ತಿರುವನಂತಪುರಂ: ಭಾರೀ ಮಳೆ, ಪ್ರವಾಹದ ಪರಿಣಾಮ ಕೇರಳದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 27ಕ್ಕೆ ಏರಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಸೋಮವಾರ(ಅಕ್ಟೋಬರ್ 18) ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತುರ್ತು ಸಭೆಯನ್ನು ಕರೆದು ಮಳೆ, ಪ್ರವಾಹ ಪೀಡಿತ ಪ್ರದೇಶಗಳ ಕುರಿತ ಮಾಹಿತಿ ಪಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ನಟಿ ನೀನಾ ಗುಪ್ತಾಗೆ ಬಾಲ್ಯದಲ್ಲಿ ವೈದ್ಯನಿಂದ ಲೈಂಗಿಕ ಕಿರುಕುಳ
ಮಳೆ, ಪ್ರವಾಹದಿಂದ ರಾಜ್ಯದ ದಕ್ಷಿಣ ಭಾಗದ ಕೊಟ್ಟಾಯಂನಲ್ಲಿ 13 ಮಂದಿ, ಇಡುಕ್ಕಿಯಲ್ಲಿ 9 ಮಂದಿ ಸೇರಿ 22 ಜನರು ಸಾವನ್ನಪ್ಪಿದ್ದಾರೆ. ಇನ್ನುಳಿದ ಐವರು ವಿವಿಧೆಡೆ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಭಾರೀ ಮಳೆಯಿಂದಾಗಿ ರಾಜ್ಯದ ವಿವಿಧೆಡೆ ಅಣೆಕಟ್ಟುಗಳ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಈ ಕುರಿತು ಕೇರಳ ಸರ್ಕಾರ ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶ ಜಾರಿಗೊಳಿಸಿದೆ. ಅಲ್ಲದೇ ತಗ್ಗು ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.
ಏಷ್ಯಾದಲ್ಲಿಯೇ ಎತ್ತರವಾಗಿರುವ ಅಣೆಕಟ್ಟುಗಳಲ್ಲಿ ಇಡುಕ್ಕಿಯೂ ಸೇರಿದ್ದು, ಸೋಮವಾರ(ಅಕ್ಟೋಬರ್ 18) ಅಣೆಕಟ್ಟಿನಲ್ಲಿ ನೀರಿನ ಮಟ್ಟ 2,396.96 ಅಡಿಗೆ ಏರಿಕೆಯಾಗಿದೆ. ಈ ಬಗ್ಗೆ ಆರೆಂಜ್ ಅಲರ್ಟ್ ಕೂಡಾ ನೀಡಲಾಗಿದೆ. ಇಡುಕ್ಕಿ ಜಲಾಶಯದ ಪೂರ್ಣ ಪ್ರಮಾಣದ ನೀರಿನ ಮಟ್ಟ 2,403 ಅಡಿಗಳಷ್ಟಾಗಿದೆ ಎಂದು ವರದಿ ಹೇಳಿದೆ.