ತಿಯೇನಲ್ಲ.

Advertisement

ದೇಶದ 189 ವಿಶ್ವವಿದ್ಯಾನಿಲಯಗಳು ಮತ್ತು 4,500 ಕ್ರೀಡಾಪಟುಗಳು ಭಾಗಿಯಾಗಿದ್ದ ಈ ಕ್ರೀಡಾಕೂಟ ಇತ್ತೀಚಿನ ದಿನಗಳಲ್ಲಿ ನಡೆದ ಅತ್ಯಂತ ದೊಡ್ಡ ಕ್ರೀಡಾ ಕಾರ್ಯಕ್ರಮವೂ ಹೌದು. ಇಂಥ ಕಾರ್ಯಕ್ರಮಗಳು ಭಾರತದ ಕ್ರೀಡಾಸ್ಫೂರ್ತಿಯನ್ನು ಮೇಲಕ್ಕೆತ್ತಲು ಒಂದೊಂದು ಹೆಜ್ಜೆ ಎಂದೇ ಪರಿಗಣಿಸಬಹುದು. ಕ್ರೀಡೆ ಎನ್ನುವುದನ್ನು ಬರೆ “ಆಟ’ ಎಂದಷ್ಟೇ ಪರಿಗಣಿಸದ ಕೇಂದ್ರದ ಮೋದಿ ಸರಕಾರ ಇದೊಂದು ದೇಶದ ಏಕತೆಯನ್ನು ನಿರ್ದೇಶಿಸುವ ಸಾಧನ ಎಂದು ಭಾವಿಸಿರುವುದು ಮುಂದಿನ ಹತ್ತು ವರ್ಷಗಳಲ್ಲಿ ದೇಶದ ಕ್ರೀಡೆಯ ಭವಿಷ್ಯದ ಬಗ್ಗೆ ಭರವಸೆ ಮೂಡುವಂತಾಗಿದೆ.

ಪ್ರತೀ ಒಲಿಂಪಿಕ್ಸ್‌ನಲ್ಲಿಯೂ ಭಾರತದ ಒಂದೇ ಕೊರಗು, ದೇಶಕ್ಕೆ ಹೆಚ್ಚು ಪದಕಗಳು ಬರಲಿಲ್ಲ ಎಂಬುದು. ಈ ಕೊರಗು ಹಿಂದಿನಿಂದಲೂ ಇದೆ. 130 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಪದಕದ ಬರವೇಕೆ ಎಂಬ ಪ್ರಶ್ನೆಯೂ ಕಾಡದೇ ಇರದು. ಇದಕ್ಕೆ ದೇಶೀಯ ಮಟ್ಟದಲ್ಲಿ ಸೂಕ್ತ ವೇದಿಕೆಗಳು ಸಿಗದೆ, ಅದೆಷ್ಟೋ ಪ್ರತಿಭೆಗಳು ಅರಳುವ ಮುನ್ನವೇ ಬಾಡಿ ಹೋಗುತ್ತವೆ ಎಂಬ ಮಾತುಗಳೂ ಇವೆ. ಇಂಥ ಪ್ರತಿಭೆಗಳಿಗೆ ವೇದಿಕೆಯಾಗುವುದೇ ಇಂಥ ಖೇಲೋ ಇಂಡಿಯಾದಂಥ ಕೂಟಗಳು. ಈ ಕೂಟಗಳಿಂದ ತೆರೆ ಮರೆಯಲ್ಲಿರುವ ಪ್ರತಿಭೆಗಳು ಮುಖ್ಯ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತವೆ ಎಂಬುದು ಸುಳ್ಳಲ್ಲ.

ಕ್ರೀಡಾವಲಯದಲ್ಲಿರುವ ಕೆಲವು ಹೊಲಸು ರಾಜಕೀಯಗಳು ಕ್ರೀಡಾ ಪಟುಗಳನ್ನು ಕುಗ್ಗಿಸುತ್ತಿರುವುದು ನಿಜವೇ. ಈ ಹಿನ್ನೆಲೆಯಲ್ಲಿ ಆಸಕ್ತರಿಗೆ ಕ್ರೀಡಾ ತರಬೇತಿ ನೀಡುವುದು ಮಾತ್ರವಲ್ಲದೆ, ಆಯ್ಕೆಯಲ್ಲಿ ಪಾರದರ್ಶಕತೆ ತರಬೇಕಾಗಿದೆ. ಪ್ರಧಾನಿ ಮೋದಿ ಅವರು “ಫಿಟ್‌ ಇಂಡಿಯಾ’ ಎಂಬ ಅಭಿಯಾನದ ಮೂಲಕ ದೇಶದ ಯುವಕರಲ್ಲಿ ಸ್ವಾಸ್ಥ್ಯ ಮತ್ತು ಕ್ರೀಡಾ ಸ್ಫೂರ್ತಿಯನ್ನು ತುಂಬಲು ಯತ್ನಿಸುತ್ತಿರುವುದು ಇಲ್ಲಿ ಉಲ್ಲೇಖಾರ್ಹ. ಹಾಗೆಯೇ ಖೇಲೋ ಇಂಡಿಯಾ ಎಂಬ ಕಾರ್ಯಕ್ರಮದ ಮೂಲಕ ಕ್ರೀಡೆಯನ್ನು ಯುವಕರಿಗೆ ತಲುಪಿಸುವಲ್ಲಿ ಸರಕಾರ ಹೆಜ್ಜೆ ಇಟ್ಟಿದೆ.

ರಾಜ್ಯ ಸರಕಾರ ಸಹ ಕ್ರೀಡೆಗೆ ಉತ್ತೇಜನ ನೀಡುವ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಸ್ತುತ್ಯರ್ಹ. ಮುಂದಿನ ಒಲಿಂಪಿಕ್ಸ್‌ನಲ್ಲಿ  ಪಾಲ್ಗೊಳ್ಳಲು ಸಹಾಯಕವಾಗುವಂತೆ ರಾಜ್ಯದಲ್ಲಿ 75 ಮಂದಿ ಕ್ರೀಡಾಳುಗಳಿಗೆ ತರಬೇತಿ ನೀಡುತ್ತಿರುವುದು ಸರಕಾರದ ಉತ್ತಮ ಕಾರ್ಯಕ್ರಮ.  ಅಲ್ಲದೆ ಮಂಗಳವಾರ ಬೆಂಗಳೂರಿನಲ್ಲಿ ನಡೆದ ಖೇಲೋ ಇಂಡಿಯಾದ ಸಮಾರೋಪ ಭಾಷಣದಲ್ಲಿ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಂದಿನ ಒಲಿಂಪಿಕ್ಸ್‌ನಲ್ಲಿ 10 ಪದಕವನ್ನು ಗೆಲ್ಲುವಂತೆ ಮಾಡುವುದೇ ನಮ್ಮ ಗುರಿ ಎಂದಿದ್ದಾರೆ.

Advertisement

ಈ ಆಶಯಗಳು ಈಡೇರಬೇಕಾದರೆ ಸರಕಾರದ ಆಲೋಚನೆ ಮತ್ತು ಯೋಜನೆಗಳು ಸಮರ್ಪಕ ರೀತಿಯಲ್ಲಿ ಕಾರ್ಯಾನುಷ್ಠಾನಕ್ಕೆ ಬರಬೇಕು. ಕ್ರೀಡಾಳುಗಳಿಗೆ ಆರ್ಥಿಕ, ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು ನೀಡುವ ಹಾಗೂ ಆಯ್ಕೆಯಲ್ಲಿ ಪಕ್ಷಪಾತಗಳು ನಡೆಯದಂತೆ ನೋಡಿಕೊಳ್ಳಬೇಕಿದೆ. ನಮ್ಮ ರಾಜ್ಯದಲ್ಲಿ ಕ್ರೀಡಾಳುಗಳಿಗೆ ಕೊರತೆ ಇಲ್ಲ. ಅವರಿಗೆ ಬೇಕಿರುವುದು ಸಶಕ್ತ ತರಬೇತಿ ಮತ್ತು ಉತ್ತೇಜನ. ಆ ನಿಟ್ಟಿನಲ್ಲಿ ರಾಜ್ಯ ಸರಕಾರ ಮತ್ತು ಕ್ರೀಡಾಭಿಮಾನಿಗಳು ಕ್ರೀಡಾಳುಗಳ ಹಿಂದೆ ನಿಂತರೆ ಖಂಡಿತವಾಗಿ ಕರ್ನಾಟಕ ಮತ್ತು ಭಾರತ ಜಗತ್ತಿನ ಕ್ರೀಡಾನಕ್ಷೆಯಲ್ಲಿ ಮಿನುಗುವುದರಲ್ಲಿ ಅನುಮಾನ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next