Advertisement

ಇಂದಿನಿಂದ ಕೆಎಚ್‌ಬಿ ಪ್ರಾಪರ್ಟಿ ಎಕ್ಸ್‌ಪೋ

11:46 AM Sep 22, 2017 | |

ಬೆಂಗಳೂರು: ಕರ್ನಾಟಕ ಗೃಹ ಮಂಡಳಿಯು ಕೆಂಗೇರಿ ಉಪನಗರ, ಬಂಡೇಮಠ ಹಾಗೂ ಸೂರ್ಯ ನಗರದಲ್ಲಿ ನಿರ್ಮಿಸಿರುವ ಬಹುಮಹಡಿ ವಸತಿ ಕಟ್ಟಡಗಳಲ್ಲಿ ಬಾಕಿಯಿರುವ 943 ಫ್ಲ್ಯಾಟ್‌ಗಳ ಮಾರಾಟಕ್ಕಾಗಿ ಕೆಂಗೇರಿ ಪ್ಲಾಟಿನಂ ವಸತಿ ಸಮುಚ್ಚಯದ ಕ್ಲಬ್‌ಹೌಸ್‌ನಲ್ಲಿ ಸೆ.22ರಿಂದ 24ರವರೆಗೆ ಪ್ರಾಪರ್ಟಿ ಎಕ್ಸ್‌ಪೋ ಹಮ್ಮಿಕೊಂಡಿದೆ.

Advertisement

ದಸರಾ ವಿಶೇಷ ಕೊಡುಗೆಯಾಗಿ ಎಕ್ಸ್‌ಪೋದಲ್ಲಿ ಒಂದು ಲಕ್ಷ ರೂ. ನೀಡಿ ನೋಂದಣಿ ಮಾಡಿಕೊಂಡವರಿಗೆ ಹಂಚಿಕೆ ಪತ್ರದ ಜತೆಗೆ ಶೇ.2ರಷ್ಟು ರಿಯಾಯ್ತಿ ನೀಡಲಿದೆ. ಜತೆಗೆ ಪ್ಲ್ರಾಟ್‌ ಹಂಚಿಕೆಗೆ ಈ ಹಿಂದೆ ಇದ್ದ ಕಟ್ಟುನಿಟ್ಟಿನ ನಿಯಮಾವಳಿ ಸಡಿಲಗೊಳಿಸಿದ್ದು, ಒಬ್ಬರೇ ಎಷ್ಟು ಬೇಕಾದರೂ ಪ್ಲ್ರಾಟ್‌ ಖರೀದಿಸಬಹುದು. ಈಗಾಗಲೇ ಗೃಹ ಮಂಡಳಿಯಿಂದ ಪ್ಲ್ರಾಟ್‌ ಖರೀದಿಸಿದವರೂ ಮತ್ತೂಂದು ಖರೀದಿಸಬಹುದು.

ನಗರದ ಕೆ.ಜಿ.ರಸ್ತೆಯಲ್ಲಿರುವ ಕರ್ನಾಟಕ ಗೃಹ ಮಂಡಳಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಗೃಹ ಮಂಡಳಿ ಅಧ್ಯಕ್ಷ ಮಾಲೀಕಯ್ಯ ಗುತ್ತೇದಾರ್‌, “ಮಂಡಳಿಯು ನಾನಾ ಕಡೆ ನಿರ್ಮಿಸಿರುವ ಸುಸಜ್ಜಿತ ಫ್ಲ್ಯಾಟ್‌ಗಳನ್ನು ಸ್ಥಳದಲ್ಲೇ ಗ್ರಾಹಕರಿಗೆ ಹಂಚಿಕೆ ಮಾಡಲು ಸೆ.22ರಿಂದ ಮೂರು ದಿನ ಪ್ರಾಪರ್ಟಿ ಎಕ್ಸ್‌ಪೋ ಹಮ್ಮಿಕೊಳ್ಳಲಾಗಿದೆ. ಕೆಂಗೇರಿ ಪ್ಲಾಟಿನಂ ಬಹುಮಹಡಿ ಕಟ್ಟಡದಲ್ಲಿನ ಕ್ಲಬ್‌ಹೌಸ್‌ನಲ್ಲಿ ಮೇಳ ನಡೆಯಲಿದ್ದು, ಸದುಪಯೋಗ ಪಡೆದುಕೊಳ್ಳಬಹುದು’ ಎಂದು ಹೇಳಿದರು.

ಶೇ.2ರಷ್ಟು ರಿಯಾಯ್ತಿ: ಕೆಂಗೇರಿ ಉಪನಗರ, ಬಂಡೇಮಠ ಹಾಗೂ ಸೂರ್ಯ ನಗರದಲ್ಲಿ ಮೂಲ ಸೌಕರ್ಯ ಒಳಗೊಂಡ ಸುಸಜ್ಜಿತ ವಸತಿ ಸಮುಚ್ಚಯಗಳನ್ನು ನಿರ್ಮಿಸಿದ್ದು, ಈಗಾಗಲೇ ಕೆಲವು ಫ್ಲ್ಯಾಟ್‌ಗಳು ಹಂಚಿಕೆಯಾಗಿವೆ. ಬಾಕಿ ಉಳಿದಿರುವ 943 ಫ್ಲ್ಯಾಟ್‌ಗಳ ಹಂಚಿಕೆಗಾಗಿ ಪ್ರಾಪರ್ಟಿ ಎಕ್ಸ್‌ಪೋ ಹಮ್ಮಿಕೊಳ್ಳಲಾಗಿದೆ. ದಸರಾ ವಿಶೇಷ ಕೊಡುಗೆಯಾಗಿ ಸ್ಥಳದಲ್ಲೇ ಒಂದು ಲಕ್ಷ ರೂ. ನೀಡಿ ನೋಂದಣಿ ಮಾಡಿಕೊಳ್ಳುವವರಿಗೆ ಶೇ.2ರಷ್ಟು ರಿಯಾಯ್ತಿ ಜತೆಗೆ ಹಂಚಿಕೆ ಪತ್ರ ನೀಡಲಾಗುವುದು ಎಂದು ತಿಳಿಸಿದರು.

ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಕ್ರೆಡಿಟ್‌ ಲಿಂಕ್ಡ್ ಸಬ್ಸಿಡಿ ಸ್ಕೀಮ್‌ನಡಿ ಖರೀದಿಸಲು ನೀಡಲಾಗಿರುವ ಸಾಲ ಸೌಲಭ್ಯವನ್ನು ಪಡೆಯುವುದಕ್ಕಾಗಿ ಫ್ಲ್ಯಾಟ್‌ ಖರೀದಿಸುವ ಗ್ರಾಹಕರು ಬ್ಯಾಂಕ್‌ ಸಾಲ ಪಡೆಯಲು ಗೃಹ ಮಂಡಳಿಯಿಂದ ಮೂರನೇ ವ್ಯಕ್ತಿ ಖಾತರಿಯನ್ನು ನೀಡಲಾಗುವುದು. ಪ್ರಧಾನಮಂತ್ರಿ ಆವಾಸ್‌ ಯೊಜನೆಯಡಿ 3 ಲಕ್ಷ ರೂ.ವರೆಗೆ ವಾರ್ಷಿಕ ಆದಾಯ ಹೊಂದಿರುವವರಿಗೆ ಒಂದು ಬಿಎಚ್‌ಕೆ ಫ್ಲ್ಯಾಟ್‌ಅನ್ನು ಬ್ಯಾಂಕ್‌ ಸಾಲದ ಮುಖಾಂತರ ಖರೀದಿಸಿದರೆ ಕೇಂದ್ರ ಸರ್ಕಾರದಿಂದ 1.50 ಲಕ್ಷ ರೂ. ಸಹಾಯಧನ ಸಿಗಲಿದೆ. ಜತೆಗೆ ಪರಿಶಿಷ್ಟ ಜಾತಿ, ಪಂಗಡದ ಅರ್ಜಿದಾರರಿಗೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರದ ವತಿಯಿಂದ 1.80 ಲಕ್ಷ ರೂ. ವಿಶೇಷ ಸಹಾಯಧನ ಕೂಡ ಸಿಗಲಿದೆ ಎಂದು ಹೇಳಿದರು.

Advertisement

ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ 19 ಲಕ್ಷ ರೂ.ವರೆಗೆ ವಾರ್ಷಿಕ ಆದಾಯ ಹೊಂದಿರುವವರು ಬ್ಯಾಂಕ್‌ ಸಾಲದ ಮೂಲಕ ಫ್ಲ್ಯಾಟ್‌ ಖರೀದಿಸಿದರೆ ಗರಿಷ್ಠ 2.67 ಲಕ್ಷ ರೂ.ವರೆಗೆ ಕ್ರೆಡಿಟ್‌ ಲಿಂಕ್ಡ್ ಸಬ್ಸಿಡಿ ಸ್ಕೀಮ್‌ (ಸಿಎಲ್‌ಎಸ್‌ಎಸ್‌) ಅಡಿ ಬಡ್ಡಿಯಲ್ಲಿ ವಿಶೇಷ ರಿಯಾಯ್ತಿ ಪಡೆಯಲು ಅವಕಾಶವಿರುತ್ತದೆ. ಸಾಲ ಸೌಲಭ್ಯಕ್ಕಾಗಿ ಐದಾರು ಬ್ಯಾಂಕ್‌ಗಳ ಸೇವೆಯನ್ನು ಎಕ್ಸ್‌ಪೋದಲ್ಲಿ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ರೇರಾ ಜಾರಿ ಬಳಿಕ ಬೇಡಿಕೆ ಹೆಚ್ಚಳ: ಕಳೆದ ವರ್ಷ ಗೃಹ ಮಂಡಳಿಯು 300ಕ್ಕೂ ಹೆಚ್ಚು ಫ್ಲ್ಯಾಟ್‌ಗಳನ್ನು ಹಂಚಿಕೆ ಮಾಡಿದೆ. ರೇರಾ ಕಾಯ್ದೆ ಜಾರಿ ಬಳಿಕ ಗೃಹ ಮಂಡಳಿಯ ಫ್ಲ್ಯಾಟ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ದಾಖಲೆ ಗೊಂದಲವಿಲ್ಲದ, ಸುಸಜ್ಜಿತ ಸೌಲಭ್ಯ ಒಳಗೊಂಡ, ತಕ್ಷಣವೇ ವಾಸಕ್ಕೆ ಬಳಸಬಹುದಾದ ಫ್ಲ್ಯಾಟ್‌ಗಳು ಮಾರಾಟಕ್ಕಿವೆ. ಈ ಹಿಂದೆ ಇದ್ದ ಹಲವು ನಿಬಂಧನೆಗಳನ್ನು ಕೈಬಿಡಲಾಗಿದ್ದು, ಯಾರು ಬೇಕಾದರೂ ಫ್ಲ್ಯಾಟ್‌ ಖರೀದಿಸಬಹುದಾಗಿದೆ. ಮೂರು ದಿನದ ಮೇಳದಲ್ಲಿ ಮಂಡಳಿ ನಿರ್ಮಿಸಿರುವ ಫ್ಲ್ಯಾಟ್‌ಗಳ ವೀಕ್ಷಣೆಗಾಗಿ ವಾಹನ ಸೌಲಭ್ಯ ಕೂಡ ಇರಲಿದೆ ಎಂದು ಹೇಳಿದರು. ಆಯುಕ್ತ ಎ.ಬಿ.ಇಬ್ರಾಹಿಂ, ಡಿಜಿಎಂ (ಹಂಚಿಕೆ) ಸುರೇಶ್‌ ಇತರರು ಉಪಸ್ಥಿತರಿದ್ದರು.

ಶೇ.2ರ ರಿಯಾಯ್ತಿ ಪಡೆಯುವುದು ಹೇಗೆ?: ವಿಸ್ತೀರ್ಣಕ್ಕೆ ತಕ್ಕಂತೆ ಮುಂಗಡ ಮೊತ್ತ ನಿಗದಿಪಡಿಸಲಾಗಿದೆ. ಅದರಂತೆ 1 ಬಿಎಚ್‌ಕೆಗೆ 1.50 ಲಕ್ಷ ರೂ., 2ಬಿಎಚ್‌ಕೆಗೆ 2 ಲಕ್ಷ ರೂ, 2.5 ಬಿಎಚ್‌ಕೆಗೆ 2.5 ಲಕ್ಷ ರೂ. ಹಾಗೂ 3 ಬಿಎಚ್‌ಕೆ ಫ್ಲ್ಯಾಟ್‌ಗೆ 3 ಲಕ್ಷ ರೂ. ನಿಗದಿಪಡಿಸಲಾಗಿದೆ. ಪ್ರಾಪರ್ಟಿ ಎಕ್ಸ್‌ಪೋ ನಡೆಯುವ ಮೂರು ದಿನಗಳಲ್ಲಿ ಒಂದು ಲಕ್ಷ ರೂ. ನೀಡಿ ನೋಂದಣಿ ಮಾಡಿಕೊಂಡವರಿಗೆ ಹಂಚಿಕೆ ಪತ್ರ ನೀಡಿ ರಿಯಾಯ್ತಿಗೆ ಪರಿಗಣಿಸಲಾಗುತ್ತದೆ. ಆದರೆ ಬಾಕಿ ಮುಂಗಡ ಠೇವಣಿ ಮೊತ್ತವನ್ನು ಅ.4ರೊಳಗೆ ಪಾವತಿಸಿದರೆ ಶೇ.2ರಷ್ಟು ರಿಯಾಯ್ತಿ ಸಿಗಲಿದೆ.

ಫ್ಲ್ಯಾಟ್‌ ವಿವರ
ಕೆಂಗೇರಿ ಪ್ಲಾಟಿನಂ (ಕೆಂಗೇರಿ ಉಪನಗರ): 
-ಒಟ್ಟು ಫ್ಲ್ಯಾಟ್‌    808
-ಮಾರಾಟವಾಗಿರುವುದು    397
-ಬಾಕಿ    411.
-ಫ್ಲ್ಯಾಟ್‌ ದರ    3,300 ರೂ. (ಪ್ರತಿ ಚ.ಅ.ಗೆ)

ಕೆಂಗೇರಿ ಡೈಮಂಡ್‌ (ಬಂಡೇಮಠ ಬಡಾವಣೆ)
-ಒಟ್ಟು ಫ್ಲ್ಯಾಟ್‌    306
-ಮಾರಾಟವಾಗಿರುವುದು    110
-ಬಾಕಿ    206
-ದರ    2,800 ರೂ. (ಪ್ರತಿ ಚ.ಅ.ಗೆ)

ಸೂರ್ಯ ಎಲಿಗೆನ್ಸ್‌ (ಸೂರ್ಯನಗರ 1ನೇ ಹಂತ)
-ಒಟ್ಟು ಫ್ಲ್ಯಾಟ್‌    384
-ಮಾರಾಟವಾಗಿರುವುದು    58
-ಬಾಕಿ    326
-ದರ    2,950 ರೂ. (ಪ್ರತಿ ಚ.ಅ.ಗೆ)

Advertisement

Udayavani is now on Telegram. Click here to join our channel and stay updated with the latest news.

Next