Advertisement

ರಸ್ತೆ ನಿಯಮ ಪಾಲನೆಗೆ ವಿದ್ಯಾರ್ಥಿಗಳು ಜಾಗೃತರಾಗಿ

10:10 PM Nov 08, 2019 | Lakshmi GovindaRaju |

ಚಾಮರಾಜನಗರ: ರಸ್ತೆ ಸುರಕ್ಷತೆ ಮತ್ತು ನಿಯಮಗಳನ್ನು ಪಾಲನೆ ಮಾಡಿದರೆ, ಅಪಘಾತ ಹಾಗೂ ಇನ್ನಿತರ ಹಾನಿಗಳನ್ನು ತಡೆಗಟ್ಟಲು ಸಾಧ್ಯವಿದೆ. ಮೊದಲು ವಿದ್ಯಾರ್ಥಿಗಳು ಜಾಗೃತರಾಗಿ ಎಂದು ಡಿವೈಎಸ್‌ಪಿ ಜೆ. ಮೋಹನ್‌ ತಿಳಿಸಿದರು.

Advertisement

ನಗರದ ಜೆಎಸ್‌ಎಸ್‌ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ರಸ್ತೆ ಸುರಕ್ಷತೆ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ಮಾತನಾಡಿ, ರಸ್ತೆ ಸುರಕ್ಷತೆ ಬಗ್ಗೆ ಇರುವ ನಿಯಮಗಳನ್ನು ಪಾಲನೆ ಮಾಡಿದರೆ ಬಹಳಷ್ಟು ಅಪಘಾತಗಳನ್ನು ತಡೆಗಟ್ಟಲು ಸಾಧ್ಯವಿದೆ. ಅಲ್ಲದೆ, ಎಲ್ಲರೂ ರಸ್ತೆಯ ನಿಯಮಗಳ ಬಗ್ಗೆ ಅರಿವು ಹೊಂದಿ ವಾಹನ ಚಾಲನೆ ಮಾಡಬೇಕು ಎಂದರು.

ವಾಹನ ಚಾಲನೆಗೆ ದಾಖಲಾತಿ ಹೊಂದಿ: ವಾಹನಗಳನ್ನು ಓಡಿಸುವ ಮುನ್ನ ವಾಹನ ಪರವಾನಗಿ, ವಾಹನ ವಿಮೆ, ದಾಖಲಾತಿಗಳನ್ನು ಹೊಂದಿರಬೇಕು. ಅಲ್ಲದೆ, ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು. ಸಂಚಾರ ನಿಯಮಗಳನ್ನು ಪಾಲನೆ ಮಾಡುವುದರಿಂದ ಹೆಚ್ಚಿನ ಅನುಕೂಲವಾಗುತ್ತದೆ. ಅಮೂಲ್ಯವಾದ ಜೀವಗಳನ್ನು ಉಳಿಸಲು ಸಾಧ್ಯವಿದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ರಸ್ತೆಗಳಲ್ಲಿ ಹೆಚ್ಚಿನ ವಾಹನಗಳ ಸಂಚಾರದಿಂದ ಅಪಘಾತಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಲು ರಸ್ತೆ ಸುರಕ್ಷತೆ ನಿಯಮಗಳನ್ನು ಪಾಲನೆ ಮಾಡುವುದು ಮುಖ್ಯ. ಈ ಹಿನ್ನೆಲೆಯಲ್ಲಿ ಶಾಲಾ ಕಾಲೇಜು ಹಂತದಿಂದಲೇ ರಸ್ತೆ ಸುರಕ್ಷತೆ ನಿಯಮಗಳ ಬಗ್ಗೆ ತಿಳುವಳಿಕೆ ಮೂಡಿಸಿದರೆ ಹೆಚ್ಚು ಸಹಕಾರಿಯಾಗುತ್ತದೆ ಎಂದರು.

ಕಾಯ್ದೆ ಕಟ್ಟುನಿಟ್ಟಾಗಿ ಜಾರಿ: ಪಾದಚಾರಿಗಳು ಸಹ ರಸ್ತೆ ದಾಟುವಾಗ ವಾಹನಗಳು ಬರುತ್ತಿರುವುದನ್ನು ನೋಡಿ, ಸಿಗ್ನಲ್‌ಗ‌ಳನ್ನು ಗಮನಿಸಿ, ಮುನ್ನುಗ್ಗಬೇಕು. ವಿದ್ಯಾರ್ಥಿಗಳು 18 ವರ್ಷ ತುಂಬಿದ ಬಳಿಕ ವಾಹನ ಚಾಲನೆ ಪರವಾನಗಿ ಪಡೆದು, ಸವಾರಿ ಮಾಡುವುದು ಒಳಿತು.

Advertisement

ಅಪ್ರಾಪ್ತ ವಯಸ್ಸಿನವರು ವಾಹನ ಚಾಲನೆ ಮಾಡಿ, ಅಪಘಾತ ಮಾಡಿದರೆ, 25 ಸಾವಿರ ರೂ. ದಂಡ ಹಾಗು ಜೈಲು ವಾಸ ಅನುಭವಿಸಬೇಕಾಗುತ್ತದೆ. ವಾಹನ ಸುರಕ್ಷತೆ ಕಾಯ್ದೆಯನ್ನು ಬಹಳ ಕಟ್ಟುನಿಟ್ಟಾಗಿ ಜಾರಿ ಮಾಡಿದೆ. ದಂಡವನು ಸಹ ಹೆಚ್ಚಳ ಮಾಡಿ, ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ ರಸ್ತೆ ಸುರಕ್ಷತೆಗೆ ಹೆಚ್ಚಿನ ಅದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಜೀವ ಉಳಿಸಲು ಎಲ್ಲರೂ ಮುಂದಾಗಿ: ಜೆಎಸ್‌ಎಸ್‌ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್‌. ಎಂ.ಸ್ವಾಮಿ ಮಾತನಾಡಿ, ರಸ್ತೆ ಸುರಕ್ಷತೆ ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ ಮೂಲಕ ಅಮೂಲ್ಯ ಜೀವವನ್ನು ಉಳಿಸಲು ಎಲ್ಲರೂ ಮುಂದಾಗಬೇಕು. ಕಾಲೇಜಿಗೆ ಬರುವಾಗ ರಸ್ತೆ ನಿಯಮಗಳನ್ನು ಪಾಲನೆ ಮಾಡಬೇಕು. ರಸ್ತೆಯಲ್ಲಿ ನಡೆಯದೇ ಪಾದಚಾರಿ ಪಥದಲ್ಲೇ ನಡೆದುಕೊಂಡು ಬರುವುದನ್ನು ರೂಢಿಸಿಕೊಳ್ಳಿ.

ತಂದೆ- ತಾಯಿ ಹಾಗೂ ಅಕ್ಕಪಕ್ಕದ ಮನೆಯವರಿಗೂ ಸಹ ರಸ್ತೆ ನಿಯಮಗಳ ಬಗ್ಗೆ ತಿಳಿಸಿ, ಜಾಗೃತಿ ಮೂಡಿಸಬೇಕು. ವಿದ್ಯಾರ್ಥಿಗಳಾದ ನೀವು ಬದಲಾವಣೆಯನ್ನು ಮಾಡಲು ಸಾಧ್ಯವಿದೆ ಎಂದರು. ಕಾರ್ಯಕ್ರಮದಲ್ಲಿ ಸಂಚಾರ ಪೊಲೀಸ್‌ ಠಾಣೆಯ ಪಿಎಸ್‌ಐ ಪುಷ್ಪಲತಾ, ರಾಜನಾಯಕ, ಶಿವಮಂಜು ಅವರು ರಸ್ತೆ ಸುರಕ್ಷತೆ ಮತ್ತು ನಿಯಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಅರಿವು ಮೂಡಿಸಿದರು. ಎನ್‌ಎಸ್‌ಎಸ್‌ ಶಿಬಿರಾಧಿಕಾರಿ ಪ್ರಮೀಳಾ, ಉಪನ್ಯಾಸಕರಾದ ಎಚ್‌.ಎಸ್‌. ವೀರೇಶ್‌, ಎಸ್‌.ಅಂಬಿಕಾದೇವಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next