Advertisement

ಕೇರಳಕ್ಕೆ ಕೇಂದ್ರದಿಂದ 500 ಕೋ.ರೂ. ನೆರವು

06:00 AM Aug 19, 2018 | |

ತಿರುವನಂತಪುರ: ಅನಾಹುತಕಾರಿ ಮಳೆಗೆ ತುತ್ತಾಗಿ ತತ್ತರಿಸಿರುವ ಕೇರಳದ ಪರಿಸ್ಥಿತಿಯನ್ನು ಶನಿವಾರ ಖುದ್ದಾಗಿ ಅವಲೋಕಿಸಿದ ಪ್ರಧಾನಿ ನರೇಂದ್ರ ಮೋದಿ ಅವರು 500 ಕೋಟಿ ರೂ.ಗಳನ್ನು ತತ್‌ಕ್ಷಣದ ಪರಿಹಾರವಾಗಿ ಘೋಷಿಸಿದ್ದಾರೆ. ಇದಲ್ಲದೆ, ಮಳೆ, ಪ್ರವಾಹ ಸಂಬಂಧಿ ದುರಂತಗಳಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ ತಲಾ 50,000 ರೂ. ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.

Advertisement

ಸಮೀಕ್ಷೆ ನಡೆಸುವ ಉದ್ದೇಶದಿಂದ ಶುಕ್ರವಾರ ರಾತ್ರಿಯೇ ದಿಲ್ಲಿಯಿಂದ ತಿರುವನಂತಪುರಕ್ಕೆ ಆಗಮಿಸಿದ್ದ ಅವರು ಶನಿವಾರ ಬೆಳಗ್ಗೆ ಕೊಚ್ಚಿಗೆ ಬಂದು, ಅಲ್ಲಿಂದ ಪ್ರವಾಹದ ತೀವ್ರ ಬಾಧೆ ಎದುರಿಸುತ್ತಿರುವ ಅಲುವಾ-ತೃಶ್ಶೂರ್‌ ಪ್ರಾಂತ್ಯಗಳಲ್ಲಿ ವೈಮಾನಿಕ ಸಮೀಕ್ಷೆಗೆ ತೆರಳಿದರು. ಆದರೆ ಮಳೆಯಿಂದಾಗಿ ಈ ವೈಮಾನಿಕ ಸಮೀಕ್ಷೆಯನ್ನು ಅರ್ಧದಲ್ಲೇ ಮೊಟಕುಗೊಳಿಸಲಾಯಿತು. ಆದರೂ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅರ್ಥೈಸಿದ ಪ್ರಧಾನಿ, ಪರಿಹಾರ ಘೋಷಿಸಿದರು. ಸಮೀಕ್ಷೆಯ ವೇಳೆ, ಕೇರಳ ಮುಖ್ಯಮಂತ್ರಿ ಪಿಣರಾಯ್‌ ವಿಜಯನ್‌, ಕೇರಳದ ರಾಜ್ಯಪಾಲ ಪಿ. ಸದಾಶಿವಂ, ಕೇಂದ್ರ ಸಚಿವ ಕೆ.ಜೆ. ಆಲ್ಪೋನ್ಸ್‌ ಪ್ರಧಾನಿ ಜತೆಗಿದ್ದರು.

ಆತ್ಮಶಕ್ತಿಗೆ ಮೆಚ್ಚುಗೆ
 “ತಮಗಾಗಿರುವ ನೈಸರ್ಗಿಕ ವಿಕೋಪವನ್ನು ಕೆಚ್ಚೆದೆಯಿಂದ ಎದುರಿಸುತ್ತಿರುವ ಕೇರಳಿಗರ ಆತ್ಮ ಶಕ್ತಿಗೆ ಅನಂತ ನಮನ’ ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. “ಇಂಥ ವಿಪತ್ತಿನ ಸಂದರ್ಭದಲ್ಲಿ ಕೇಂದ್ರ ಸರಕಾರ, ಕೇರಳ ಬೆನ್ನಿಗೆ ನಿಂತಿರುತ್ತದೆ’ ಎಂದು ಅವರು ಹೇಳಿದ್ದಾರೆ.

ಧನ್ಯವಾದ ಅರ್ಪಿಸಿದ ಪಿಣರಾಯ್‌
ಪ್ರಧಾನಿಯವರ ಸಹಾಯ ಹಸ್ತಕ್ಕೆ ಟ್ವಿಟರ್‌ನಲ್ಲಿ ಧನ್ಯವಾದ ಅರ್ಪಿಸಿರುವ ಸಿಎಂ ಪಿಣರಾಯ್‌ ವಿಜಯನ್‌, “ಕೇರಳದಲ್ಲಿ ಈವರೆಗೆ ಆಗಿರುವ ನಷ್ಟದ ಅಂದಾಜು ಮೊತ್ತ 19,512 ಕೋಟಿ ರೂ.ಗಳಷ್ಟಿದೆ. ನೆರೆ ಇಳಿದ ಮೇಲಷ್ಟೇ ನೈಜ ನಷ್ಟದ ಲೆಕ್ಕಾಚಾರ ತಿಳಿದು ಬರಲಿದೆ. ಆದರೆ ಸದ್ಯಕ್ಕೆ ತುರ್ತು ಪರಿಹಾರ ಕಾರ್ಯಾಚರಣೆಗಳಿಗಾಗಿ ಅಂದಾಜು 2,000 ಕೋಟಿ ರೂ. ಬೇಕಿದೆ’ ಎಂದಿದ್ದಾರೆ.

ಇಂದಿನಿಂದ ರೈಲು ಸಂಚಾರ
ಭಾರೀ ಮಳೆಯಿಂದ ಸ್ಥಗಿತಗೊಂಡಿದ್ದ ಕೇರಳದ ಹೆಚ್ಚಿನ ಕಡೆಗಳಲ್ಲಿ ರವಿವಾರದಿಂದ ರೈಲು ಸಂಚಾರ ಪುನರಾರಂಭಗೊಳ್ಳಲಿದೆ ಎಂದು ದಕ್ಷಿಣ ರೈಲ್ವೇ ತಿಳಿಸಿದೆ. ಕೆಲವು ಮಾರ್ಗಗಳಲ್ಲಿ ಬೆಳಗ್ಗೆ ಹಾಗೂ ಇನ್ನು ಕೆಲವು ಮಾರ್ಗಗಳಲ್ಲಿ ಸಂಜೆಯಿಂದ ರೈಲುಗಳು ಓಡಾಡಲಿವೆ. ಆದರೆ ವೇಗ ನಿಯಂತ್ರಣ ಜಾರಿಯಲ್ಲಿರುತ್ತದೆ ಎಂದು ಪ್ರಕಟನೆ ತಿಳಿಸಿದೆ.

Advertisement

ಮತ್ತೆ 23 ಮಂದಿ ಬಲಿ
ಮಹಾಮಳೆಗೆ ಕಂಗಾಲಾಗಿರುವ ಕೇರಳದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ವರುಣನ ಆರ್ಭಟ ಮುಂದುವರಿದಿದೆ. ಶನಿವಾರ ಮತ್ತೆ 23 ಮಂದಿ ಮಳೆ ಸಂಬಂಧಿ ದುರಂತಗಳಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ ಏರುತ್ತಲೇ ಇದೆ. ಇನ್ನೂ ಮೂರು ದಿನ ಧಾರಾಕಾರ ಮಳೆಯಾಗಲಿದ್ದು, ಮಂಗಳವಾರದ ಬಳಿಕ ಸ್ವಲ್ಪಮಟ್ಟಿಗೆ ಕಡಿಮೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ತಿರುವನಂತಪುರ, ಕೊಲ್ಲಂ ಹಾಗೂ ಕಾಸರಗೋಡು ಹೊರತುಪಡಿಸಿ ಉಳಿದ ಎಲ್ಲ 11 ಜಿಲ್ಲೆಗಳಲ್ಲೂ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಅಂದಾಜು 4 ಲಕ್ಷ ಮಂದಿ ಸಂತ್ರಸ್ತರ ಶಿಬಿರಗಳಲ್ಲಿದ್ದು, ಇನ್ನೂ ಹಲವರು ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 58 ತಂಡಗಳು ಕೇರಳದ ಕಾರ್ಯಾಚರಣೆಗೆ ನಿಯುಕ್ತಿಯಾಗಿದ್ದು, ಸದ್ಯಕ್ಕೆ 55 ತಂಡಗಳು ಸಕ್ರಿಯವಾಗಿವೆ. ಇದೇ ವೇಳೆ, ವಿವಿಧ ರಾಜ್ಯ ಸರಕಾರಗಳು, ಸಂಘ ಸಂಸ್ಥೆಗಳಿಂದ ನೆರವಿನ ಮಹಾಪೂರ ಹರಿದುಬರುತ್ತಿವೆ.

ಮೋದಿ ಕೈಗೊಂಡ ಕ್ರಮ
ಅಗತ್ಯವಿರುವ ವ್ಯಕ್ತಿಗಳಿಗೆ ವಿಮೆ ಮೊತ್ತ ಜಾರಿಗೊಳಿಸಲು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಿಶೇಷ ಕ್ಯಾಂಪ್‌ ನಡೆಸುವಂತೆ ವಿಮಾ ಕಂಪೆನಿಗಳಿಗೆ ಸೂಚನೆ.
ಕೇರಳದ ರಾಷ್ಟ್ರೀಯ ಹೆದ್ದಾರಿಗಳನ್ನು ಅಗತ್ಯವಿರುವ ಕಡೆ ಆದ್ಯತೆಯ ಮೇರೆಗೆ ರಿಪೇರಿ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಆದೇಶ.
ಎನ್‌ಟಿಪಿಎಲ್‌, ಪಿಜಿಸಿಐಎಲ್‌ ಸಂಸ್ಥೆಗಳಿಗೆ ವಿದ್ಯುತ್‌ ಸಂಪರ್ಕ ಮರು ಸ್ಥಾಪನೆ ವಿಚಾರದಲ್ಲಿ ರಾಜ್ಯ ಸರಕಾರಕ್ಕೆ ನೆರವಾಗುವಂತೆ ಸೂಚನೆ.
“ಕುಚ್ಛಾ’ ಮನೆಗಳನ್ನು (ಗುಡಿಸಲು ಮಾದರಿ ಮನೆಗಳು) ಕಳೆದುಕೊಂಡವರಿಗೆ ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್‌ ಯೋಜನೆಯಡಿ ಮನೆ ಕಟ್ಟಿ ಕೊಡಲು ಆದೇಶ.
ನರೇಗಾ ಯೋಜನೆಯಡಿ 5.5 ಕೋಟಿ ಮಂದಿಗೆ ಆದಾಯ ಖಾತ್ರಿ. ಇದಕ್ಕಾಗಿ ಕಾರ್ಮಿಕ ಬಜೆಟ್‌ 2018-19ರಲ್ಲಿ ಹಣ ಮೀಸಲಿಡಲು ಆದೇಶ.
ಕೇರಳ ಸಿಎಂ ಕೋರಿಕೆಯ ಮೇರೆಗೆ ಮತ್ತಷ್ಟು ಸೇನಾ ಹೆಲಿಕಾಪ್ಟರ್‌ಗಳನ್ನು ಕೇರಳಕ್ಕೆ ರವಾನಿಸಲು ಕ್ರಮ.
ಆಹಾರ ಸಾಮಗ್ರಿ, ಔಷಧಗಳು ಹಾಗೂ ಪರಿಹಾರ ಕಾಮಗಾರಿಗಾಗಿ ಅಗತ್ಯ ಸಲಕರಣೆಗಳ ಪೂರೈಕೆಗೆ ಕ್ರಮ ಕೈಗೊಳ್ಳುವ ಭರವಸೆ.
ಕೇರಳದ ಮುಂದಿನ ಎಲ್ಲ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸುವಂತೆ ಪ್ರಧಾನಿ ಸಚಿವಾಲಯಕ್ಕೆ ಸೂಚನೆ.

Advertisement

Udayavani is now on Telegram. Click here to join our channel and stay updated with the latest news.

Next