ತಿರುವನಂತಪುರಂ: ಕೇರಳ ಪೊಲೀಸ್ ಕ್ರೈಂ ಬ್ರ್ಯಾಂಚ್ ತನ್ನ ವಿರುದ್ಧ ದಾಖಲಿಸಿರುವ ಕೊಲೆ ಸಂಚು ಪ್ರಕರಣವನ್ನು ರದ್ದುಗೊಳಿಸಬೇಕೆಂದು ಕೋರಿ ನಟ ದಿಲೀಪ್ ಸಲ್ಲಿಸಿದ್ದ ಮೇಲ್ಮನವಿಯನ್ನು ಕೇರಳ ಹೈಕೋರ್ಟ್ ಮಂಗಳವಾರ (ಏಪ್ರಿಲ್ 19) ವಜಾಗೊಳಿಸಿದೆ.
ಇದನ್ನೂ ಓದಿಗೋವಾ: ಸರ್ಕಾರ ವಿದ್ಯುತ್ ಸಮಸ್ಯೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ: ಮೈಕಲ್ ಲೋಬೊ ಆರೋಪ
2017ರಲ್ಲಿ ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣದ ತನಿಖೆ ನಡೆಸುತ್ತಿದ್ದ ತನಿಖಾಧಿಕಾರಿಯನ್ನು ಹತ್ಯೆಗೈಯುವ ಸಂಚು ರೂಪಿಸಿರುವುದಾಗಿ ಆರೋಪಿಸಿ ಜನವರಿ 9ರಂದು ಕ್ರೈಬ್ರ್ಯಾಂಚ್ ಪೊಲೀಸರು ನಟ ದಿಲೀಪ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
ತನಿಖಾಧಿಕಾರಿಯನ್ನು ಕೊಲ್ಲುವ ಸಂಚು ರೂಪಿಸಿದ್ದಾರೆನ್ನಲಾದ ದಿಲೀಪ್ ಆಡಿಯೋ ಕ್ಲಿಪ್ ನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು. 2017ರಲ್ಲಿ ನಟಿಯೊಬ್ಬರ ಮೇಲೆ ನಡೆಸಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿದ್ದ ಕೇರಳ ಕ್ರೈಬ್ರ್ಯಾಂಚ್ ಪೊಲೀಸರು ಕಳೆದ ವಾರ ನಟ ದಿಲೀಪ್ ಜಾಮೀನನ್ನು ರದ್ದುಗೊಳಿಸುವಂತೆ ಹೈಕೋರ್ಟ್ ಗೆ ಮನವಿ ಮಾಡಿಕೊಂಡಿದ್ದರು.
2017ರಲ್ಲಿ ನಡೆದ ಪ್ರಕರಣದಲ್ಲಿ ನಟ ದಿಲೀಪ್ ಎಂಟನೇ ಆರೋಪಿಯಾಗಿದ್ದಾನೆ. ಪ್ರಕರಣದಲ್ಲಿ ದಿಲೀಪ್ ಮಾಜಿ ಪತ್ನಿ ಮಂಜು ವಾರಿಯರ್ ಅನ್ನು ಕ್ರೈಬ್ರ್ಯಾಂಚ್ ಪೊಲೀಸರು ತನಿಖೆಗೊಳಪಡಿಸಿದ್ದು, ಆಕೆ ಕೂಡಾ ದಿಲೀಪ್ ಹಾಗೂ ಇತರ ಇಬ್ಬರು ಆರೋಪಿಗಳ ಧ್ವನಿಯ ಗುರುತು ಪತ್ತೆಹಚ್ಚಿರುವುದಾಗಿ ಪೊಲೀಸರು ತಿಳಿಸಿದ್ದಾರೆ.