ಹೊಸದಿಲ್ಲಿ : ಕೇರಳ ಕಾಂಗ್ರೆಸ್ ಅಧ್ಯಕ್ಷ ಕೆ ಎ. ಮಣಿ ಅವರ ಸೊಸೆ ನಿಶಾ ಜೋಸ್ ಅವರು ಬರೆದು ಪ್ರಕಟಿಸಿರುವ ತಮ್ಮ ಆತ್ಮಕಥೆ (‘The Other Side of This Life – Snippets of my life as a Politician’s Wife’) ಯಲ್ಲಿ ತಮಗೆ ಹಿಂದೊಮ್ಮೆ ರೈಲು ಪ್ರಯಾಣದಲ್ಲಿ ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂಬುದನ್ನು ಬಹಿರಂಗಡಿಸಿದ್ದಾರೆ. ಆದರೆ ಆಕೆ ಈ ಬಗ್ಗೆ ಯಾವುದೇ ವ್ಯಕ್ತಿಯನ್ನು ಹೆಸರಿಸಿಲ್ಲ. ಆದರೆ ಈ ಲೈಂಗಿಕ ಕಿರುಕುಳದ ಆರೋಪಕ್ಕಾಗಿ ಆಕೆಯ ಆತ್ಮಕಥೆ ವಿವಾದ ಸೃಷ್ಟಿಸಿದೆ.
ಸಂಸದ ಜೋಸ್ ಮಣಿ ಅವರ ಪತ್ನಿಯಾಗಿರುವ ನಿಶಾ ಜೋಸ್ ತಮ್ಮ ಆತ್ಮಕಥೆಯಲ್ಲಿ 2012ರಲ್ಲಿ ಒಮ್ಮೆ ಕೈಗೊಂಡಿದ್ದ ರೈಲು ಪ್ರಯಾಣದಲ್ಲಿ ಕೇರಳದ ಇನ್ನೋರ್ವ ರಾಜಕಾರಣಿ “ಲಕ್ಷ್ಮಣ ರೇಖೆ’ ದಾಟಿದ್ದ ಎಂದು ಬರೆದಿದ್ದಾರೆ. ಆತ ಅನೇಕ ಬಾರಿ “ಆಕಸ್ಮಿಕವಾಗಿ’ ನನ್ನ ಕಾಲುಗಳನ್ನು ಸ್ಪರ್ಶಿಸಿದ ಎಂದು ವಿವರಿಸಿದ್ದಾರೆ.
“ಈ ವಿಷಯವನ್ನು ನಾನು ರೈಲಿನ ಟಿಕೆಟ್ ಪರೀಕ್ಷಕ ಸಿಬಂದಿಗೆ ತಿಳಿಸಿದೆ. ಆದರೆ ಆತ ನನಗೆ ನೆರವಾಗಲು ನಿರಕಾರಿಸಿದ. ನೆರವಾದರೆ ತಾನು ಕಷ್ಟಕ್ಕೆ ಸಿಲುಕುವುದಾಗಿ ಹೇಳಿದ. ನೀವು ರಾಜಕೀಯ ಮಿತ್ರರಾಗಿರುವುದರಿಂದ ಈ ಸಮಸ್ಯೆಯನ್ನು ನೀವು ನೀವೇ ಸೌಹಾರ್ದದಿಂದ ಬಗೆ ಹರಿಸಿಕೊಳ್ಳಿ ಎಂದಾತ ಹೇಳಿದ’ ಎಂಬುದಾಗಿ ನಿಶಾ ಬರೆದಿದ್ದಾರೆ.
2012ರಲ್ಲಿ ಕೇರಳ ಎಂಎಲ್‌ಎ ಪಿ ಸಿ ಜಾರ್ಜ್ ಅವರ ಪುತ್ರ ಶೋನ್ ಜಾರ್ಜ್ ಅವರೊಂದಿಗೆ ನಿಶಾ ಕಾಂಗ್ರೆಸ್ ಪರವಾಗಿ ದುಡಿದಿದ್ದಳು. ಈಗ ಆಕೆಯ ಆತ್ಮಕಥೆ ಓದಿದವರಿಗೆ ಲಕ್ಷ್ಮಣ ರೇಖೆ ದಾಟಿದ ಕೇರಳದ ಇನ್ನೋರ್ವ ರಾಜಕಾರಣಿ ಶೋನ್ ಜಾರ್ಜ್ ಇರಬೇಕೆಂಬ ಗುಮಾನಿ ಉಂಟಾಗಿದೆ.
“ತನಗೆ ಲೈಂಗಿಕ ಕಿರುಕುಳ ಕೊಟ್ಟವರು ಯಾರೆಂಬುದನ್ನು ನಿಶಾ ಬಹಿರಂಗಪಡಿಸಬೇಕು. ಜನರು ಅನಗತ್ಯವಾಗಿ ನನ್ನನ್ನು ಶಂಕಿಸುತ್ತಿದ್ದಾರೆ. ನಾನು ಈ ಬಗ್ಗೆ ಆಕೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇನೆ’ ಎಂದು ಶೋನ್ ಜಾರ್ಜ್ ಈ ನಡುವೆ ಹೇಳಿದ್ದಾರೆ.
ತನ್ನ ಹೊಸ ಪುಸ್ತಕ ಚೆನ್ನಾಗಿ ಮಾರಟವಾಗಲೆಂಬ ತಂತ್ರೋಪಾಯವಾಗಿ ನಿಶಾ ಈ ಪ್ರಕರಣಕ್ಕೆ ಮಹತ್ವ ಕೊಟ್ಟಿರುವುದಾಗಿ ಶೋನ್ ಆರೋಪಿಸಿದ್ದಾರೆ.