Advertisement

ಯುವಜನತೆಗೆ ಖಾದಿ ಮಹತ್ವ ತಿಳಿಸಿ

12:09 PM Nov 16, 2018 | |

ಮೈಸೂರು: ಖಾದಿ ವಸ್ತ್ರ ಧರಿಸುವಂತೆ ಯುವ ಜನಾಂಗಕ್ಕೆ ಅರಿವು ಮೂಡಿಸಬೇಕಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

Advertisement

ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಹಾಗೂ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಜೆ.ಕೆ.ಮೈದಾನದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳ ಖಾದಿ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿ ವಿದೇಶಿ ವಸ್ತುಗಳ ವ್ಯಾಮೋಹಕ್ಕೆ ಒಳಗಾಗದೆ ಸ್ವದೇಶಿ ವಸ್ತುಗಳ ಒಳಕೆಗೆ ಉತ್ತೇಜನ ನೀಡುವ ಸಲುವಾಗಿ ಸ್ವತಃ ತಾವೇ ಚರಕದಿಂದ ನೂಲುವ ಮೂಲಕ ಖಾದಿ ಮತ್ತು ಗ್ರಾಮೋದ್ಯೋಗಕ್ಕೆ ಒತ್ತು ನೀಡಿದ್ದರು. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿಗೆ ಭೇಟಿ ನೀಡಿ ಖಾದಿ ಮತ್ತು ಗ್ರಾಮೋದ್ಯೋಗವನ್ನು ಪರಿಚಯಿಸಿ ಹೋಗಿದ್ದಾರೆ.

ಖಾದಿ ಬಟ್ಟೆ ಬಗ್ಗೆ ಇತ್ತೀಚಿನ ಪೀಳಿಗೆಯವರಲ್ಲಿ ಆಸಕ್ತಿ ಕಡಿಮೆಯಾಗಿದೆ. ಗಾಂಧಿ ಟೋಪಿ ಮತ್ತು ಖಾದಿ ಬಟ್ಟೆ ಧರಿಸುವುದು ಗೌರವದ ಸಂಕೇತ. ಖಾದಿ ಮತ್ತು ಗ್ರಾಮೋದ್ಯೋಕ್ಕೆ ಉತ್ತೇಜನ ನೀಡುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಯಾಗುವ ಜೊತೆಗೆ ಶ್ರಮಿಕ ವರ್ಗದವರಿಗೆ ಆರ್ಥಿಕವಾಗಿಯೂ ಬಲ ನೀಡಲಿದೆ. ಹೀಗಾಗಿ ರಾಜ್ಯ-ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಾದಿ ಉತ್ಸವವನ್ನು ಆಯೋಜಿಸುವ ಮೂಲಕ ಖಾದಿ ಮತ್ತು ಗ್ರಾಮೋದ್ಯೋಗಕ್ಕೆ ಉತ್ತೇಜನ ನೀಡಬೇಕು.

ಖಾದಿ ತೊಡುವುದರಿಂದ ಯುವ ಜನಾಂಗಕ್ಕೆ ಸ್ವಾತಂತ್ರ್ಯದ ಅರಿವು ಬರುತ್ತದೆ.ಹೀಗಾಗಿ ಯುವ ಜನಾಂಗಕ್ಕೆ ಖಾದಿ ವಸ್ತ್ರ ಧರಿಸುವಂತೆ ಅರಿವು ಮೂಡಿಸಬೇಕಿದೆ. ಹಳ್ಳಿಗಳಲ್ಲಿ ಗುಡಿ ಕೈಗಾರಿಕೆ ಮಾಡುವ ಅವಕಾಶವಿದ್ದು, ಖಾದಿ ಮಂಡಳಿಯಿಂದ ಸಾಲಸೌಲಭ್ಯ ಪಡೆದು ಆರ್ಥಿಕವಾಗಿ ಮುಂದೆ ಬರುವಂತೆ ಸಲಹೆ ನೀಡಿದರು.

Advertisement

ಶಾಸಕ ಎಲ್‌.ನಾಗೇಂದ್ರ ಅಧ್ಯಕ್ಷತೆವಹಿಸಿದ್ದರು. ಜಿಪಂ ಅಧ್ಯಕ್ಷೆ ನಯಿಮಾಸುಲ್ತಾನ, ಮೈಸೂರು ಮಹಾ ನಗರಪಾಲಿಕೆ ಸದಸ್ಯ ಎಂ.ಡಿ.ನಾಗರಾಜು, ಲೀಡ್‌ಬ್ಯಾಂಕ್‌ ಮುಖ್ಯ ವ್ಯವಸ್ಥಾಪಕ ವೆಂಕಟಾಚಲಪತಿ, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಮಹಾಂತೇಶ್‌ ಕರೂರು ಹಾಜರಿದ್ದರು.

ಖಾದಿ ಮತ್ತು ಗ್ರಾಮೋದ್ಯೋಗ ವಸ್ತುಗಳಿಗೆ ಮಾರಾಟ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ ಮೈಸೂರಿನ ಜೆ.ಕೆ.ಮೈದಾನದಲ್ಲಿ ನ.29ರವರೆಗೆ ಆಯೋಜಿಸಿರುವ ಖಾದಿ ಉತ್ಸವದಲ್ಲಿ ಮೈಸೂರು, ಧಾರವಾಡ, ಬಳ್ಳಾರಿ, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ ಸೇರಿದಂತೆ ರಾಜ್ಯದ 22 ಖಾದಿ ಮಳಿಗೆಗಳು, 22 ಗ್ರಾಮೋದ್ಯೋಗ ಮಳಿಗೆಗಳು.

ಜಮ್ಮು-ಕಾಶ್ಮೀರ, ಪಶ್ಚಿಮಬಂಗಾಳ, ಮಹಾರಾಷ್ಟ್ರ, ಹರ್ಯಾಣ ರಾಜ್ಯಗಳ 14 ಖಾದಿ ಮಳಿಗೆಗಳು, 18 ಗ್ರಾಮೋದ್ಯೋಗ ಮಳಿಗೆಗಳು ಸೇರಿದಂತೆ 75ಮಳಿಗೆಗಳನ್ನು ತೆರೆಯಲಾಗಿದೆ. ಅರಳೆ ಖಾದಿ, ರಾಷ್ಟ್ರಧ್ವಜ, ಸಿದ್ಧ ಉಡುಪು, ಬಳ್ಳಾರಿ ಜೀನ್ಸ್‌, ಮಹಿಳೆಯರ ಕಾಟನ್‌ ಕುರ್ತಾ, ಅಪ್ಪಟ ರೇಷ್ಮೆ ಸೀರೆಗಳು, ರೇಷ್ಮೆ ಚೂಡಿದಾರ್‌, ವೇಸ್ಟ್‌ಕೋಟ್‌ಗಳು, ಜಮ್ಮು-ಕಾಶ್ಮೀರದ ಶಾಲು ಹಾಗೂ ಮಹಿಳೆಯರ ಉಡುಪುಗಳು, ಶರ್ಟಿಂಗ್ಸ್‌, ಲುಂಗಿಗಳು, ಒಣ ಹಣ್ಣುಗಳು, ಜೇನುತುಪ್ಪ, ಆಯುರ್ವೇದ ಔಷಧಿಗಳು ಉತ್ಸವದಲ್ಲಿ ದೊರೆಯುತ್ತವೆ.

ಜೆಡಿಎಸ್‌ಗೆ ಮೇಯರ್‌ ಸ್ಥಾನ – ಜಿಟಿಡಿ ವಿಶ್ವಾಸ: ಮೈಸೂರು ಮಹಾ ನಗರಪಾಲಿಕೆ ಮೇಯರ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಜೆಡಿಎಸ್‌ ಬೆಂಬಲಿಸುವ ನಂಬಿಕೆ ಇದೆ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 17ರಂದು ನಡೆಯಲಿರುವ ಮೇಯರ್‌ ಚುನಾವಣೆ ಸಂಬಂಧ ಪಾಲಿಕೆ ಸದಸ್ಯರ ಸಭೆ ಕರೆದು ಚರ್ಚಿಸಿ, ಎಲ್ಲರ ಅಭಿಪ್ರಾಯಪಡೆದು ಮೇಯರ್‌ ಸ್ಥಾನಕ್ಕೆ ಅಭ್ಯರ್ಥಿಯನ್ನು ತೀರ್ಮಾನ ಮಾಡುತ್ತೇವೆ. ಹಿಂದಿನ ಐದು ವರ್ಷ ಬಿಜೆಪಿಯವರು ಜೆಡಿಎಸ್‌ಗೆ ಬೆಂಬಲ ನೀಡಿದ್ದಾರೆ.

ನಾವೂ ಕೂಡ ಬಿಬಿಎಂಪಿ, ಬಾಗಲಕೋಟೆಯಲ್ಲಿ ಐದು ವರ್ಷಗಳ ಕಾಲ ಕಾಂಗ್ರೆಸ್‌ಗೆ ಸಂಪೂರ್ಣ ಬೆಂಬಲ ಕೊಟ್ಟಿದ್ದೇವೆ. ಮೈಸೂರು ಮಹಾ ನಗರಪಾಲಿಕೆ ಮೇಯರ್‌ ಸ್ಥಾನವನ್ನು ಜೆಡಿಎಸ್‌ಗೆ ನೀಡುವಂತೆ ಕಾಂಗ್ರೆಸ್ಸಿಗರಿಗೆ ಮನವಿ ಮಾಡುತ್ತೇವೆ. ಕಾಂಗ್ರೆಸ್‌ನವರು ಬೆಂಬಲ ನೀಡುವ ನಂಬಿಕೆ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next