Advertisement

Kerala ಬಿಜೆಪಿ ಗಾಳ; ಕ್ರಿಶ್ಚಿಯನ್‌ ಸಮುದಾಯವನ್ನು ಸೆಳೆಯಲು ಯತ್ನ

10:43 PM Apr 09, 2023 | Team Udayavani |

ತಿರುವನಂತಪುರಂ: ನಾಗಾಲ್ಯಾಂಡ್‌, ಮೇಘಾಲಯದಂತಹ ಕ್ರಿಶ್ಚಿಯನ್‌ ಬಾಹುಳ್ಯದ ರಾಜ್ಯಗಳನ್ನು ತನ್ನ ತೆಕ್ಕೆಗೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಬಿಜೆಪಿ ಈಗ “ದೇವರ ನಾಡು’ ಕೇರಳದಲ್ಲಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕಸರತ್ತು ತೀವ್ರಗೊಳಿಸಿದೆ.

Advertisement

ಕಳೆದ ತಿಂಗಳ ಆರಂಭದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕೇರಳದ ಕನಸನ್ನು ಬಹಿರಂಗವಾಗಿಯೇ ಬಿಚ್ಚಿಟ್ಟಿದ್ದರು. ಅದಾದ ನಂತರ ಕೇರಳದಲ್ಲಿ ನಡೆದಿರುವ ಹಾಗೂ ನಡೆಯುತ್ತಿರುವ ಬೆಳವಣಿಗೆಗಳು ಬಿಜೆಪಿಯು ದೇವರ ನಾಡಲ್ಲಿ ಹೊಸ ಲೆಕ್ಕಾಚಾರ ಹಾಕಿಕೊಂಡು ಮುನ್ನಡೆಯುತ್ತಿರುವುದರ ಸುಳಿವು ನೀಡಿದೆ. ಅದಕ್ಕೆ ಹೊಸ ಸೇರ್ಪಡೆಯೆಂಬಂತೆ, ಈಸ್ಟರ್‌ ಹಬ್ಬದ ದಿನವಾದ ಭಾನುವಾರ ಕೇರಳದ ಪ್ರಮುಖ ಬಿಷಪ್‌ಗ್ಳ ಮನೆಗಳಿಗೆ ಬಿಜೆಪಿಯ ಹಿರಿಯ ನಾಯಕರು ಭೇಟಿ ನೀಡಿದ್ದಾರೆ.

ವಿದೇಶಾಂಗ ಇಲಾಖೆ ಸಹಾಯಕ ಸಚಿವ ವಿ.ಮುರಳೀಧರನ್‌ ಅವರು ಟ್ರಿವೇಂಡ್ರಂನಲ್ಲಿನ ಲ್ಯಾಟಿನ್‌ ಕ್ಯಾಥಲಿಕ್‌ ಆರ್ಚ್‌ಡಯೋಸಿಸ್‌ನ ಆರ್ಚ್‌ಬಿಷಪ್‌ ಥೋಮಸ್‌ ಜೆ.ನೆಟ್ಟೋ ಅವರ ಮನೆಗೆ ತೆರಳಿದರೆ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ. ಕೃಷ್ಣ ದಾಸ್‌ ಅವರು ಕಣ್ಣೂರಿನಲ್ಲಿ ತಲಶೆÏàರಿ ಆರ್ಚ್‌ಬಿಷಪ್‌ ಮಾರ್‌ ಜೋಸೆಫ್ ಪ್ಯಾಂಪ್ಲೆನಿ ಅವರನ್ನು ಭೇಟಿಯಾಗಿದ್ದಾರೆ. “ಈಸ್ಟರ್‌ನ ಶುಭ ಸಂದರ್ಭದಲ್ಲಿ ಇದೊಂದು ಫ‌ಲಪ್ರದ ಭೇಟಿ’ ಎಂದೂ ಮುರಳೀಧರನ್‌ ಟ್ವೀಟ್‌ ಮಾಡಿದ್ದಾರೆ. ಜತೆಗೆ, ತಮ್ಮ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ಮೋದಿ ಚರ್ಚ್‌ ಭೇಟಿ:
ಇನ್ನೊಂದೆಡೆ, ಕರ್ನಾಟಕ, ತಮಿಳುನಾಡು ಪ್ರವಾಸ ಮುಗಿಸಿ ಭಾನುವಾರ ಸಂಜೆ ದೆಹಲಿಗೆ ವಾಪಸಾದ ಪ್ರಧಾನಿ ಮೋದಿ ಅವರು ದೆಹಲಿಯ ಕ್ಯಾಥಡ್ರಲ್‌ಗೆ ಭೇಟಿ ನೀಡಿದರು.

ಬಿಜೆಪಿ ಕಾರ್ಯತಂತ್ರವೇನು?
ಆದರೆ, 2024ರ ಲೋಕಸಭೆ ಚುನಾವಣೆಗೂ ಮುನ್ನವೇ ಅಲ್ಪಸಂಖ್ಯಾತ ಕ್ರಿಶ್ಚಿಯನ್‌ ಸಮುದಾಯವನ್ನು ತಮ್ಮತ್ತ ವಾಲುವಂತೆ ಮಾಡುವುದೇ ಬಿಜೆಪಿಯ ಕಾರ್ಯತಂತ್ರ ಎಂದು ವಿಶ್ಲೇಷಿಸಲಾಗುತ್ತಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ರಕ್ಷಣಾ ಸಚಿವ ಎ.ಕೆ.ಆ್ಯಂಟನಿ ಅವರ ಪುತ್ರ ಅನಿಲ್‌ ಆ್ಯಂಟನಿ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸಲಾಗಿದೆ. ಇದು ಕೂಡ ಕೇರಳ ಬಿಜೆಪಿಗೆ ಪ್ಲಸ್‌ ಪಾಯಿಂಟ್‌ ಆಗಲಿದೆ ಎಂದು ಹೇಳಲಾಗಿದೆ. ಇನ್ನು, ಕಳೆದ ತಿಂಗಳಷ್ಟೇ ಆರ್ಚ್‌ಬಿಷಪ್‌ ಪ್ಯಾಂಪ್ಲೆನಿ ಅವರು, “ರಬ್ಬರ್‌ ಖರೀದಿ ದರವನ್ನು ಕೇಂದ್ರ ಸರ್ಕಾರವು ಕೆಜಿಗೆ 300ರೂ.ಗಳಿಗೆ ಏರಿಕೆ ಮಾಡಿದರೆ, ಕೇರಳದಿಂದ ಸಂಸದರನ್ನು ಹೊಂದುವ ಬಿಜೆಪಿಯ ಇಚ್ಛೆ ನೆರವೇರಲಿದೆ’ ಎಂದು ಹೇಳಿಕೆ ನೀಡಿ ಅಚ್ಚರಿ ಉಂಟುಮಾಡಿದ್ದರು. ಇದೆಲ್ಲವೂ ದೇವರ ನಾಡಿನಲ್ಲಿ ಬಿಜೆಪಿಯ ಹೆಜ್ಜೆ ಬಲವಾಗುತ್ತಿರುವುದಕ್ಕೆ ಪುಷ್ಟಿ ನೀಡಿವೆ.

Advertisement

ಸಚಿವ ಮುನಿರತ್ನ ಹೇಳಿಕೆ ಉಲ್ಲೇಖ
ಬಿಜೆಪಿ ನಾಯಕರ ಬಿಷಪ್‌ ಮನೆ ಭೇಟಿಗೆ ಪ್ರತಿಕ್ರಿಯಿಸಿರುವ ಕೇರಳ ಕಾಂಗ್ರೆಸ್‌, “ಬಿಜೆಪಿಯ ಕ್ರಿಶ್ಚಿಯನ್‌ ವಿರೋಧಿ ನಡೆ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮೇಲಿನ ದೌರ್ಜನ್ಯವನ್ನು ಮುಚ್ಚಿಡಲು ಈ ರೀತಿ ನಾಟಕವಾಡಲಾಗುತ್ತಿದೆ. ಕಳೆದ 4 ವರ್ಷಗಳಲ್ಲಿ ದೇಶದ 600ಕ್ಕೂ ಹೆಚ್ಚು ಚರ್ಚುಗಳ ಮೇಲೆ ದಾಳಿ ನಡೆದಿದೆ. ಕ್ರಿಸ್‌ಮಸ್‌ ಹಬ್ಬದ ಪ್ರಾರ್ಥನೆಗೂ ಬಿಜೆಪಿ ತೊಂದರೆ ಮಾಡಿದೆ’ ಎಂದು ಕಿಡಿಕಾರಿದೆ. ಕರ್ನಾಟಕದಲ್ಲಿ ಬಿಜೆಪಿ ಸಚಿವ ಮುನಿರತ್ನ ಅವರ ಹೇಳಿಕೆಯನ್ನು ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ ಪ್ರತಿಪಕ್ಷ ನಾಯಕ ವಿ.ಡಿ.ಸತೀಶನ್‌, “ಕ್ರಿಶ್ಚಿಯನ್ನರು ಜನರನ್ನು ಮತಾಂತರ ಮಾಡುತ್ತಿದ್ದಾರೆ. ಮತಾಂತರ ಮಾಡಲು ಅವರು ಬಂದರೆ ಅವರನ್ನು ಒಧ್ದೋಡಿಸಿ. ಅವರು ಹಿಂದೆ ತಿರುಗಿ ನೋಡದಂತೆ ಹೊಡೆದು ಓಡಿಸಿ’ ಎಂದು ಬಿಜೆಪಿಯ ಸಚಿವ ಮುನಿರತ್ನ ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದಾರೆ. ಇದು ಬಿಜೆಪಿಯ ಬೂಟಾಟಿಕೆಗೆ ಸಾಕ್ಷಿ ಎಂದಿದ್ದಾರೆ. ಕ್ರಿಶ್ಚಿಯನ್ನರ ಮನೆಗೆ ಬಿಜೆಪಿ ನಾಯಕರ ಭೇಟಿಯನ್ನು ಕೇರಳ ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್‌ ಅವರು, “ಧೃತರಾಷ್ಟ್ರ ಆಲಿಂಗನ’ ಎಂದು ಕರೆದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next