Advertisement

ಕೆಂಪೇಗೌಡ ಜಯಂತಿ ಆಚರಣೆಗೆ ಅದ್ಧೂರಿ ಸಿದ್ಧತೆ

11:23 AM Jun 27, 2017 | |

ಬೆಂಗಳೂರು: ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಸರ್ಕಾರವನ್ನು ಅಭಿನಂದಿಸಿರುವ ರಾಜ್ಯ ಒಕ್ಕಲಿಗರ ಸಂಘವು ಮಂಗಳವಾರ ಕೆಂಪೇಗೌಡ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ಸಜ್ಜಾಗಿದೆ.

Advertisement

ನಗರದ ಕೆ.ಆರ್‌.ರಸ್ತೆಯಲ್ಲಿರುವ ಒಕ್ಕಲಿಗರ ಸಂಘದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಡಿ.ಎನ್‌.ಬೆಟ್ಟೇಗೌಡ, “ಕೆಂಪೇಗೌಡರ ಜಯಂತಿ ಆಚರಣೆಗೆ ನಿರ್ಧರಿಸಿರುವ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಗುವುದು.

ಸರ್ಕಾರದ ಆಚರಣೆಗೆ ಪೂರಕವಾಗಿ ಸಂಘದ ವತಿಯಿಂದಲೂ ಕಾರ್ಯಕ್ರಮ ಆಯೋಜಿಸಲಾಗಿದ್ದು ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ, ಸ್ಫಟಿಕಪುರಿ ಮಠದ ನಂಜಾವಧೂತ ಸ್ವಾಮೀಜಿ ಹಾಗೂ ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ. ಸಮುದಾಯದ ಎಲ್ಲ ಪಕ್ಷದ ನಾಯಕರೂ ಭಾಗವಹಿಸಲಿದ್ದಾರೆ ಎಂದು ಹೇಳಿದರು.

 ಕೆಂಪೇಗೌಡರ ಹುಟ್ಟೂರು ಆವತಿ ಹಾಗೂ ಅವರು ಐಕ್ಯವಾಗಿರುವ ಮಾಗಡಿ ತಾಲೂಕಿನ ಕೆಂಪಾಪುರದಿಂದ ಕೆಂಪೇಗೌಡ ಜ್ಯೋತಿ ಮೆರವಣಿಗೆ ಹೊರಡಲಿದೆ. ಆವತಿಯಿಂದ ಹೊರಡುವ ಮೆರವಣಿಗೆಗೆ ಸಚಿವರಾದ ಕೃಷ್ಣ ಬೈರೇಗೌಡ, ಎಂ.ಆರ್‌.ಸೀತಾರಾಂ ಚಾಲನೆ ನೀಡಲಿದ್ದಾರೆ.

ಈ ಮೆರವಣಿಗೆಯು ಮೇಖೀ ವೃತ್ತ ತಲುಪುತ್ತಿದ್ದಂತೆ ಶಾಸಕ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ನಟರಾದ ಜಗ್ಗೇಶ್‌, ಪುನೀತ್‌ ರಾಜ್‌ಕುಮಾರ್‌ ಇತರರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದು, ನಂತರ ಸ್ವಾತಂತ್ರ್ಯ ಉದ್ಯಾನ ತಲುಪಲಿದೆ ಎಂದು ತಿಳಿಸಿದರು.

Advertisement

ಹಾಗೆಯೇ ಕೆಂಪಾಂಬುದಿ ಕೆರೆ ಗಡಿ ಗೋಪುರದಿಂದ ಹೊರಡುವ ಮೆರವಣಿಗೆಗೆ ಕೇಂದ್ರ ಸಚಿವ ಅನಂತಕುಮಾರ್‌, ಸಚಿವ ಎಂ.ಕೃಷ್ಣಪ್ಪ ಚಾಲನೆ ನೀಡಲಿದ್ದಾರೆ. ಹಲಸೂರು ಗೋಪುರದಿಂದ ಹೊರಡು ಮೆರವಣಿಗೆಗೆ ಸಚಿವರಾದ ಕೆ.ಜೆ.ಜಾರ್ಜ್‌, ಆರ್‌.ರೋಷನ್‌ ಬೇಗ್‌, ಶಾಸಕ ಎಸ್‌.ರಘು ಹಾಗೂ ಲಾಲ್‌ಬಾಗ್‌ ಗೋಪುರದಿಂದ ಹೊರಡುವ ಮೆರವಣಿಗೆಗೆ ಸಚಿವ ರಾಮಲಿಂಗಾರೆಡ್ಡಿ, ಕೇಂದ್ರ ಸಚಿವ ಅನಂತಕುಮಾರ್‌ ಚಾಲನೆ ನೀಡುವರು.

ಪಶ್ಚಿಮ ಭಾಗದಿಂದ ಹೊರಡುವ ಮೆರವಣಿಗೆಯಲ್ಲಿ ಶಾಸಕರಾದ ಕೆ.ಗೋಪಾಲಯ್ಯ, ಎಸ್‌.ಸುರೇಶ್‌ಕುಮಾರ್‌ ಇತರರು ಪಾಲ್ಗೊಳ್ಳಲಿದ್ದಾರೆ. ಒಕ್ಕಲಿಗರ ಸಂಘದ ಕಚೇರಿಯಿಂದಲೂ ಮೆರವಣಿಗೆ ಹೊರಡಲಿದೆ ಎಂದು ಹೇಳಿದರು. ಎಲ್ಲ ಮೆರವಣಿಗೆಗಳು ಸ್ವಾತಂತ್ರ್ಯ ಉದ್ಯಾನ ತಲುಪಿ ನಂತರ ಬ್ಯಾಂಕ್ವೆಟ್‌ ಸಭಾಂಗಣದ ಕಡೆಗೆ ತೆರಳಲಿವೆ.

ಮೆರವಣಿಗೆಯಲ್ಲಿ 50,000 ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಹಾಗೆಯೇ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಅದೇ ರೀತಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲೂ ಜಯಂತಿ ಆಚರಣೆ ನಡೆಯಲಿದೆ. ಕೆಂಪೇಗೌಡರ ಮೂಲಸ್ಥಳವಾದ ತಮಿಳುನಾಡಿನ ಅಂಕುಶಗಿರಿಯಲ್ಲೂ ಕೆಂಪೇಗೌಡ ಜಯಂತಿ ನಡೆಯಲಿದೆ ಎಂದು ತಿಳಿಸಿದರು.

ಸಂಘದ ವಿವಿಧ ಬೇಡಿಕೆಗಳು: ಏಷ್ಯಾ ಖಂಡದಲ್ಲೇ ಅತಿ ದೊಡ್ಡ ವಿಶ್ವವಿದ್ಯಾಲಯ ಎಂಬ ಖ್ಯಾತಿಯ ಬೆಂಗಳೂರು ವಿಶ್ವವಿದ್ಯಾಲಯವನ್ನು ಮೂರು ವಿವಿಯಾಗಿ ವಿಭಜಿಸಲು ಸರ್ಕಾರ ಮುಂದಾಗಿದ್ದು, ಈ ಪೈಕಿ ಕೇಂದ್ರ ವಿವಿಗೆ ಕೆಂಪೇಗೌಡರ ಹೆಸರು ನಾಮಕರಣ ಮಾಡಬೇಕು. ಕೆಂಪೇಗೌಡರ ಜಯಂತಿಗೆ ಸರ್ಕಾರಿ ರಜೆ ಘೋಷಣೆ ಮಾಡಬೇಕು ಎಂಬುದು ಸೇರಿ ಹಲವು ಬೇಡಿಕೆಗಳ ಬಗ್ಗೆಯೂ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಬೆಟ್ಟೇಗೌಡ ಹೇಳಿದರು. ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next