Advertisement
ಕೇರಳ ಮೂಲದ ಹಾಸ್ಟೆಲ್ ವಿದ್ಯಾರ್ಥಿಗಳ ಹೆಸರನ್ನು ಇಲ್ಲಿನ ಮತದಾರರ ಪಟ್ಟಿಯಲ್ಲಿ ದಾಖಲೆ ರಹಿತವಾಗಿ ಸೇರಿಸಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದರೆ, ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ನಮ್ಮ ಕೈವಾಡ ಇಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.
Related Articles
ಕೆಲವರು ಆರೋಪಿಸುತ್ತಿದ್ದಾರೆ. ನಾವು ಆ ರೀತಿ ಸ್ವೀಕರಿಸುವುದಿಲ್ಲ. ಈಗ ಆ ಕಟ್ಟಿನಲ್ಲಿ ಸುಮಾರು 300ರಷ್ಟು ಅರ್ಜಿಗಳಿದ್ದು, ಕಾನೂನು ರೀತಿಯಲ್ಲಿ ಸಲ್ಲಿಕೆಯಾ ಗದ್ದರಿಂದ ತಿರಸ್ಕರಿಸಿದ್ದೇವೆ ಎಂದು ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತೆ ಗಾಯತ್ರಿ ನಾಯಕ್ ‘ಉದಯವಾಣಿ ಸುದಿನ’ಕ್ಕೆ ತಿಳಿಸಿದ್ದಾರೆ.
Advertisement
ಬೇಕಾಬಿಟ್ಟಿ ಸೇರ್ಪಡೆ ಆರೋಪಹದಿನೈದು ದಿನಗಳಿಂದ ಈ ರೀತಿ ಬೇಕಾಬಿಟ್ಟಿಯಾಗಿ ಮತದಾರರ ಪಟ್ಟಿಗೆ ಸುಮಾರು 7 ಸಾವಿರದಷ್ಟು ಕೇರಳ ವಿದ್ಯಾರ್ಥಿಗಳ ಹೆಸರುಗಳನ್ನು ಸೇರಿಸಲಾಗಿದೆ. ಆದರೆ ಹೀಗೆ ಸೇರಿಸುವಾಗ ಕೇರಳ ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕಿದ ಬಗ್ಗೆ ದಾಖಲೆಯನ್ನು ಪಡೆಯುತ್ತಿಲ್ಲ. ಇದು ರಾಜಕೀಯ ಪ್ರೇರಿತವಾಗಿ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸುತ್ತಿರುವುದಕ್ಕೆ ಸಾಕ್ಷಿ ಎಂಬುದು ಬಿಜೆಪಿ ಆರೋಪ. ಹಲವು ದಿನಗಳಿಂದ ನಿಗಾ
ಹಲವು ದಿನಗಳಿಂದ ಇಲ್ಲಿನ ಚುನಾವಣಾ ಶಾಖೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ನಿಗಾ ಇರಿಸಲಾಗಿತ್ತು. ಪ್ರತಿದಿನ ಎಂಬಂತೆ ಹಾಸ್ಟೆಲ್ ವಿದ್ಯಾರ್ಥಿಗಳ ಅರ್ಜಿಗಳ ಕಟ್ಟುಗಳನ್ನು ಇಲ್ಲಿಗೆ ತಂದು ಕೊಡುತ್ತಿದ್ದರು. ನಿಯಮದಪ್ರಕಾರ, ಅಷ್ಟೊಂದು ಅರ್ಜಿಗಳನ್ನು ಏಕಕಾಲಕ್ಕೆ ಸ್ವೀಕರಿಸುವಂತಿಲ್ಲ. ಆದರೆ ನಿಯಮ ಗಳನ್ನು ಗಾಳಿಗೆ ತೂರಿ ಸಹಾಯಕ ಚುನಾವಣಾಧಿಕಾರಿಗಳು ಅರ್ಜಿಯನ್ನು ಸ್ವೀಕರಿಸಿದ್ದಾರೆ ಸೋಮವಾರವೂ ಒಂದು ಚೀಲದಲ್ಲಿ ಅರ್ಜಿಗಳ ಕಟ್ಟನ್ನು ತಂದುಕೊಟ್ಟಿದ್ದು, ಒಂದೇ ದಿನ 500 ರಷ್ಟು ಅರ್ಜಿಗಳು ಸಲ್ಲಿಕೆಯಾಗಿದೆ ಎಂದು ಬಿಜೆಪಿ ಆರೋಪಿಸಿದೆ. ದೃಢೀಕರಣ ಪತ್ರ ಅಗತ್ಯ
ಇನ್ನೊಂದು ರಾಜ್ಯದ ವ್ಯಕ್ತಿಯ ಅರ್ಜಿ ಸ್ವೀಕರಿಸುವಾಗ ಅಲ್ಲಿಯ ಮತದಾರರ ಪಟ್ಟಿಯಲ್ಲಿ ತನ್ನ ಹೆಸರಿಲ್ಲ ಎಂಬ ದೃಢೀಕರಣ ಪತ್ರ ಪಡೆಯಬೇಕು. ಅದ್ಯಾವುದನ್ನೂ ಇಲ್ಲಿ ಪಾಲಿಸುತ್ತಿಲ್ಲ ಎನ್ನುತ್ತಾರೆ ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ. ವೇದವ್ಯಾಸ ಕಾಮತ್. ಆಗ್ರಹಗಳು
ಮತದಾರರ ಪಟ್ಟಿಗೆ ಹೆಸರು ಸೇರಿಸಲು ನೂರಾರು ಅರ್ಜಿಗಳನ್ನು ಒಬ್ಬರೇ ನೀಡುವಂತಿಲ್ಲ. ಪಕ್ಷದ ಏಜೆಂಟ್ ಆಗಲಿ ಅಥವಾ ನಿಯೋಜಿತ ಶಿಕ್ಷಕರಾಗಲಿ ಸೀಮಿತ ಸಂಖ್ಯೆಯ ಅರ್ಜಿಗಳನ್ನು ಮಾತ್ರ ನೀಡಬೇಕು. ಹಾಸ್ಟೆಲ್‌ನ ವಾರ್ಡನ್
ತಮ್ಮ ಸಂಸ್ಥೆಯ ಸೀಲ್ ಹಾಕಿದ ಮಾತ್ರಕ್ಕೇ ಅಂಥ ಅರ್ಜಿಗಳನ್ನು ಸ್ವೀಕರಿಸುವುದು ಕಾನೂನಿಗೆ ವಿರುದ್ಧ. ಈಗಾಗಲೇ 5,400 ರಷ್ಟು ಮಂದಿಯ ಅರ್ಜಿಗಳನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ. ಸುಮಾರು 3 ಸಾವಿರ ಹೆಸರನ್ನು ಕೈಬಿಡಲಾಗಿದೆ. ಇದು ಕಾಂಗ್ರೆಸ್‌ನ ತಂತ್ರಗಾರಿಕೆಯಾಗಿದ್ದು, ಹಿಂದಿನ ಚುನಾವಣೆಯಲ್ಲೂ ಇದೇ ತಂತ್ರವನ್ನು ಬಳಸಿ ಗೆದ್ದಿತ್ತು. ಇಲ್ಲಿಯ ಶಾಸಕರು ಹೇಳಿದಂತೆ ಕೇಳುತ್ತಿರುವ ಅಧಿಕಾರಿಗಳನ್ನು ತತ್‌ಕ್ಷಣ ವರ್ಗಾವಣೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಜಿಲ್ಲಾಧಿಕಾರಿಗೆ ದೂರು: ಮೋನಪ್ಪ ಭಂಡಾರಿ
ಅಕ್ರಮವಾಗಿ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿರುವ ಬಗ್ಗೆ ಚುನಾವಣಾ ಆಯೋಗ ಮತ್ತು ಜಿಲ್ಲಾಧಿಕಾರಿಯವರಿಗೆ ದೂರು ನೀಡಲಾಗುವುದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ
ಭಂಡಾರಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ಪ್ರಕಾರ ಹೆಸರು ಸೇರಿಸುವ ವ್ಯಕ್ತಿ ಸ್ವತಃ ತೆರಳಿ ನೋಂದಾಯಿಸಬೇಕು. ಬೇರೆ ಕಡೆ ಪಟ್ಟಿಯಲ್ಲಿ ಇದ್ದಿದ್ದರೆ ಅಲ್ಲಿಂದ ಹೆಸರನ್ನು ತೆಗೆದು ಹಾಕಿದ್ದಕ್ಕೆ ಚೀಟಿ ನೀಡಬೇಕು. ಆದರೆ ಕೇರಳದಿಂದ ಮಂಗಳೂರಿಗೆ ಬಂದು ಕಲಿಯುತ್ತಿರುವ ಹಾಸ್ಟೆಲ್ ವಿದ್ಯಾರ್ಥಿ ಗಳನ್ನು ಯಾವುದೇ ದಾಖಲೆ ಇಲ್ಲದೆ ಕೇವಲ ಹಾಸ್ಟೆಲ್ ವಾರ್ಡನ್ ಒಪ್ಪಿಗೆ ಪತ್ರ ಪಡೆದು ಪಟ್ಟಿಗೆ ಸೇರಿಸಲಾಗುತ್ತಿದೆ. ಅನಧಿಕೃತ ಏಜೆಂಟುಗಳು ದೊಡ್ಡ ಕಟ್ಟಿನಲ್ಲಿ ಅರ್ಜಿಗಳನ್ನು ಕಚೇರಿಗೆ ತಂದು ನೀಡುತ್ತಿದ್ದಾರೆ. ಸೋಮವಾರ 600ರಿಂದ 700 ಅನಧಿಕೃತ ನೋಂದಣಿಯಾಗಿದೆ. 2017 ಜನವರಿಯಿಂದ ನ. 30ರವರೆಗೆ ನೋಂದಣಿಯಾಗಿರುವ ಸುಮಾರು 10 ಸಾವಿರ ಹೆಸರುಗಳಲ್ಲಿ ಹೆಚ್ಚಿನವು ಅನಧಿಕೃತ ಎಂಬ ಸಂಶಯವಿದೆ. ಶಾಸಕ ಜೆ.ಆರ್. ಲೋಬೋ ಅವರ ಕುತಂತ್ರದಿಂದಲೇ ಇಂಥ ಕಾರ್ಯ ನಡೆಯುತ್ತಿದೆ ಎಂದು ಆರೋಪಿಸಿದರು. ಶಾಸಕ ಜೆ.ಆರ್.ಲೋಬೋ ಸರಕಾರಿ ಅಧಿಕಾರಿಯಾಗಿ ಕೆಲಸ ಮಾಡಿದ್ದರಿಂದ ಪಟ್ಟಿಯಲ್ಲಿ ಸೇರಿಸುವ ಎಲ್ಲ ವಿಧಾನಗಳು ಅವರಿಗೆ ಗೊತ್ತು. ಹೀಗಾಗಿ ಚುನಾವಣಾ ಅಧಿಕಾರಿಗಳನ್ನು ಕೈಗೊಂಬೆ ಮಾಡಿಕೊಂಡು ಅನಧಿಕೃತ ಕೆಲಸ ಮಾಡುತ್ತಿದ್ದಾರೆ. ಖಾಲಿ ಫ್ಲ್ಯಾಟ್‌ಗಳ ಡೋರ್ ನಂಬರ್ ಬಳಸಿ ವ್ಯಕ್ತಿಯ ವಾಸಸ್ಥಳ ಬಗ್ಗೆ ದಾಖಲೆ ಸೃಷ್ಟಿಸಲಾಗುತ್ತಿದೆ. ಈ ಹಿಂದೆ ಶಾಸಕರು ಇದೇ ರೀತಿ ಮೋಸ ಮಾಡಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಈಗಾಗಲೇ ಸಲ್ಲಿಕೆಯಾದ ದಾಖಲೆಗಳನ್ನು ಪುನಃ ಪರಿಶೀಲಿಸಬೇಕು. ಅಧಿಕಾರಿಗಳನ್ನು ಕೂಡಲೇ ಬದಲಾಯಿಸಬೇಕು ಎಂದು ಅವರು ಜಿಲ್ಲಾಧಿಕಾರಿಯವರನ್ನು ಒತ್ತಾಯಿಸಿದರು. ಬಿಜೆಪಿಯ ಕೀಳುಮಟ್ಟದ ರಾಜಕೀಯ
ಬಿಜೆಪಿಯವರಿಗೆ ಆರೋಪಿಸಲು ಏನೂ ಸಿಗದಿದ್ದಾಗ ಇಂಥ ವಿಷಯದಲ್ಲಿ ನನ್ನ ಹೆಸರನ್ನು ಎಳೆದು ತಂದು, ಕೀಳುಮಟ್ಟದ ರಾಜಕೀಯ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿರುವ ಶಾಸಕ ಜೆ.ಅರ್. ಲೋಬೋ, ಒಬ್ಬ ವ್ಯಕ್ತಿ ಒಂದು ಕಡೆ ವಾಸ್ತವ್ಯ ಇದ್ದರೆ, ಮತದಾರರ ಪಟ್ಟಿಗೆ ಹೆಸರು ಸೇರ್ಪ ಡೆಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದ್ದಾರೆ.ಅರ್ಜಿ ಸಲ್ಲಿಸಿದ ಮಾತ್ರಕ್ಕೆ ಅವರ ಹೆಸರು ಸೇರಿದಂತಲ್ಲ. ಚುನಾವಣಾ ಆಯೋಗ ಅದನ್ನು ಪರಿಶೀಲನೆ ಮಾಡುತ್ತದೆ. ಅದು ಕಾಂಗ್ರೆಸ್ ಪಕ್ಷ ಮಾಡುವ ಕಾರ್ಯವಲ್ಲ. ಈ ವಿಷಯ ಬಿಜೆಪಿಯವರಿಗೆ ಗೊತ್ತಿದ್ದರೂ ಕ್ಷುಲಕ ಕಾರಣಕ್ಕೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಎಲ್ಲ ಪಕ್ಷಗಳಂತೆ ನಾವೂಮತದಾರರ ಪಟ್ಟಿಗೆ ಹೆಸರು ಸೇರ್ಪಡೆಯ ಅಭಿಯಾನ ನಡೆಸಿದ್ದೇವೆ. ಅದು ಬಿಟ್ಟು ಅರ್ಜಿ ಸಲ್ಲಿಸುವ ಕೆಲಸ ಮಾಡಿಲ್ಲ ಎಂದು ಅವರು ತಿಳಿಸಿದ್ದಾರೆ.