ಕೇರಳ: ತೃಶೂರ್ ಜಿಲ್ಲೆಯ ಪುಣ್ಯೂರ್‌ಕುಲಂ ಎಂಬಲ್ಲಿರುವ ರೆಸಾರ್ಟ್ ಒಂದರಲ್ಲಿ ಮದುವೆ ನಡೆಯಿತು. ಅದರಲ್ಲೇನು ವಿಶೇಷ ಅಂತೀರಾ? ಅದು, “ಬೀಗಲ್’ ಜಾತಿಯ ಎರಡು ಬೇಟೆ ನಾಯಿಗಳ ಮದುವೆ.
ಮನುಷ್ಯರ ಮದುವೆಯಂತೆಯೇ ಅದ್ದೂರಿಯಾಗಿ ಆ್ಯಸಿಡ್ ಅಲಿಯಾಸ್ ಕುಟ್ಟಪ್ಪು ಎಂಬ ಗಂಡು ನಾಯಿಗೂ, ಜಾಹ್ನವಿ ಎಂಬ ಹೆಣ್ಣು ನಾಯಿಗೂ ವಿವಾಹ ನೆರವೇರಿಸಲಾಯಿತು.
ಏನಿದು ವಿಚಿತ್ರ ಎಂದು ಹುಬ್ಬೇರಿಸಬೇಡಿ. ಕುಟ್ಟಪ್ಪು ಎಂಬ ಎರಡೂವರೆ ವರ್ಷದ ನಾಯಿ, ತೃಶೂರ್‌ನ ಶೆಲ್ಲಿ ಎಂಬ ಅವರ ಮನೆ ಸದಸ್ಯ. ಶೆಲ್ಲಿಗೆ ಆಕಾಶ್, ಅರ್ಜುನ್ ಎಂಬ ಇಬ್ಬರು ಮಕ್ಕಳಿದ್ದು, ಕುಟ್ಟಪ್ಪು ಅವರ ಮೂರನೇ ಮಗ!
ಕುಟ್ಟಪ್ಪುಗೆ ಮದುವೆ ಮಾಡಿಸಲು ಮುಂದಾಗಿದ್ದ ಶೆಲ್ಲಿ, ಅದಕ್ಕಾಗಿ ಹೆಣ್ಣು ಹುಡುಕುತ್ತಿದ್ದರು. ಸಾಕಷ್ಟು ಹುಡುಕಾಟದ ಅನಂತರ ಅವರಿಗೆ ಜಾಹ್ನವಿ ಎಂಬ ಒಂದೂವರೆ ವರ್ಷದ ಹೆಣ್ಣು ನಾಯಿ ಸಿಕ್ಕಿತು. ಹಾಗಾಗಿ ಎರಡರ ಮದುವೆ ನೆರವೇರಿಸಿದ್ದಾರೆ.
ವಿವಾಹಕ್ಕೂ ಮುನ್ನ ಫೋಟೋ ಶೂಟ್ ನಡೆಸಲಾಗಿತ್ತು. ಮುಹೂರ್ತಕ್ಕಾಗಿ ನಿರ್ಮಿಸಲಾಗಿದ್ದ ಅದ್ದೂರಿ ವೇದಿಕೆಯಲ್ಲಿ ಎರಡೂ ನಾಯಿಗಳಿಗೆ ಹೂವಿನ ಹಾರ ಬದಲಾಯಿಸುವ ಮೂಲಕ ಮದುವೆ ನೆರವೇರಿಸಲಾಯಿತು.