ಕೋಲಾರ: ನಗರಕ್ಕೆ ಕುಡಿಯುವ ನೀರಿಗೆ ಮೀಸಲಾಗಿದ್ದ ಅಮ್ಮೇರಹಳ್ಳಿ ಕೆರೆಗೆ ಕೆ.ಸಿ. ವ್ಯಾಲಿ ನೀರು ಹರಿದು ಬರುತ್ತಿದ್ದು, ನೇರವಾಗಿ ಕೊಳವೆ ಬಾವಿಗಳ ಮೂಲಕ ಅಂತರ್ಜಲ ಕಲುಷಿತಗೊಳ್ಳುವ ಭೀತಿ ಎದುರಾಗಿದೆ. ಅಮ್ಮೇರಹಳ್ಳಿ ಹಾಗೂ ಕೊಂಡರಾಜನಹಳ್ಳಿ ಯ ಗ್ರಾಮಸ್ಥರು ಜಿಲ್ಲಾಡಳಿತದ ಮೇಲೆ ಒತ್ತಡ ಹೇರುವ ಮೂಲಕ ಕುಡಿಯುವ ನೀರಿಗೆ ಮೀಸಲಾಗಿದ್ದ ಅಮ್ಮೇರಹಳ್ಳಿ ಕೆರೆಗೆ ಕೆ.ಸಿ. ವ್ಯಾಲಿ ನೀರು ಹರಿದು ಬರುವಂತೆ ಮಾಡುವಲ್ಲಿ ಸಫಲವಾಗಿದ್ದರು.
ಒಂದು ವಾರದಿಂದಲೂ ಕೆ.ಸಿ. ವ್ಯಾಲಿ ನೀರು ಅಮ್ಮೇರಹಳ್ಳಿ ಕೆರೆ ನೀರು ಹರಿದು ಬರು ತ್ತಿದ್ದು, ಮಡೇರಹಳ್ಳಿ ಹಾಗೂ ಅಮ್ಮೇರಹಳ್ಳಿ ಕೆರೆ ಅಂಗಳದಲ್ಲಿ ಕೋಲಾರ ನಗರಸಭೆ ನೀರು ಸರಬರಾಜು ಮಾಡಲು 80ಕ್ಕೂ ಹೆಚ್ಚು ಕೊಳವೆಬಾವಿ ಕೊರೆದಿತ್ತು. ಕೆಲವು ಕೊಳವೆ ಬಾವಿಗಳು ಬತ್ತಿ ಹೋಗಿದ್ದವು, ಕೆಲವು ಬೋರ್‌ಗಳಲ್ಲಿ ನೀರು ಲಭ್ಯವಾಗುತ್ತಿತ್ತು.
ಅಂತರ್ಜಲ ಕಲುಷಿತ: ಇದೀಗ ಈ ಕೆರೆಗಳಿಗೆ ಕೆ.ಸಿ. ವ್ಯಾಲಿ ನೀರು ಹರಿದು ಬರುತ್ತಿದ್ದು, ಬಹುತೇಕ ಕೊಳವೆ ಬಾವಿಗಳಿಗೆ ನಗರಸಭೆ ಮುಚ್ಚಳ ಹಾಕದೇ ಬಿಟ್ಟಿದೆ. ಇದರಿಂದ ಕೆ.ಸಿ. ವ್ಯಾಲಿ ನೀರು ನೇರವಾಗಿ ಈ ಕೊಳವೆ ಬಾವಿಗಳ ಮೂಲಕ ಸಾವಿರಾರು ಅಡಿ ಆಳದ ಅಂತರ್ಜಲ ಭೂಗರ್ಭಕ್ಕೆ ನೇರವಾಗಿ ತಲುಪಲಿದೆ. ಇದರಿಂದ ಅಂತರ್ಜಲ ಕಲುಷಿತವಾಗುವ ಭೀತಿ ಎದುರಾಗಿದೆ.
ಆರೋಗ್ಯದ ಮೇಲೆ ಪರಿಣಾಮ: ಇತ್ತೀಚಿಗೆ ಜಿಲ್ಲೆಗೆ ಆಗಮಿಸಿದ್ದ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿಗೂ ನಗರಸಭಾ ಸದಸ್ಯ ಮುರಳೀಗೌಡ ಕೊಳವೆ ಬಾವಿಗಳಿಗೆ ಮುಚ್ಚಳ ಮನವಿ ಸಲ್ಲಿಸಿದ್ದರು. ಆದರೆ, ಈ ಬಗ್ಗೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಅಮ್ಮೇರಹಳ್ಳಿ ಹಾಗೂ ಕೊಂಡರಾಜನ ಹಳ್ಳಿ ಮತ್ತು ಈ ನೀರಿನ ಮೇಲೆ ಅವಲಂಬಿತ ವಾಗಿರುವ ನಗರದ ವಿವಿಧ ವಾರ್ಡ್‌ಗಳ ಜನತೆಯ ಆರೋಗ್ಯದ ಮೇಲೆ ಪರಿಣಾಮ ಬೀರುವ ಆತಂಕಕ್ಕೂ ಕಾರಣವಾಗಿದೆ.
ಆದ್ದರಿಂದ ಕೂಡಲೇ ನಗರಸಭೆ ಮಡೇರಹಳ್ಳಿ ಹಾಗೂ ಅಮ್ಮೇರಹಳ್ಳಿ ಮತ್ತು ಮುಂದಿನ ದಿನಗಳಲ್ಲಿ ಕೆಸಿ ವ್ಯಾಲಿ ನೀರು ಹರಿಯಲಿರುವ ಕೋಲಾರಮ್ಮ ಕೆರೆ ಅಂಗಳದ ಕೊಳವೆ ಬಾವಿಗಳಿಗೆ ಮುಚ್ಚಳ ಹಾಕುವ ಮೂಲಕ ಅಂತರ್ಜಲ ಕಲುಷಿತವಾಗದಂತೆ ಎಚ್ಚರವಹಿಸಬೇಕೆಂದು ಜನತೆ ಒತ್ತಾಯಿಸುತ್ತಿದ್ದಾರೆ.
ಮಡೇರಹಳ್ಳಿ, ಅಮ್ಮೇರಹಳ್ಳಿ ಕೆರೆ ಅಂಗಳದಲ್ಲಿ ನಗರಸಭೆಯಿಂದ 80ಕ್ಕೂ ಹೆಚ್ಚು ಕೊಳವೆ ಬಾವಿ ಕೊರೆಯಲಾಗಿದೆ. ಎಲ್ಲದಕ್ಕೂ ಮುಚ್ಚಳ ಹಾಕಲು 50 ಲಕ್ಷ ರೂ. ಅಗತ್ಯವಿದೆ. ಟೆಂಡರ್ ಕರೆಯಲು ಸೂಕ್ತ ಕ್ರಮ ವಹಿಸಲಾಗುತ್ತಿದೆ.
-ಶ್ರೀಕಾಂತ್, ಪೌರಾಯುಕ್ತ, ನಗರಸಭೆ
ಅಮ್ಮೇರಹಳ್ಳಿ ಕೆರೆಗೆ ಶೇ.20 ಕೆ.ಸಿ. ವ್ಯಾಲಿ ನೀರು ಹರಿದು ಬಂದಿದೆ. ಕೆಲವೇ ದಿನಗಳಲ್ಲಿ ಕೆರೆ ತುಂಬಲಿದೆ. ನೀರು ನೇರವಾಗಿ ಕೊಳವೆ ಬಾವಿ ಮೂಲಕ ಅಂತರ್ಜಲ ಸೇರುವ ಅಪಾಯವಿದೆ.
-ರೈತ ಚಲಪತಿ, ಅಮ್ಮೇರಹಳ್ಳಿ
* ಕೆ.ಎಸ್.ಗಣೇಶ್