Advertisement

ಇಂದು 2ನೇ ಬಾರಿಗೆ ಕೆಸಿಆರ್‌ ಪ್ರಮಾಣ

06:00 AM Dec 13, 2018 | |

ಹೈದರಾಬಾದ್‌: ತೆಲಂಗಾಣದಲ್ಲಿ ಭಾರೀ ಜನ ಬೆಂಬಲದೊಂದಿಗೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಟಿಆರ್‌ಎಸ್‌ಗೆ ಕೆ.ಚಂದ್ರಶೇಖರ್‌ ರಾವ್‌ ಅವರೇ ಪ್ರಶ್ನಾತೀತ ನಾಯಕ. ಈಗ ಎರಡನೇ ಬಾರಿಗೆ ಮುಖ್ಯ ಮಂತ್ರಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗಿದ್ದಾರೆ. ರಾಜ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ರಾಜ್ಯಪಾಲ ಇಎಸ್‌ಎಲ್‌ ನರಸಿಂಹನ್‌ ಪ್ರಮಾಣ ಬೋಧಿಸಲಿದ್ದಾರೆ. ಇದೇ ವೇಳೆ ಕೆಲವು ಶಾಸಕರೂ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳಿವೆ. ಸಿದ್ದಿ ಪೇಟ್‌ ಜಿಲ್ಲೆಯ ಗಾಜ್ವೆಲ್‌ ಕ್ಷೇತ್ರದಿಂದ 58,290 ಮತಗಳ ಅಂತರದಿಂದ ಮಗ ದೊಮ್ಮೆ ವಿಧಾನಸಭೆ ಪ್ರವೇಶಿಸಿರುವ ರಾವ್‌, ಬುಧವಾರ ನಡೆದ ಶಾಸಕಾಂಗ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. 119 ಸ್ಥಾನಗಳಲ್ಲಿ 88 ಸ್ಥಾನಗಳನ್ನು ತೆಕ್ಕೆಗೆ ಹಾಕಿಕೊಂಡಿರುವ ಟಿಆರ್‌ಎಸ್‌ಗೆ ವಿಧಾನಸಭೆಯಲ್ಲಿ ಆನೆ ಬಲ. ಊಹಿಸಿಕೊಳ್ಳಲಿಕ್ಕೂ ಆಗದ ರೀತಿಯಲ್ಲಿ ಜಯಭೇರಿ ಭಾರಿಸಿದೆ. 

Advertisement

ಸೋತ ಆಘಾತದಿಂದ ಆಸ್ಪತ್ರೆಗೆ ದಾಖಲು
ಜಯದ ಕನಸು ಕಂಡು ಸೋಲುಕಂಡ ಎರಡು ಕ್ಷೇತ್ರದ ಪ್ರಮುಖ ಅಭ್ಯರ್ಥಿಗಳು ಆಘಾತಕ್ಕೊಳಗಾಗಿ ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಲಗೋಂಡ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೊಮಾಟಿರೆಡ್ಡಿ ವೆಂಕಟ್‌ ರೆಡ್ಡಿ ಹಾಗೂ ಪಲೈರ್‌ ಕ್ಷೇತ್ರದ ಟಿಆರ್‌ಎಸ್‌ ಅಭ್ಯರ್ಥಿ ತುಮ್ಮಳ ನಾಗೇಶ್ವರ ರಾವ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ನಾಯಕರು ಎದೆಯಲ್ಲಿ ಸಣ್ಣ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.

ರಾಜ್ಯ ರಚನೆಯ ರೂವಾರಿಗೆ ಮನ್ನಣೆ 
2014ರಲ್ಲಿ ಆಂಧ್ರಪ್ರದೇಶದಿಂದ ಬೇರ್ಪಟ್ಟ ಬಳಿಕ ತೆಲಂಗಾಣ ರಾಜ್ಯದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ. ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಸಂಸ್ಥಾಪಕರೂ ಹೌದು. ಇದಕ್ಕೂ ಮೊದಲು ಇದೇ ಕ್ಷೇತ್ರದಿಂದ ಆಂಧ್ರಪ್ರದೇಶ ವಿಧಾನಸಭೆ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಮೇದಕ್‌ ಕ್ಷೇತ್ರದಿಂದ ಒಮ್ಮೆ ಲೋಕಸೌಭಾ ಸದಸ್ಯರಾಗಿಯೂ ಆಯ್ಕೆಯಾಗಿದ್ದರು. ಆರಂಭದಲ್ಲಿ ಮೇದಕ್‌ನ ಯೂತ್‌ ಕಾಂಗ್ರೆಸ್‌ಗೆ ಸೇರ್ಪಡೆಗೊಂಡು, ಬಳಿಕ ಎನ್‌.ರಾಮ್‌ ರಾವ್‌ ಅವರ ಕಾಲದಲ್ಲಿ ತೆಲಗುದೇಶಂ ಪಕ್ಷಕ್ಕೆ ಸೇರಿಕೊಂಡಿದ್ದರು. ರಾವ್‌ ಹೈದರಾಬಾದ್‌ ವಿವಿಯ ಎಂಎ ಪದವೀಧರರಾಗಿದ್ದಾರೆ.

ಹಕ್ಕು ಮಂಡಿಸಿದ ಕಾಂಗ್ರೆಸ್‌
ಜೈಪುರದಲ್ಲಿ ಕಾಂಗ್ರೆಸ್‌ ನಾಯಕ ಕೆ.ಸಿ.ವೇಣುಗೋಪಾಲ್‌ ನೇತೃತ್ವದಲ್ಲಿ ನೂತನ ಶಾಸಕರ ಸಭೆ ನಡೆಯಿತು. ಈ ಸಂದರ್ಭದಲ್ಲಿ 
ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿಯವರಿಗೆ ಶಾಸಕಾಂಗ ಪಕ್ಷದ ನಾಯಕ ಆಯ್ಕೆಯ ಹೊಣೆಯನ್ನು ವಹಿಸಲಾಯಿತು. ಇದಾದ ಕೂಡಲೇ ಕಾಂಗ್ರೆಸ್‌ ನಾಯಕರು ರಾಜ್ಯಪಾಲ ಕಲ್ಯಾಣ್‌ ಸಿಂಗ್‌ ಅವರನ್ನು ಭೇಟಿಯಾಗಿ ಸರ್ಕಾರ ರಚಿಸುವ ಬಗ್ಗೆ ಹಕ್ಕು ಮಂಡಿಸಲಾಗಿದೆ. ಕಾಂಗ್ರೆಸ್‌ 99, ಬಿಜೆಪಿ 73, ಬಿಎಸ್‌ಪಿ 6, ಸಿಪಿಎಂ 2, ಆರ್‌ಎಲ್‌ಡಿ 1, ಪಕ್ಷೇತರರು 13, ಸ್ವತಂತ್ರ 6 ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ.

ಅಶೋಕ್‌ ಗೆಲ್ಹೋಟ್‌
ಅಶೋಕ್‌ ಗೆಲ್ಹೋಟ್‌, ರಾಜಸ್ಥಾನ ಕಾಂಗ್ರೆಸ್‌ನ ಹಿರಿಯ ಮುಖಂಡ, ರಾಷ್ಟ್ರ ರಾಜಕಾರಣದಲ್ಲೂ ಅನುಭವ ಹೊಂದಿರುವ ರಾಜಕಾರಣಿ. ಜೋದು³ರದವರಾದ ಗೆಲ್ಹೋಟ್‌, ಐದು ಬಾರಿ ಲೋಕಸಭೆ ಪ್ರವೇಶಿಸಿ ವಿವಿಧ ಇಲಾಖೆಗಳಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಅಷ್ಟೇ ಅಲ್ಲ, ಎರಡು ಬಾರಿ ರಾಜಸ್ಥಾನ ಮುಖ್ಯಮಂತ್ರಿಯೂ ಆಗಿದ್ದರು. 

Advertisement

ಯುವ ನಾಯಕ ಸಚಿನ್‌ ಪೈಲಟ್‌
ಸಚಿನ್‌ ಪೈಲಟ್‌, ಕಾಂಗ್ರೆಸ್‌ನ 40ರ ಆಸುಪಾಸಿನಲ್ಲಿರುವ ಯುವ ನಾಯಕ. ರಾಹುಲ್‌ ಗಾಂಧಿ ಅವರ ಆಪ್ತರಲ್ಲಿ ಒಬ್ಬರು. ಮೂಲತಃ ಉತ್ತರ ಪ್ರದೇಶದವರಾದರೂ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದು ರಾಜಸ್ಥಾನದಲ್ಲಿ. ಹಿರಿಯ ರಾಜಕಾರಣಿ ರಾಜೇಶ್‌ ಪೈಲಟ್‌ ಅವರ ಪುತ್ರ. 2009ರಲ್ಲಿ ಅಜ್ಮಿರ್‌ ಕ್ಷೇತ್ರದಿಂದ ಮೊದಲ ಬಾರಿಗೆ ಲೋಕಸಭಾ ಅಭ್ಯರ್ಥಿಯಾಗಿ, 2014ರಲ್ಲಿ ಮತ್ತೂಮ್ಮೆ ಲೋಕಸಭೆಗೆ ಆಯ್ಕೆಯಾಗಿ ಕಾಂಗ್ರೆಸ್‌ ಪಾಳಯದಲ್ಲಿ ಚಿರಪರಿಚಿತರಾಗಿದ್ದಾರೆ. ಅಷ್ಟೇ ಅಲ್ಲ 2012ರಲ್ಲಿ ಕೇಂದ್ರ ವಿಮಾನಯಾನ ಖಾತೆ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next