ತಿರುವನಂತಪುರಂ: ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ಸಾರ್ವಜನಿಕ ಕಾರ್ಯಕ್ರಮಕ್ಕೆ ಮಗುವನ್ನು ಕರೆತಂದು, ಆ ಮಗುವನ್ನು ಎತ್ತಿಕೊಂಡೇ ಭಾಷಣ ಮಾಡುವುದು ಸರಿಯೋ, ತಪ್ಪೋ? ಕೇರಳದಲ್ಲಿ ಈ ಪ್ರಶ್ನೆ ಕುರಿತು ಪರ-ವಿರೋಧ ಚರ್ಚೆ ಆರಂಭವಾಗಿದೆ.
ಪಟ್ಟಣಂತಿಟ್ಟ ಜಿಲ್ಲಾಧಿಕಾರಿ ದಿವ್ಯಾ ಎಸ್. ಅಯ್ಯರ್ ಖಾಸಗಿ ಸಂಸ್ಥೆಯೊಂದರ ಕಾರ್ಯಕ್ರಮಕ್ಕೆ ತಮ್ಮ ಮೂರೂವರೆ ವರ್ಷದ ಮಗುವನ್ನು ಕರೆತಂದಿದ್ದರು. ವೇದಿಕೆಯಲ್ಲಿ ಮಗುವಿನ ಜತೆಗೇ ಕುಳಿತಿದ್ದ ಅವರು, ಭಾಷಣ ಮಾಡುವಾಗ ಅವನನ್ನು ಎತ್ತಿಕೊಂಡೇ ಮಾತನಾಡಿದ್ದರು.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಈ ರೀತಿ ವರ್ತಿಸಿದ್ದು ತಪ್ಪು ಎಂದು ಕೆಲವರು ಟೀಕಿಸಿದ್ದಾರೆ. ಆದರೆ, ಅನೇಕರು ದಿವ್ಯಾರನ್ನು ಬೆಂಬಲಿಸಿದ್ದು, ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡಾ ಆರ್ಡನ್ ತಮ್ಮ 3 ತಿಂಗಳ ಮಗಳೊಂದಿಗೆ ವಿಶ್ವಸಂಸ್ಥೆ ಸಾಮಾನ್ಯ ಸಭೆಗೆ ಆಗಮಿಸಿದ್ದನ್ನು ಉದಾಹರಣೆಯಾಗಿ ನೀಡಿದ್ದಾರೆ.
ದಿವ್ಯಾರ ಪತಿ ಕೆ.ಎಸ್.ಶಬರಿನಾಥನ್ ಅವರೂ ಪತ್ನಿಯ ಬೆಂಬಲಕ್ಕೆ ನಿಂತು, “ಮಹಿಳೆಯರು ಪತ್ನಿಯಾಗಿ, ತಾಯಿಯಾಗಿ, ಸೊಸೆಯಾಗಿ ಹಲವು ಪಾತ್ರಗಳನ್ನು ನಿರ್ವಹಿಸಬೇಕಾಗುತ್ತದೆ. ವೃತ್ತಿಪರ ಕರ್ತವ್ಯಗಳನ್ನೂ ಪೂರೈಸಬೇಕಾಗುತ್ತದೆ. ಇದು ಒಬ್ಬ ಮಹಿಳೆಯ ಸಮಸ್ಯೆಯಲ್ಲ. ಎಲ್ಲರೂ ಇಂಥ ಸವಾಲುಗಳನ್ನು ಎದುರಿಸುತ್ತಾರೆ. ದಿವ್ಯಾ ಮಾಡಿದ್ದರಲ್ಲಿ ಯಾವ ತಪ್ಪೂ ಇಲ್ಲ, ಅಲ್ಲದೇ ಅದು ಸರ್ಕಾರಿ ಕಾರ್ಯಕ್ರಮವೂ ಆಗಿರಲಿಲ್ಲ’ ಎಂದು ಸಮರ್ಥಿಸಿಕೊಂಡಿದ್ದಾರೆ.