Advertisement

ಕೆಜಿಎಫ್ 2..:  ರಾಕಿಭಾಯ್‌ ಸಾಮ್ರಾಜ್ಯದ ರಕ್ತ ಚರಿತೆಯಿದು

09:37 AM Apr 15, 2022 | Team Udayavani |

ತಾಯಿಗೆ ಕೊಟ್ಟ ಭಾಷೆಯನ್ನು ಉಳಿಸುವ ಹಠಕ್ಕೆ ಬಿದ್ದ ಆತ, ಒಂದು ಸಾಮ್ರಾಜ್ಯವನ್ನೇ ಕಟ್ಟಲು ನಿರ್ಧರಿಸುತ್ತಾನೆ. ಆ ಸಾಮ್ರಾಜ್ಯಕ್ಕೆ ಅಡಿಪಾಯವಾಗಿ ಅದೆಷ್ಟೋ ಹೆಣಗಳು ಉರುಳುತ್ತವೆ. ಹಾಗಂತ ಆತನ ಹಾದಿ ಸುಗಮವಾಗಿರುವುದಿಲ್ಲ. ದುರ್ಗಮ ಹಾದಿಯಲ್ಲಿ ಆತ ಜಯಿಸುತ್ತಾನಾ ಅಥವಾ ಮಂಡಿಯೂರುತ್ತಾನಾ… ಈ ಕುತೂಹಲವನ್ನಿಟ್ಟುಕೊಂಡು ನೀವು “ಕೆಜಿಎಫ್-2′ ನೋಡಲು ಹೋದರೆ ಅಲ್ಲಿ ನಿಮಗೊಂದು ಹೊಸ ಲೋಕವೇ ತೆರೆದುಕೊಳ್ಳುತ್ತದೆ. ಆ ಲೋಕದೊಳಗೆ ನಿಮಗೆ ಭಿನ್ನ-ವಿಭಿನ್ನ ಪಾತ್ರಗಳು, ಸನ್ನಿವೇಶಗಳು ಎದುರಾಗುತ್ತವೆ.

Advertisement

ನೀವು “ಕೆಜಿಎಫ್’ ಮೊದಲ ಭಾಗ ನೋಡಿದ್ದರೆ ನಿಮಗೆ “ಕೆಜಿಎಫ್-2′ ಲಿಂಕ್‌ ಬೇಗನೇ ಸಿಗುತ್ತದೆ. ಮೊದಲ ಭಾಗದಲ್ಲಿ ಮುಂಬೈನಿಂದ ಬಂದಿದ್ದ ರಾಕಿ, ಗರುಡನನ್ನು ಸಾಯಿಸಿ ಬಿಡುತ್ತಾನೆ. ಹಾಗಾದರೆ, ಮುಂದೆ ನರಾಚಿ ಸಾಮಾಜ್ರéವನ್ನು ಆಳುವವರು ಯಾರು ಎಂಬ ಕುತೂಹಲದೊಂದಿಗೆ ಸಿನಿಮಾ ನಿಂತಿತ್ತು. ಈಗ ಮುಂದುವರೆದ ಭಾಗ ಅಲ್ಲಿಂದಲೇ ಶುರುವಾಗಿದೆ.

ಮುಖ್ಯವಾಗಿ ಇಲ್ಲಿ ರಾಕಿಭಾಯ್‌ ಖದರ್‌, ಬುದ್ಧಿವಂತಿಕೆ ಹಾಗೂ ಜಿದ್ದನ್ನು ಇಟ್ಟುಕೊಂಡು ಇಡೀ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಯಶ್‌ ಅಭಿಮಾನಿಗಳಿಗೆ ಈ ಸಿನಿಮಾ ಹಬ್ಬ. ಆರಂಭದಿಂದ ಕೊನೆಯವರೆಗೂ ಯಶ್‌ ಸಖತ್‌ ಸ್ಟೈಲಿಶ್‌ ಆಗಿಯೇ ಕಾಣಿಸಿಕೊಂಡಿದ್ದಾರೆ.

ನಿರ್ದೇಶಕ ಪ್ರಶಾಂತ್‌ ನೀಲ್‌ ಇಲ್ಲಿ ಕಥೆಗಿಂತ ಹೆಚ್ಚಾಗಿ ಸನ್ನಿವೇಶಗ ಳನ್ನಿಟ್ಟುಕೊಂಡು ಆ ಮೂಲಕ “ಕೆಜಿಎಫ್-2′ ಮುಂದುವರೆಸಿಕೊಂಡು ಹೋಗಿದ್ದಾರೆ. ಮೊದಲ ಭಾಗದಲ್ಲಿ ತಾಯಿ ಸೆಂಟಿಮೆಂಟ್‌ ಹೈಲೈಟ್‌ ಆಗಿತ್ತು. ಆದರೆ, “ಕೆಜಿಎಫ್-2’ನಲ್ಲಿ

ಆ್ಯಕ್ಷನ್‌ ಪ್ರಮುಖ ಆಕರ್ಷಣೆ. ಚಿತ್ರದುದ್ದಕ್ಕೂ ಸಾಗಿಬರುವ ಅದ್ಭುತವಾದ ಫೈಟ್ಸ್‌, ಅದರ ಹಿನ್ನೆಲೆ ಸಂಗೀತ, ಲೈಟಿಂಗ್‌, ಲೊಕೇಶನ್‌, ದೊಡ್ಡದಾದ ಬ್ಯಾಕ್‌ಡ್ರಾಪ್‌… ಹೀಗೆ ಒಂದೊಂದು ಫೈಟ್‌ ಅನ್ನು ಮೈ ಜುಮ್ಮೆನ್ನಿಸುವಂತೆ ಕಟ್ಟಿಕೊಡಲಾಗಿದೆ. ಮಾಸ್‌ ಪ್ರಿಯರ ಖುಷಿಯನ್ನು ಆ್ಯಕ್ಷನ್‌ ಎಪಿಸೋಡ್‌ಗಳು ಹೆಚ್ಚಿಸುವುದ ರಲ್ಲಿ ಎರಡು ಮಾತಿಲ್ಲ. ಇಷ್ಟೊಂದು ಆ್ಯಕ್ಷನ್‌ ಬೇಕಿತ್ತಾ ಎಂದು ನೀವು ಕೇಳಬಹುದು. ಈ ಆ್ಯಕ್ಷನ್‌ಗಳಿಗೆ ಪೂರಕವಾಗಿ ಚಿತ್ರದಲ್ಲೊಂದು ಸಂಭಾಷಣೆ ಇದೆ; “ರಕ್ತದಿಂದ ಬರೆದ ಕಥೆಯಿದು.. ಶಾಹಿಯಿಂದ ಮುಂದುವರೆಸೋಕೆ ಸಾಧ್ಯವಿಲ್ಲ… ರಕ್ತದಿಂದಲೇ ಮುಂದುವರೆಸಬೇಕು…’ ಈ ಸಂಭಾಷಣೆಗೆ ಪ್ರಶಾಂತ್‌ ನೀಲ್‌ ಎಷ್ಟು ನ್ಯಾಯ ಸಲ್ಲಿಸಲು ಸಾಧ್ಯವೋ ಅಷ್ಟು ಸಲ್ಲಿಸಿದ್ದಾರೆ. ಇಲ್ಲಿ ಹೊಡೆದಾಟ, ಬಡಿದಾಟ, ರಕ್ತಪಾತ… ಎಲ್ಲವೂ ಆಗುತ್ತದೆ. ಅದರಲ್ಲೂ ಅದೆಷ್ಟು ಬುಲೆಟ್‌ಗಳು ಯಾರ್ಯಾರ ಎದೆಯೊಳಗೆ ಎಷ್ಟು ನುಗ್ಗುತ್ತವೆಯೋ ಲೆಕ್ಕವಿಲ್ಲ. ಆ ಮಟ್ಟಿಗೆ ಚಿತ್ರದಲ್ಲಿ ಗನ್‌ ಫೈಟ್ಸ್‌ ಇದೆ.

Advertisement

ಮುಖ್ಯವಾಗಿ ಈ ಚಿತ್ರದಲ್ಲಿ ಪ್ರಶಾಂತ್‌ ನಾಯಕನನ್ನು ವಿಜೃಂಭಿಸಲು ಏನೇನೂ ಬೇಕೋ, ಅವೆಲ್ಲವನ್ನು ಮಾಡಿದ್ದಾರೆ. ಅವೆಲ್ಲವೂ ಪ್ರೇಕ್ಷಕರಿಗೆ ಮಜಾ ಕೊಡುವಲ್ಲಿ ಮೋಸ ಮಾಡಿಲ್ಲ. ಈ ಬಾರಿ ಚಿತ್ರಕ್ಕೆ ಹೊಸ ಪಾತ್ರಗಳು ಸೇರಿಕೊಂಡಿವೆ ಅಧೀರ, ರಮೀಕಾ ಸೇನ್‌, ಸಿಬಿಐ ಆಫೀಸರ್‌… ಹೀಗೆ ಹೊಸ ಹೊಸ ಪಾತ್ರಗಳು ಸೇರಿಕೊಂಡಿವೆ.

ಇದನ್ನೂ ಓದಿ:ನಿಧಾನಗತಿಯ ಓವರ್‌: ರೋಹಿತ್‌ಗೆ 24 ಲಕ್ಷ ರೂ. ದಂಡ

ಚಿತ್ರದ ಹೈಲೈಟ್‌ಗಳಲ್ಲಿ ಡೈಲಾಗ್ಸ್‌ ಕೂಡಾ ಒಂದು. ಅದರಲ್ಲೂ ಮೊದಲರ್ಧದಲ್ಲಿ ಬರುವ ಸಂಭಾಷಣೆ ಪ್ರೇಕ್ಷಕರಿಗೆ ಕಿಕ್ಕೇರಿಸುವಲ್ಲಿ ಹಿಂದೆ ಬಿದ್ದಿಲ್ಲ. ಅದರ ಜೊತೆಗೆ ಮೊದಲರ್ಧ ತುಂಬಾ ವೇಗವಾಗಿ ಸಾಗುತ್ತದೆ. ರಾಕಿಬಾಯ್‌ ಎಂಟ್ರಿ, ಆತನ ಬಿಝಿನೆಸ್‌ ಡೀಲಿಂಗ್ಸ್‌, ಚೇಸಿಂಗ್‌.. ಮೂಲಕ ಮಜಾ ಕೊಡುತ್ತದೆ. ಆದರೆ, ದ್ವಿತೀಯಾರ್ಧ ಸ್ವಲ್ಪ ನಿಧಾನವಾಯಿತೇನೋ ಎಂಬ ಭಾವನೆ ಬರುವಷ್ಟರಲ್ಲಿ ಅಧೀರ, ರಮೀಕಾ, ರಾಕಿಭಾಯ್‌ ಸೇರಿ ಮತ್ತೆ ಚಿತ್ರಕ್ಕೆ ವೇಗ ನೀಡುತ್ತಾರೆ. ಒಂದು ಕಮರ್ಷಿಯಲ್‌ ಸಿನಿಮಾದಲ್ಲಿ ಲಾಜಿಕ್‌ ಹುಡುಕಬಾರದು ಎಂಬ ಮಾತಿದೆ. ಅದನ್ನು ಗಮನದಲ್ಲಿಟ್ಟುಕೊಂಡು ನೀವು “ಕೆಜಿಎಫ್-2′ ನೋಡಿದರೆ ಸಿನಿಮಾದ ಈ ಮ್ಯಾಜಿಕ್‌ ನಿಮ್ಮನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲ. ಮೊದಲೇ ಹೇಳಿದಂತೆ ಇಡೀ ಸಿನಿಮಾದ ಹೈಲೈಟ್‌ ಯಶ್‌. ರಾಕಿಭಾಯ್‌ ಆಗಿ ಇಡೀ ಸಿನಿಮಾವನ್ನು ಅವರು ಆವರಿಸಿಕೊಂಡಿದ್ದಾರೆ.

ರಕ್ತಪಾತದ ಜೊತೆಗೆ ತನ್ನ ನಂಬಿದ ಜನರಿಗೆ ಏನು ಬೇಕೋ ಅದನ್ನು ಮಾಡುವ ಪಾತ್ರದಲ್ಲಿ ಅವರು ಇಷ್ಟವಾಗುತ್ತಾರೆ. ನಾಯಕಿ ಶ್ರೀನಿಧಿಗೆ ಈ ಬಾರಿ ಸ್ವಲ್ಪ ದೊಡ್ಡ ಪಾತ್ರ ಸಿಕ್ಕಿದೆ. ಉಳಿದಂತೆ ಸಂಜಯ್‌ ದತ್‌ ಅಧೀರನಾಗಿ ಅಬ್ಬರಿಸಿದರೆ, ರಮೀಕಾ ಖಡಕ್‌ ಪಿ.ಎಂ, ಉಳಿದಂತೆ ಚಿತ್ರದಲ್ಲಿ ತುಂಬಾ ಪಾತ್ರಗಳಿದ್ದರೂ ಆಗಾಗ ಬರುವ ಒಂದೊಂದು ಡೈಲಾಗ್‌ಗಳಿಗಷ್ಟೇ ಸೀಮಿತ.

ಇನ್ನು, ಛಾಯಾಗ್ರಾಹಕ ಭುವನ್‌ ಕೆಲಸ ಇಡೀ ಸಿನಿಮಾದಲ್ಲಿ ಎದ್ದು ಕಾಣುತ್ತದೆ. ರವಿ ಬಸ್ರೂರು ಸಂಗೀತ, ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕ.

 ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next