Advertisement

ಕೋವಿಡ್ ವೈರಸ್ ಗೆ ಹೇಗೆ ಬ್ರೇಕ್‌ ಹಾಕುತ್ತಿದೆ ಕೇರಳ ಮಾಡೆಲ್?

09:40 AM May 13, 2020 | Hari Prasad |

ದೇಶದಲ್ಲೀಗ ಕೋವಿಡ್ ಸೋಂಕಿತರ ಸಂಖ್ಯೆ ಹಾಗೂ ಮರಣ ಪ್ರಮಾಣ ಏರುತ್ತಲೇ ಸಾಗಿದೆ.

Advertisement

ಕೇಂದ್ರ, ರಾಜ್ಯ ಸರಕಾರಗಳು, ಆರೋಗ್ಯ ಇಲಾಖೆಗಳು ಸಾಂಕ್ರಾಮಿಕದ ವಿರುದ್ಧ  ಹೋರಾಡುತ್ತಿವೆಯಾದರೂ, ಕೆಲವೇ ಕೆಲವು ರಾಜ್ಯಗಳು ಮಾತ್ರ ಈ ಹೋರಾಟದಲ್ಲಿ ಗಮನಾರ್ಹ ಯಶಸ್ಸು ಕಾಣುತ್ತಿವೆ.

ಅದರಲ್ಲೂ ಕೇರಳವಂತೂ ರೋಗವನ್ನು ಹತ್ತಿಕ್ಕುವಲ್ಲಿ ತೋರುತ್ತಿರುವ ಯಶಸ್ಸು ನಿಬ್ಬೆರಗಾಗಿಸುವಂತಿದೆ. ಸೋಂಕಿತರ ಸಂಖ್ಯೆ500ರ ಗಡಿ ದಾಟಿರುವ ಆ ರಾಜ್ಯದಲ್ಲಿ ಮೃತಪಟ್ಟವರ  ಸಂಖ್ಯೆ ಮಾತ್ರ ಕೇವಲ 4!

ಈ ಕಾರಣಕ್ಕಾಗಿಯೇ, ಈಗ ದೇಶಾದ್ಯಂತ ‘ಕೇರಳ ಮಾಡೆಲ್‌’ನ ಬಗ್ಗೆಯೇ ಪ್ರಶಂಸೆ ಮತ್ತು  ಚರ್ಚೆ ಆರಂಭವಾಗಿದೆ. ಆದಾಗ್ಯೂ, ಈಗ ಗಲ್ಫ್ ರಾಷ್ಟ್ರಗಳಿಂದ ಹಿಂದಿರುಗಿರುವವರಲ್ಲಿ ಸೋಂಕು ಪತ್ತೆಯಾಗಿದೆಯಾದರೂ, ರೋಗ ಪ್ರಸರಣವನ್ನು ತಡೆಯುವ ಬಗ್ಗೆ  ಭರವಸೆಯ ಮಾತನಾಡುತ್ತಿದೆ ಕೇರಳ ಸರಕಾರ.

ಆರಂಭಿಕ ಪ್ರಕರಣಗಳು
ದೇಶದಲ್ಲಿ ಮೊದಲ ಕೋವಿಡ್ ಪ್ರಕರಣ ದಾಖಲಾಗಿದ್ದು ಕೇರಳದಲ್ಲೇ. ಚೀನದ ವುಹಾನ್‌ನಿಂದ ಹಿಂದಿರುಗಿದ್ದ ಕೇರಳದ ಮೂವರು ವಿದ್ಯಾರ್ಥಿಗಳೇ ಆ ರಾಜ್ಯದ ಮೊದಲ ಮೂರು ಕೋವಿಡ್ ಕೇಸುಗಳಾದರು. ಅನಿವಾಸಿ ಭಾರತೀಯರಲ್ಲಿ ಕೇರಳದವರ ಪ್ರಮಾಣ ಅಧಿಕವಿರುವುದರಿಂದ, ಆ ರಾಜ್ಯದಲ್ಲಿ ಕೋವಿಡ್ ಪೀಡಿತರ ಸಂಖ್ಯೆ ಅಧಿಕವಾಗಲಿದೆ ಎಂದು ಆರಂಭದಲ್ಲಿ ಊಹಿಸಲಾಗಿತ್ತು.

Advertisement

ಮಾರ್ಚ್‌ 24ರ ವೇಳೆಗೆ, ಅಂದರೆ, ಲಾಕ್‌ಡೌನ್‌ ಘೋಷಣೆಯಗುವ ವೇಳೆಗೆ ಆ ರಾಜ್ಯದಲ್ಲಿ 100ಕ್ಕೂ ಅಧಿಕ ಸೋಂಕಿತರು ಪತ್ತೆಯಾದರು. ಭಾರತದ ಜನಸಂಖ್ಯೆಯಲ್ಲಿ 2.5 ಪ್ರತಿಶತದಷ್ಟೇ ಅಲ್ಪ ಸಂಖ್ಯೆ ಹೊಂದಿರುವ ಕೇರಳದಲ್ಲಿ ಆ ಸಮಯದಲ್ಲಿ ದೇಶದಲ್ಲಿನ ಐದನೇ ಒಂದು ಭಾಗದಷ್ಟು ಪ್ರಕರಣಗಳು  ದಾಖಲಾಗಿದ್ದವು!

ಆರೋಗ್ಯ ವ್ಯವಸ್ಥೆ ಎಷ್ಟು ಸದೃಢ
ಕೇರಳದ ಯಶಸ್ಸಿನ ಹಿಂದೆ, ನಿಫಾದಂಥ ವೈರಸ್‌ ವಿರುದ್ಧ ಹೋರಾಡಿದ ಅನುಭವ, ಬಲಿಷ್ಠ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಸಮುದಾಯ ಸಹಭಾಗಿತ್ವ ಪ್ರಮುಖ ಪಾತ್ರ ವಹಿಸಿವೆ.

ಅದರಲ್ಲೂ ಆರೋಗ್ಯ ವ್ಯವಸ್ಥೆಯ ವಿಕೇಂದ್ರೀಕರಣ, ಅಂದರೆ, ಸ್ಥಳೀಯ ಆಡಳಿತಗಳಿಗೆ ಆಸ್ಪತ್ರೆಗಳ ನಿರ್ವಹಣೆಯಲ್ಲಿ ಹೆಚ್ಚಿನ ಪಾತ್ರ ನೀಡಿರುವುದರಿಂದಾಗಿ, ಆ ರಾಜ್ಯದ ಆರೋಗ್ಯ ವ್ಯವಸ್ಥೆಯು ಸದೃಢವಾಗಿ ಬದಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ  ಸರಕಾರಿ ಆರೋಗ್ಯ ವಲಯದಲ್ಲಿ ಅನೇಕ ಸುಧಾರಣೆಗಳನ್ನು ತರಲಾಗಿದೆ. ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳು ಹಾಗೂ ಸರಕಾರಿ ಮೆಡಿಕಲ್‌ ಕಾಲೇಜುಗಳಲ್ಲೂ ಸಹ ಅತ್ಯಾಧುನಿಕ ಆರೋಗ್ಯ ಸೇವೆ ಲಭಿಸುವಂತಾಗಿದೆ.

ಕಾಸರಗೋಡಲ್ಲಿ 100 ಪ್ರತಿಶತ ಚೇತರಿಕೆ
ಅತಿಹೆಚ್ಚು ಪ್ರಕರಣಗಳು ದಾಖಲಾಗಿದ್ದ ಕಾಸರಗೋಡಿನಲ್ಲಿ (178) ಈಗ ಎಲ್ಲರೂ ಚೇತರಿಸಿಕೊಂಡಿದ್ದಾರೆ. ಕಾಸರಗೋಡಿನಲ್ಲೂ  ಬಿಗಿ ಲಾಕ್‌ಡೌನ್‌ ಮುಂದುವರಿಸುವುದಾಗಿ ಸ್ಥಳೀಯಾಡಳಿತ ಘೋಷಿಸಿದೆ.

ಗಮನಾರ್ಹ ವಿಷಯವೆಂದರೆ, ಅನ್ಯ ಜಿಲ್ಲೆಗಳಿಗೆ ಹೋಲಿಸಿದರೆ ಕಾಸರಗೋಡಿನ ಆರೋಗ್ಯ ವ್ಯವಸ್ಥೆ ದುರ್ಬಲವಾಗಿಯೇ ಇದೆ. ಈ ಕಾರಣಕ್ಕಾಗಿಯೇ, ಅಲ್ಲಿ ಕೋವಿಡ್ ಕೇಸುಗಳು ಹೆಚ್ಚಳವಾದಾಗ ಆರೋಗ್ಯ ಇಲಾಖೆ ಕಳವಳಗೊಂಡಿತ್ತು.

ಯಾವಾಗ ಸೋಂಕಿತರ ಸಂಖ್ಯೆ ಅಧಿಕವಾಗತೊಡಗಿತೋ ಕೂಡಲೇ ನೂತನವಾಗಿ ನಿರ್ಮಾಣವಾಗುತ್ತಿರುವ ಮೆಡಿಕಲ್‌ ಕಾಲೇಜಿನ ಆಸ್ಪತ್ರೆಯ ಅಡ್ಮಿನಿಸ್ಟ್ರೇಟಿವ್‌ ಬ್ಲಾಕ್‌ ಅನ್ನು ಕೋವಿಡ್‌-19 ಚಿಕಿತ್ಸೆಗಾಗಿ ಸಕ್ರಿಯಗೊಳಿಸಲಾಯಿತು.

ಅಲ್ಲದೆ ಇತರ  ಮೆಡಿಕಲ್‌ ಕಾಲೇಜುಗಳ ವೈದ್ಯರನ್ನು  ಕಾಸರಗೋಡಿನ ಮೆಡಿಕಲ್‌ ಕಾಲೇಜು  ಆಸ್ಪತ್ರೆಗೆ ಕಳುಹಿಸಲಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ರೋಗಿಗಳಲ್ಲಿ ಬಹುತೇಕರು ಯುವಕರಾಗಿದ್ದ  ಕಾರಣ, 100 ಪ್ರತಿಶತ ರಿಕವರಿ ಸಾಧಿಸಲು ಸಾಧ್ಯವಾಯಿತು ಎನ್ನುತ್ತಾರೆ ಜಿಲ್ಲಾ ವೈದ್ಯಾಧಿಕಾರಿಗಳು.

ನಿತ್ಯ ಬೆಳವಣಿಗೆ ದರವೂ ಅತಿ ಕಡಿಮೆ
ಮೇ 9ರ ಒಳಗೆ ಕೇರಳ ಸಹಿತ ದೇಶದ ಅನೇಕ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 500ರ ಗಡಿ ದಾಟಿತ್ತು. ಇವುಗಳಲ್ಲಿ ಕೇರಳದಲ್ಲಿ ಕೋವಿಡ್ ಪ್ರಕರಣಗಳ ನಿತ್ಯ ಬೆಳವಣಿಗೆ ದರವು ಕೇವಲ 0.1 ಪ್ರತಿಶತದಷ್ಟು ದಾಖಲಾಯಿತು.

ಇನ್ನುಳಿದಂತೆ ತಮಿಳುನಾಡು (13.2%), ಪಂಜಾಬ್‌ (12.2%), ಪಶ್ಚಿಮ ಬಂಗಾಲ (11.3%), ಹರಿಯಾಣ (8.7%), ದಿಲ್ಲಿ (7.8%), ಮಹಾರಾಷ್ಟ್ರ (7.5%), ಗುಜರಾತ್‌ (6.6%), ರಾಜಸ್ಥಾನ (4.3%), ಜಮ್ಮು ಕಾಶ್ಮೀರ (3.7%), ಕರ್ನಾಟಕ (3.3%),  ಆಂಧ್ರ (3.1%), ಉತ್ತರಪ್ರದೇಶ (3.1%), ಮಧ್ಯಪ್ರದೇಶ (3.0%), ಬಿಹಾರ (2.8%), ತೆಲಂಗಾಣದಲ್ಲಿ 1.0 ಪ್ರತಿಶತ ನಿತ್ಯ ಬೆಳವಣಿಗೆಯ ದರ ದಾಖಲಾಯಿತು.

ಹೆಚ್ಚು ಪರೀಕ್ಷೆಗಳನ್ನೂ ಮಾಡಿಲ್ಲ
ರೋಗ ಹರಡುವಿಕೆಯ ಸರಪಳಿಯನ್ನು ತುಂಡರಿಸಲು ಯಶಸ್ವಿಯಾಗಿದ್ದರಿಂದ ಕೇರಳದಲ್ಲಿ ವ್ಯಾಪಕ ಪರೀಕ್ಷೆಗಳನ್ನು ಕೈಗೊಳ್ಳುವ ಅಗತ್ಯ ಎದುರಾಗಿಲ್ಲ. ಎಪ್ರಿಲ್‌ ಅಂತ್ಯ ಹಾಗೂ ಮೇ ಆರಂಭದವರೆಗೆ ನಿತ್ಯ ಸಾವಿರಕ್ಕಿಂತಲೂ ಕಡಿಮೆ ಪರೀಕ್ಷೆಗಳನ್ನು ನಡೆಸಿದೆ!

ಕೋವಿಡ್‌-19 ಸೋಂಕಿತರ ಸಂಖ್ಯೆ 100ರ ಗಡಿ ದಾಟಿದ ಮೇಲೂ ಕೇರಳ ನಿತ್ಯ ಸರಾಸರಿ 687 ಪರೀಕ್ಷೆಗಳನ್ನಷ್ಟೇ ನಡೆಸಿತ್ತು. ಜನವರಿ 30ರಿಂದ ಮೇ 2ರ ನಡುವೆ ಅದು ಕೇವಲ ನಾಲ್ಕು ದಿನ ಮಾತ್ರ 1,000ಕ್ಕಿಂತ ಅಧಿಕ ಜನರನ್ನು ಪರೀಕ್ಷಿಸಿತ್ತು.

ಐಸೊಲೇಶನ್‌ಗೆ ಆದ್ಯತೆ
ಎಪ್ರಿಲ್‌ ಮೊದಲ ವಾರದ ವೇಳೆಗೆ, ಅಂದರೆ ಸಾಂಕ್ರಾಮಿಕವು ಹೆಚ್ಚಾಗಿದ್ದ ಸಮಯದಲ್ಲಿ ಕೇರಳ ಸರಕಾರ, ಒಬ್ಬ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾದರೆ, ಸರಾಸರಿ 550 ಮಂದಿಯನ್ನು ಕ್ವಾರಂಟೈನ್‌ಗೆ ಕಳುಹಿಸಿತ್ತು (ಸಂಭಾವ್ಯ ಸೋಂಕಿತರು).

ಪ್ರಕರಣಗಳ ಸಂಖ್ಯೆ 200 ದಾಟಿದಾಗ, ಪ್ರತಿ ಒಬ್ಬ ಸೋಂಕಿತ ಪತ್ತೆಯಾದರೆ, 550-750 ಜನರನ್ನು ಹುಡುಕಿ  ಕ್ವಾರಂಟೈನ್‌ ಮಾಡಿತು. ಈಗ ಸೋಂಕಿತರ ಸಂಖ್ಯೆ  ಬೆರಳೆಣಿಕೆಯಷ್ಟಿದ್ದರೂ ಕೂಡ, 26,000ಕ್ಕೂ ಅಧಿಕ ಜನರನ್ನು ಪ್ರತ್ಯೇಕವಾಗಿ ನಿಗಾದಲ್ಲಿಡಲಾಗಿದೆ.

ಕ್ವಾರಂಟೈನ್‌ ನಿಯಮ ಪರಿಷ್ಕರಣೆ
ಈಗ ರಾಜ್ಯಕ್ಕೆ  ಹಿಂದಿರುಗಿದ ಕೆಲವರಲ್ಲಿ ಸೋಂಕು ಪತ್ತೆಯಾಗಿರುವುದರಿಂದ, ಕೇರಳ ಸರ್ಕಾರ ಕ್ವಾರಂಟೈನ್‌ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ.

ಆರೋಗ್ಯ ಇಲಾಖೆಯ ಪ್ರಕಾರ, ಯಾರ ಮನೆಯಲ್ಲಿ ಪ್ರತೇಕ ರೂಮು ಮತ್ತು ಪ್ರತ್ಯೇಕ ಟಾಯ್ಲೆಟ್‌ – ಬಾತ್‌ರೂಂ ಸೌಲಭ್ಯವಿದೆಯೋ ಅವರು ಮಾತ್ರ ಮನೆಯಲ್ಲಿ ದಿಗ್ಬಂಧನದಲ್ಲಿರಬಹುದು.

ಪ್ರತೇಕ ರೂಮು ಮತ್ತು ಅಟ್ಯಾಚ್ಡ್ ಬಾತ್‌ರೂಂ ಇಲ್ಲದವರು ಸರ್ಕಾರಿ ಸೂಚಿತ ವ್ಯವಸ್ಥೆಯಲ್ಲಿ  ಇರಬೇಕಾಗುತ್ತದೆ. ಅನ್ಯ ರಾಜ್ಯದಿಂದ ಹಿಂದಿರುಗಿದವರು ಮನೆಯಲ್ಲೇ ಇರಲು ಬಯಸಿದರೆ,  ಆರೋಗ್ಯ ವಲಯದ ಸಿಬ್ಬಂದಿ ಹಾಗೂ ಪೊಲೀಸರನ್ನೊಳಗೊಂಡ ತಂಡವು ಮೊದಲು ಆ ಮನೆಯನ್ನು ಪರೀಕ್ಷಿಸಿ ತೀರ್ಮಾನ ಕೈಗೊಳ್ಳುತ್ತದೆ.

1. ದೇಶಾದ್ಯಂತ ಲಾಕ್‌ಡೌನ್‌ ಘೋಷಣೆಯಾಗುವುದಕ್ಕೂ ಮುನ್ನವೇ ಕೇರಳ ಸರಕಾರ ತನ್ನ ರಾಜ್ಯದಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್‌ ಘೋಷಿಸಿತ್ತು.

2. ಕೇರಳದಲ್ಲಿ ಕೋವಿಡ್ ನಿಂದಾಗಿ ಮರಣ ಪ್ರಮಾಣ ಕೇವಲ 0.59 ಪ್ರತಿಶತದಷ್ಟಿದೆ.

3. ನಿಫಾದ ವಿರುದ್ಧ ಹೋರಾಡಿದ ಅನುಭವ, ಸಮುದಾಯ ಸಹಭಾಗಿತ್ವ, ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ತ್ವರಿತವಾಗಿ ಪತ್ತೆ ಹಚ್ಚುವ ಚಾಕಚಕ್ಯತೆ ಯಶಸ್ಸಿಗೆ ಕಾರಣ.

Advertisement

Udayavani is now on Telegram. Click here to join our channel and stay updated with the latest news.

Next