ಒಂದು ಆಡಿಷನ್ ಎಂದರೆ ಹೇಗಿರುತ್ತೆ ಹೇಳಿ? ಸಿನಿಮಾದಲ್ಲಿ ಆಸಕ್ತಿ ಇರುವ ಒಂದಷ್ಟು ಮಂದಿ ಬಂದಿರುತ್ತಾರೆ. ಅದರ ಸಂಖ್ಯೆ 50 ರಿಂದ 100 ಎಂದುಕೊಳ್ಳಬಹುದು. ಆದರೆ, ಶುಕ್ರವಾರ ನಡೆದ ಸಿನಿಮಾವೊಂದರ ಆಡಿಷನ್ ಯಾವುದೋ ಊರಿನ ಜಾತ್ರೆಯನ್ನು ನೆನಪಿಸುತ್ತಿತ್ತು.
ಸಾವಿರಾರು ಸಂಖ್ಯೆಯಲ್ಲಿ ಸಿನಿಮಾಸಕ್ತರು ಸರತಿ ಸಾಲಿನಲ್ಲಿ ನಿಂತು ಪ್ರತಿಭಾ ಪ್ರದರ್ಶನಕ್ಕೆ ಕಾಯುತ್ತಿದ್ದರು. ಇಷ್ಟೊಂದು ಸಂಖ್ಯೆಯಲ್ಲಿ ಯಾವ ಸಿನಿಮಾದ ಆಡಿಷನ್‌ಗೆ ಜನ ಬಂದಿದ್ದಾರೆಂಬ ನಿಮ್ಮ ಪ್ರಶ್ನೆಗೆ ಉತ್ತರ “ಕೆಜಿಎಫ್ ಚಾಪ್ಟರ್-2′.
ಯಶ್ ನಾಯಕರಾಗಿರುವ “ಕೆಜಿಎಫ್’ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದು, ಈಗ ಚಾಪ್ಟರ್ 2ನಲ್ಲಿ ಬಿಝಿಯಾಗಿದೆ. ಅದರ ಹಂತವಾಗಿ ಚಿತ್ರತಂಡ ಶುಕ್ರವಾರ ಆಡಿಷನ್ ಆಯೋಜಿಸಿತ್ತು. ಚಿತ್ರದ ಕೆಲವು ಪಾತ್ರಗಳಿಗಾಗಿ 8 ರಿಂದ 16 ವರ್ಷದೊಳಗಿನವರಿಗೆ ಹಾಗೂ 25 ವರ್ಷ ಮೇಲ್ಪಟ್ಟವರಿಗೆ ಆಡಿಷನ್‌ನಲ್ಲಿ ಅವಕಾಶ ನೀಡಿದ್ದು, ತಾವೇ ಮಾಡಿಕೊಂಡ ಒಂದು ನಿಮಿಷದ ಡೈಲಾಗ್ ಹೇಳುವ ಮೂಲಕ ಆಡಿಷನ್ ಹಮ್ಮಿಕೊಂಡಿತ್ತು.
ಈ ಆಡಿಷನ್‌ಗೆ ಬೇರೆ ಬೇರೆ ಊರುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಿನಿಪ್ರೇಮಿಗಳು ಆಗಮಿಸಿದ ಕಾರಣ, ಮಲ್ಲೇಶ್ವರಂ 8ನೇ ಕ್ರಾಸ್ ಜನಜಾತ್ರೆಗೆ ಸಾಕ್ಷಿಯಾಯಿತು. ಅಲ್ಲಿನ ಆಡಿಟೋರಿಯಂವೊಂದರಲ್ಲಿ ಆಡಿಷನ್ ಆಯೋಜಿಸಿದ್ದು, ಸರತಿ ಸಾಲು ಮಾತ್ರ ದೊಡ್ಡದಾಗಿತ್ತು.
ಪ್ರತಿಯೊಬ್ಬರ ಕಣ್ಣಲ್ಲೂ ಒಂದು ಛಾನ್ಸ್ ಸಿಕ್ಕರೆ ತಾನೂ ಮಿಂಚಬಹುದೆಂಬ ಹೊಳಪು ಕಾಣುತ್ತಿತ್ತು.
ಅಂದಹಾಗೆ, “ಕೆಜಿಎಫ್’ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದು, ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿದೆ. ಯಶ್, ಶ್ರೀನಿಧಿ ಶೆಟ್ಟಿ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.