ತಿರುವನಂತಪುರಂ: ಹಲ್ಲುಗಳು ಓರೆಕೋರೆಯಾಗಿ ಮುಂದೆ ಇದೆ ಎಂದು ಯುವಕನನ್ನು ಕೆಲಸಕ್ಕೆ ನೇಮಿಸಲು ನಿರಾಕರಿಸಿದ ಘಟನೆ ಪಾಲಕ್ಕಾಡ್ ಜಿಲ್ಲೆಯ ಅಟ್ಟಪಾಡಿ ತಾಲೂಕಿನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಇತ್ತೀಚೆಗೆ ಕೇರಳ ಸಾರ್ವಜನಿಕ ಸೇವಾ ಆಯೋಗ ಬುಡಕಟ್ಟು ಸಮುದಾಯದ ಯುವಜನರಿಗೆ ವಿಶೇಷ ನಿಯಮದಡಿಯಲ್ಲಿ ಸರ್ಕಾರಿ ಹುದ್ದೆಯ ನೇಮಕಾತಿಗೆ ಪರೀಕ್ಷೆಗಳನ್ನು ಆಯೋಜಿಸಿತ್ತು. ಇದರಲ್ಲಿ ಫಾರೆಸ್ಟ್ ಬೀಟ್ ಆಫೀಸರ್ ಹುದ್ದೆಗೆ ಅಟ್ಟಪಾಡಿಯ ನಿವಾಸಿ ಮುತ್ತು ಪರೀಕ್ಷೆ ಬರೆದು, ದೈಹಿಕ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಈ ಎರಡಲ್ಲೂ ತೇರ್ಗಡೆಯಾದ ಬಳಿಕ ಹುದ್ದೆಗಾಗಿ ಮುತ್ತು ಕಾಯುತ್ತಿದ್ದರು.
ಬುಡಕಟ್ಟು ಸಮುದಾಯಕ್ಕಿರುವ ವಿಶೇಷ ನಿಯಮದಡಿಯಲ್ಲಿ ಮುತ್ತು ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಇದಾದ ಕೆಲ ಸಮಯದ ಬಳಿಕ ಮುತ್ತು ಅವರಿಗೆ ಯಾವುದೇ ಸೂಚನೆ ಬರಲಿಲ್ಲ. ನಂತರ ಮುತ್ತು ಅಧಿಕಾರಿಗಳಲ್ಲಿ ವಿಚಾರಿಸಿದಾಗ, ಅಧಿಕಾರಿಗಳು ಕೇರಳ ಸಾರ್ವಜನಿಕ ಸೇವಾ ಆಯೋಗ ನಿಮ್ಮ ಹುದ್ದೆಯ ಅರ್ಜಿಯನ್ನು ತಿರಸ್ಕರಿಸಿದೆ. ನಿಮ್ಮ ಹಲ್ಲುಗಳನ್ನು ಓರೆಕೋರೆಯಾಗಿ ಮುಂದೆ ಬಂದಿರುವುದಕ್ಕೆ ನಿಮ್ಮ ಮೆಡಿಕಲ್ ಪ್ರಮಾಣ ಪತ್ರವೂ ತಿರಸ್ಕೃತಗೊಂಡಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಕೇರಳ ಎಸ್/ ಟಿ ಆಯೋಗ ಸುಮೋಟೋ ಪ್ರಕರಣವನ್ನು ದಾಖಲಿಸಿದೆ ಎಂದು ವರದಿ ತಿಳಿಸಿದೆ. ಬಾಲ್ಯದಲ್ಲಿ ಆದ ಅವಘಡದಿಂದ ತನ್ನ ಹಲ್ಲು ಹೀಗೆ ಆಯಿತು, ಇದನ್ನು ಸರಿಪಡಿಸಲು 18,000 ಖರ್ಚು ಆಗುತ್ತದೆ. ಅದನ್ನು ನನ್ನ ಕುಟುಂಬ ಭರಿಸಲು ಸಾಧ್ಯವಿಲ್ಲ ಅದಕ್ಕೆ ಹೀಗೆಯೇ ಇದ್ದೇನೆ ಎಂದು ಮುತ್ತು ಅಳಲು ತೋಡಿಕೊಂಡಿದ್ದಾರೆ.
ಈ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಕೊಲ್ಲಂ ಮೂಲದ ದಂತ ವೈದ್ಯ ಡಾ. ವಿಲ್ಸನ್ ಜಾನ್ ಎಂಬುವವರು ಮುತ್ತು ಅವರ ಹಲ್ಲುಗಳನ್ನು ಸ್ವಂತ ಖರ್ಚಿನಲ್ಲಿ ಸರಿಪಡಿಸುವುದಾಗಿ ಭರವಸೆ ನೀಡಿರುವುದಾಗಿ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.