Advertisement

ಖೇಲ್‌ ರತ್ನಕ್ಕೆ ಕೊಹ್ಲಿ, ಮೀರಾಬಾಯಿ ಹೆಸರು ಶಿಫಾರಸು

10:27 AM Sep 18, 2018 | |

 ಪ್ರತಿಷ್ಠಿತ ಖೇಲ್‌ರತ್ನ, ಅರ್ಜುನ, ದ್ರೋಣಾಚಾರ್ಯ ಪ್ರಶಸ್ತಿಗೆ ಆಯ್ಕೆ
 ಅರ್ಜುನ ಪ್ರಶಸ್ತಿಗೆ 20 ಕ್ರೀಡಾ ಸಾಧಕರ ಹೆಸರು ಶಿಫಾರಸು
 ಸೆ. 25: ರಾಷ್ಟ್ರಪತಿ ಭವನದಲ್ಲಿ  ಪ್ರಶಸ್ತಿ ಪ್ರದಾನ ಸಮಾರಂಭ

Advertisement

ಹೊಸದಿಲ್ಲಿ: ಭಾರತೀಯ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ವಿಶ್ವ ಚಾಂಪಿಯನ್‌ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು ಅವರ ಹೆಸರನ್ನು 2018ನೇ ಸಾಲಿನ ಪ್ರತಿಷ್ಠಿತ ರಾಜೀವ್‌ ಗಾಂಧಿ ಖೇಲ್‌ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಜತೆಗೆ 20 ಕ್ರೀಡಾ ಸಾಧಕರನ್ನು ಅರ್ಜುನ ಪ್ರಶಸ್ತಿಗೆ ಆರಿಸಲಾಗಿದೆ. ಖ್ಯಾತ ಕ್ರೀಡಾ ತರಬೇತುದಾರರಿಗೆ ನೀಡಲಾಗುವ ದ್ರೋಣಾಚಾರ್ಯ ಹಾಗೂ ಜೀವಮಾನ ಸಾಧನೆಯ ಧ್ಯಾನ್‌ಚಂದ್‌ ಪ್ರಶಸ್ತಿಗಳ ಆಯ್ಕೆಯೂ ನಡೆದಿದೆ. ಕ್ರೀಡಾ ಪ್ರಶಸ್ತಿಗಳ ಆಯ್ಕೆ ಸಮಿತಿ ಸೋಮವಾರ ಸಾಧಕರ ಯಾದಿಯನ್ನು ಬಿಡುಗಡೆ ಮಾಡಿತು.

ಅರ್ಜುನ ಪ್ರಶಸ್ತಿ ಯಾದಿಯಲ್ಲಿ ಯುವ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ, ಏಶ್ಯನ್‌ ಗೇಮ್ಸ್‌ ಬಂಗಾರ ವಿಜೇತ ಕರ್ನಾಟಕದ ಟೆನಿಸಿಗ ರೋಹನ್‌ ಬೋಪಣ್ಣ, ಏಶ್ಯಾಡ್‌ನ‌ಲ್ಲಿ ಮಿಂಚಿದ ಹಿಮಾ ದಾಸ್‌, ಜಿನ್ಸನ್‌ ಜಾನ್ಸನ್‌, ರಾಹಿ ಸರನೋಬತ್‌, ಕ್ರಿಕೆಟ್‌ ಆಟಗಾರ್ತಿ ಸ್ಮತಿ ಮಂಧನಾ, ಕಾಮನ್ವೆಲ್ತ್‌ ಗೇಮ್ಸ್‌ ಚಿನ್ನ ವಿಜೇತೆ ಮಣಿಕಾ ಬಾತ್ರಾ ಮೊದಲಾದವರ ಜತೆ ಪ್ಯಾರಾ ಆ್ಯತ್ಲೀಟ್‌ಗಳಾದ ಅಂಕುರ್‌ ಧಾಮ ಮತ್ತು ಮನೋಜ್‌ ಸರ್ಕಾರ್‌ ಹೆಸರುಗಳಿವೆ.

ಸೆ. 25ರಂದು ಪ್ರಶಸ್ತಿ ಪ್ರದಾನ
ಈ ಎಲ್ಲ ಕ್ರೀಡಾ ಸಾಧಕರ ಹೆಸರುಗಳನ್ನು “ಪ್ರಶಸ್ತಿ ಆಯ್ಕೆ ಸಮಿತಿ’ ಶಿಫಾರಸು ಮಾಡಿದ್ದು, ಯಾದಿಯನ್ನು ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ರವಾನಿಸಿದೆ. ಇದಕ್ಕೆ ಕ್ರೀಡಾ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಅವರಿಂದ ಅಂತಿಮ ಮುದ್ರೆ ಬೀಳಬೇಕಿದೆ. ಸಾಮಾನ್ಯವಾಗಿ ಈ ಯಾದಿಯಲ್ಲಿ ಯಾವುದೇ ಬದಲಾವಣೆ ಗೋಚರಿಸುವ ಸಂಭವ ಇಲ್ಲ. ಹೀಗಾಗಿ ಇದೇ ಅಂತಿಮ ಆಯ್ಕೆಯಾಗುವ ಸಾಧ್ಯತೆ ಹೆಚ್ಚು.

ಕ್ರೀಡಾ ಪ್ರಶಸ್ತಿಗಳನ್ನು ಸೆ. 25ರಂದು ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಗಳನ್ನು “ರಾಷ್ಟ್ರೀಯ ಕ್ರೀಡಾದಿನ’ವಾದ ಆ. 29ರಂದು ನೀಡುವುದು ಸಂಪ್ರದಾಯವಾಗಿತ್ತು. ಆದರೆ ಈ ಬಾರಿ ಏಶ್ಯಾಡ್‌ ಕ್ರೀಡಾಕೂಟ ಎದುರಾದ್ದರಿಂದ, ಇಲ್ಲಿನ ಸಾಧಕರನ್ನೂ ಪ್ರಶಸ್ತಿಗೆ ಪರಿಗಣಿಸುವ ಉದ್ದೇಶದಿಂದ ಪ್ರಶಸ್ತಿ ವಿತರಣೆಯ ದಿನಾಂಕ ವನ್ನು ಮುಂದೂಡಲಾಯಿತು.

Advertisement

ಕೊಹ್ಲಿ ಮೂರನೇ ಕ್ರಿಕೆಟಿಗ
ಪ್ರಚಂಡ ಬ್ಯಾಟಿಂಗ್‌ ಫಾರ್ಮ್ನಲ್ಲಿರುವ ವಿರಾಟ್‌ ಕೊಹ್ಲಿ “ಖೇಲ್‌ ರತ್ನ’ ಗೌರವಕ್ಕೆ ಪಾತ್ರರಾಗಲಿರುವ 3ನೇ ಕ್ರಿಕೆಟಿಗ. 1997ರಲ್ಲಿ ಸಚಿನ್‌ ತೆಂಡುಲ್ಕರ್‌, 2007ರಲ್ಲಿ ಮಹೇಂದ್ರ ಸಿಂಗ್‌ ಧೋನಿ ಈ ಪ್ರಶಸ್ತಿಗೆ ಭಾಜನರಾಗಿದ್ದರು. ಪ್ರಸ್ತುತ ವಿರಾಟ್‌ ಕೊಹ್ಲಿ ವಿಶ್ವದ ನಂಬರ್‌ ವನ್‌ ಟೆಸ್ಟ್‌ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಕಳೆದೆರಡು ವರ್ಷಗಳಲ್ಲೂ ಇವರ ಹೆಸರನ್ನು ಖೇಲ್‌ ರತ್ನಕ್ಕಾಗಿ ನಾಮ ನಿರ್ದೇಶ ಮಾಡಲಾಗಿತ್ತು. 2017ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿತ್ತು.

ರೇಸ್‌ನಲ್ಲಿದ್ದ ಶ್ರೀಕಾಂತ್‌, ಪಂಘಲ್‌
24ರ ಹರೆಯದ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು 48 ಕೆಜಿ ವಿಭಾಗದಲ್ಲಿ ವರ್ಲ್ಡ್ ಚಾಂಪಿಯನ್‌ ಆಗಿದ್ದಾರೆ. ಇವರೊಂದಿಗೆ ಬ್ಯಾಡ್ಮಿಂಟನ್‌ ಆಟಗಾರ ಕೆ. ಶ್ರೀಕಾಂತ್‌ ಕೂಡ ರೇಸ್‌ನಲ್ಲಿದ್ದರು. ಶ್ರೀಕಾಂತ್‌ “ಸೂಪರ್‌ ಸೀರಿಸ್‌ ಸರ್ಕ್ನೂಟ್‌’ನಲ್ಲಿ ಶ್ರೇಷ್ಠ ನಿರ್ವಹಣೆ ನೀಡಿದ್ದರು. ಆದರೆ ಹಾಲಿ ವಿಶ್ವ ಚಾಂಪಿಯನ್‌, ಕಾಮನ್ವೆಲ್ತ್‌ ಬಂಗಾರ ವಿಜೇತೆ ಎಂಬ ಕಾರಣಕ್ಕೆ ಮೀರಾಬಾಯಿ ಚಾನು ಅವರಿಗೆ ಅದೃಷ್ಟ ಒಲಿಯಿತು. ಕಳೆದ ಜಕಾರ್ತಾ ಏಶ್ಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಏಕೈಕ ಬಂಗಾರ ತಂದಿತ್ತ ಬಾಕ್ಸರ್‌ ಅಮಿತ್‌ ಪಂಘಲ್‌ ಹೆಸರು ಕೂಡ ಆಯ್ಕೆ ವೇಳೆ ಸುಳಿದು ಹೋಯಿತು. ಆದರೆ 2012ರ ಡೋಪಿಂಗ್‌ ಪ್ರಕರಣ ಎನ್ನುವುದು ಇದಕ್ಕೆ ಅಡ್ಡಿಯಾಗಿ ಪರಿಣಮಿಸಿತು ಎಂದು ಮೂಲಗಳು ಹೇಳಿವೆ.

ಕ್ರೀಡಾ ಪ್ರಶಸ್ತಿಗೆ ಆಯ್ಕೆ
ರಾಜೀವ್‌ ಗಾಂಧಿ ಖೇಲ್‌ರತ್ನ  
ವಿರಾಟ್‌ ಕೊಹ್ಲಿ (ಕ್ರಿಕೆಟ್‌), ಮೀರಾಬಾಯಿ ಚಾನು (ವೇಟ್‌ಲಿಫ್ಟಿಂಗ್‌), ದ್ರೋಣಾಚಾರ್ಯ ಪ್ರಶಸ್ತಿ (ಸಾಮಾನ್ಯ ವರ್ಗ), ಜೀವನ್‌ಜೋತ್‌ ಸಿಂಗ್‌ ತೇಜ (ಆರ್ಚರಿ), ಎಸ್‌.ಎಸ್‌. ಪನ್ನು (ಆ್ಯತ್ಲೆಟಿಕ್ಸ್‌), ವಿಜಯ್‌ ಶರ್ಮ (ವೇಟ್‌ಲಿಫ್ಟಿಂಗ್‌), ಸಿ.ಎ. ಕುಟ್ಟಪ್ಪ (ಬಾಕ್ಸಿಂಗ್‌), ಶ್ರೀನಿವಾಸ್‌ ರಾವ್‌ (ಟೇಬಲ್‌ ಟೆನಿಸ್‌),ದ್ರೋಣಾಚಾರ್ಯ ಪ್ರಶಸ್ತಿ 
(ಜೀವಮಾನ ಸಾಧನೆ), ಕ್ಲಾರೆನ್ಸ್‌ ಲೋಬೊ (ಹಾಕಿ), ತಾರಕ್‌ ಸಿನ್ಹಾ (ಕ್ರಿಕೆಟ್‌), ಜೀವನ್‌ ಕುಮಾರ್‌ ಶರ್ಮ (ಜೂಡೋ), ವಿ.ಆರ್‌. ಬೀಡು (ಆ್ಯತ್ಲೆಟಿಕ್ಸ್‌)

 ಧ್ಯಾನ್‌ಚಂದ್‌ ಪ್ರಶಸ್ತಿ 
 ಭರತ್‌ ಚೆಟ್ರಿ (ಹಾಕಿ), ಸತ್ಯದೇವ್‌ ಪ್ರಸಾದ್‌ (ಆರ್ಚರಿ), ದಾದು ಚೌಗುಲೆ (ಕುಸ್ತಿ), ಬಾಬ್ಬಿ ಅಲೋಶಿಯಸ್‌ (ಆ್ಯತ್ಲೆಟಿಕ್ಸ್‌)

 ಅರ್ಜುನ ಪ್ರಶಸ್ತಿ 
 ನೀರಜ್‌ ಚೋಪ್ರಾ (ಆ್ಯತ್ಲೆಟಿಕ್ಸ್‌), ಜಿನ್ಸನ್‌ ಜಾನ್ಸನ್‌ (ಆ್ಯತ್ಲೆಟಿಕ್ಸ್‌), ಹಿಮಾ ದಾಸ್‌ (ಆ್ಯತ್ಲೆಟಿಕ್ಸ್‌), ಎನ್‌. ಸಿಕ್ಕಿ ರೆಡ್ಡಿ (ಬ್ಯಾಡ್ಮಿಂಟನ್‌), ಸತೀಶ್‌ ಕುಮಾರ್‌ (ಬಾಕ್ಸಿಂಗ್‌), ಸ್ಮತಿ ಮಂಧನಾ (ಕ್ರಿಕೆಟ್‌),  ಶುಭಂಕರ್‌ ಶರ್ಮ (ಗಾಲ್ಫ್), ಮನ್‌ಪ್ರೀತ್‌ ಸಿಂಗ್‌ (ಹಾಕಿ), ಸವಿತಾ ಪೂನಿಯ (ಹಾಕಿ), ರವಿ ರಾಥೋರ್‌ (ಪೋಲೊ), ರಾಹಿ ಸರನೋಬತ್‌ (ಶೂಟಿಂಗ್‌), ಅಂಕುರ್‌ ಮಿತ್ತಲ್‌ (ಶೂಟಿಂಗ್‌), ಶ್ರೇಯಸಿ ಸಿಂಗ್‌ (ಶೂಟಿಂಗ್‌), ಮಣಿಕಾ ಬಾತ್ರಾ (ಟೇಬಲ್‌ ಟೆನಿಸ್‌), ಜಿ. ಸಥಿಯನ್‌ (ಟೇಬಲ್‌ ಟೆನಿಸ್‌), ರೋಹನ್‌ ಬೋಪಣ್ಣ (ಟೆನಿಸ್‌), ಸುಮಿತ್‌ (ಕುಸ್ತಿ), ಪೂಜಾ ಕಾದಿಯನ್‌ (ವುಶು),
ಅಂಕುರ್‌ ಧಾಮ (ಪ್ಯಾರಾ ಆ್ಯತ್ಲೆಟಿಕ್ಸ್‌), ಮನೋಜ್‌ ಸರ್ಕಾರ್‌ (ಪ್ಯಾರಾ ಆ್ಯತ್ಲೆಟಿಕ್ಸ್‌)

Advertisement

Udayavani is now on Telegram. Click here to join our channel and stay updated with the latest news.

Next